ADVERTISEMENT

ಒತ್ತಡಕ್ಕೆ ಮಣಿದು ತಾತ್ಕಾಲಿಕ ಸ್ಥಗಿತ

ವೆಂಕಟೇಶ್ ಜಿ.ಎಚ್
Published 25 ಏಪ್ರಿಲ್ 2019, 20:45 IST
Last Updated 25 ಏಪ್ರಿಲ್ 2019, 20:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಾಗಲಕೋಟೆ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಾಮೂಹಿಕ ನಕಲು ಆರೋಪ ಕೇಳಿಬಂದ ಕಾರಣ ಧಾರವಾಡ ವಿಭಾಗದ ಎಲ್ಲ ಜಿಲ್ಲೆಗಳ ಪರೀಕ್ಷಾ ಕೇಂದ್ರಗಳಲ್ಲಿನ ಸಿ.ಸಿ ಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ ಕಾರ್ಯವನ್ನುಶಿಕ್ಷಣ ಇಲಾಖೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

ಇಲಾಖೆಯ ಧಾರವಾಡ ವಿಭಾಗದ ಹೆಚ್ಚುವರಿ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಈ ಸಂಬಂಧ ಗುರುವಾರ ಆದೇಶ ಹೊರಡಿಸಿದ್ದಾರೆ. ದಿಢೀರನೇ ತೆಗೆದುಕೊಂಡ ಈ ತೀರ್ಮಾನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿದೆ.

ಬಾಗಲಕೋಟೆ ಸೇರಿದಂತೆ ಎಂಟು ಜಿಲ್ಲೆಗಳ ವ್ಯಾಪ್ತಿಯ 669 ಪರೀಕ್ಷಾ ಕೇಂದ್ರಗಳಲ್ಲಿನ ಸಿ.ಸಿ.ಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆಗೆ ತಂದು ಕೊಡುವಂತೆ ಮಾರ್ಚ್ 30ರಂದು ಹೆಚ್ಚುವರಿ ಆಯುಕ್ತರು ಆದೇಶ ಹೊರಡಿಸಿದ್ದರು. ಅದರಂತೆ ಏಪ್ರಿಲ್ 26ರಿಂದ ದೃಶ್ಯಾವಳಿ ಪರಿಶೀಲನೆ ಆರಂಭವಾಗಬೇಕಿತ್ತು.

ADVERTISEMENT

ಪರೀಕ್ಷಾ ಕೇಂದ್ರಗಳಲ್ಲಿನ ಸಿ.ಸಿ. ಟಿವಿ ಕ್ಯಾಮೆರಾ ಬಂದ್ ಮಾಡಿಸಿ ಸಾಮೂಹಿಕ ನಕಲು ಮಾಡಿಸುವುದು ಹಾಗೂ ಅದಕ್ಕೆ ಆಕ್ಷೇಪ ವ್ಯಕ್ತಪಡಿಸುವ ಶಿಕ್ಷಕರಿಗೆ ಪೋಷಕರಿಂದ ಬೆದರಿಕೆ ಹಾಕಿಸಿರುವ ಬಗ್ಗೆ ‘ಪ್ರಜಾವಾಣಿ’ ಮಾರ್ಚ್ 28ರಂದು ‘ಎಸ್‌ಎಸ್‌ಎಲ್‌ಸಿ ಪರೀಕ್ಷೆ; ನಕಲು ಅಬಾಧಿತ’ ವಿಶೇಷ ವರದಿ ಪ್ರಕಟಿಸಿತ್ತು.

ಮರುದಿನ ಜಿಲ್ಲೆಯ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಸಿದ್ದಲಿಂಗಯ್ಯ ಹಿರೇಮಠ ಭೇಟಿ ನೀಡಿ ಪರಿಶೀಲಿಸಿದ್ದರು. ನಂತರ ಸಿ.ಸಿ. ಟಿವಿ ಕ್ಯಾಮೆರಾ ದೃಶ್ಯಾವಳಿ ಹಾಜರುಪಡಿಸುವಂತೆ ಸುತ್ತೋಲೆ ಹೊರಡಿಸಿದ್ದರು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್, ಏ.13 ಹಾಗೂ 14ರಂದು ಜಿಲ್ಲೆಗೆ ಬಂದು ಸಭೆ ನಡೆಸಿದ್ದರು.

ವೇಳಾಪಟ್ಟಿ ಹಾಕಿದ್ದರು: ಏಪ್ರಿಲ್ 26 ಹಾಗೂ 27ರಂದು ಬಾಗಲಕೋಟೆ ಜಿಲ್ಲೆ ವ್ಯಾಪ್ತಿಯ 96 ಪರೀಕ್ಷಾ ಕೇಂದ್ರಗಳು, ಏಪ್ರಿಲ್ 29ರಿಂದ ಮೇ 18ರವರೆಗೆ ಉಳಿದ ಜಿಲ್ಲೆಗಳಲ್ಲಿನ ಪರೀಕ್ಷಾ ಕೇಂದ್ರಗಳ ಸಿ.ಸಿ.ಟಿವಿ ದೃಶ್ಯಾವಳಿ ಪರಿಶೀಲನೆ ನಡೆಯುವುದಿತ್ತು.ಅದಕ್ಕೆ ಧಾರವಾಡದ ಆಯುಕ್ತರ ಕಚೇರಿಯಲ್ಲಿ ಕೌಂಟರ್ ವ್ಯವಸ್ಥೆ ಮಾಡಲಾಗಿತ್ತು.

ಒಂದೇ ತಕ್ಕಡಿಯಲ್ಲಿ ತೂಗುವುದಲ್ಲ
‘ಪ್ರಾಮಾಣಿಕವಾಗಿ ಪರೀಕ್ಷೆ ನಡೆಸಿದವರಿಗೆ ಅಪಮಾನವಾಗಲಿದೆ ಎಂಬ ಕಾರಣಕ್ಕೆ ಧಾರವಾಡ ವಿಭಾಗದ ಎಲ್ಲ ಜಿಲ್ಲೆಗಳಲ್ಲಿನ ಪರೀಕ್ಷಾ ಕೇಂದ್ರಗಳ ಸಿ.ಸಿ. ಟಿವಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ ಕಾರ್ಯ ಸ್ಥಗಿತಗೊಳಿಸಲು ನಾನೇ ಆಯುಕ್ತರಿಗೆ ಹೇಳಿದ್ದೇನೆ’ ಎಂದು ಬಸವರಾಜ ಹೊರಟ್ಟಿ ತಿಳಿಸಿದರು.

‘ಮೇಜರ್ ಸಿದ್ದಲಿಂಗಯ್ಯ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಅಕ್ರಮ ನಡೆದಿದ್ದರೆ ಕ್ರಮ ಕೈಗೊಳ್ಳಲಿ. ಅದಕ್ಕೆ ನನ್ನ ಬೆಂಬಲವಿದೆ. ಆದರೆ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗುವುದು ಸಲ್ಲ’ ಎಂದರು.

*
ಎಲ್ಲ ಪರೀಕ್ಷಾ ಕೇಂದ್ರಗಳ ದೃಶ್ಯಾವಳಿ ಪರಿಶೀಲನೆಗೆ ಹೆಚ್ಚು ಸಮಯ ಬೇಕಾಗಲಿದೆ. ಹಾಗಾಗಿ ಆದೇಶ ಮಾರ್ಪಾಡು ಮಾಡಿದ್ದೇನೆ. ಒತ್ತಡಕ್ಕೆ ಮಣಿಯುವ ಪ್ರಶ್ನೆಯೇ ಇಲ್ಲ.
–ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ಹೆಚ್ಚುವರಿ ಆಯುಕ್ತರು, ಶಿಕ್ಷಣ ಇಲಾಖೆ

*
ನಾನು ಯಾವುದೇ ಸಂದೇಶ ಹರಿಬಿಟ್ಟಿಲ್ಲ. ನನ್ನ ಹೆಸರಲ್ಲಿ ಯಾರೋ ಮಾಡಿದ್ದಾರೆ. ನಕಲು ತಡೆಗೆ ಆಯುಕ್ತರು ಕೈಗೊಳ್ಳುವ ಎಲ್ಲ ಕ್ರಮಗಳಿಗೂ ಬೆಂಬಲವಾಗಿ ನಿಲ್ಲುತ್ತೇನೆ.
–ಜಿ.ಆರ್.ಭಟ್, ಪ್ರಧಾನ ಕಾರ್ಯದರ್ಶಿ, ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.