ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯ ಉತ್ತರಪತ್ರಿಕೆಯ ಮರುಮೌಲ್ಯಮಾಪನ ಮತ್ತು ಅಂಕಗಳ ಮರು ಎಣಿಕೆ ಫಲಿತಾಂಶವನ್ನು ಕೇವಲ ಮೂರು ದಿನಗಳಲ್ಲಿ ನೀಡಲು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಉದ್ದೇಶಿಸಿದೆ.
ಫಲಿತಾಂಶ ಪ್ರಕಟವಾದ ದಿನ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ವಿವರಗಳನ್ನು ಇಲಾಖೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಿದೆ. ಈ ಮೊದಲು ಮರುಮೌಲ್ಯಮಾಪನ ಮತ್ತು ಮರುಎಣಿಕೆಯ ಫಲಿತಾಂಶ ಪಡೆಯಲು ಹಲವು ದಿನ ಬೇಕಾಗುತ್ತಿತ್ತು. ಈ ವಿಳಂಬ ತಪ್ಪಿಸುವ ಪ್ರಯತ್ನಗಳನ್ನು ಮಂಡಳಿ ಕೈಗೊಂಡಿದೆ.
ಮಂಡಳಿಯ ವೆಬ್‌ಸೈಟ್‌ನಲ್ಲಿ ವಿದ್ಯಾರ್ಥಿಗಳು ಕೋರಿಕೆ ಸಲ್ಲಿಸುವ ಮೂಲಕ ಫಲಿತಾಂಶ ಪಡೆದುಕೊಳ್ಳಬಹುದು. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ನಮೂದಿಸುವ ಮೊಬೈಲ್ ನಂಬರ್‌ಗೆ ನೋಂದಣಿ ಸಂಖ್ಯೆ ಮತ್ತು ಒಟಿಪಿ ಕಳುಹಿಸಲಾಗುತ್ತದೆ. ಜತೆಗೆ ಲಾಗಿನ್ ಐಡಿ ಸೃಷ್ಟಿಸಲಾಗುತ್ತದೆ. ನಂತರ, ವಿದ್ಯಾರ್ಥಿಗಳು ನಿಗದಿಪಡಿಸಿದ ಶುಲ್ಕವನ್ನು ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ಪಾವತಿಸಬೇಕು. ಬಳಿಕ, ಮಂಡಳಿಯು ವಿವರಗಳನ್ನು ಅಪ್‌ಲೋಡ್ ಮಾಡಿದ ಬಳಿಕ ವಿದ್ಯಾರ್ಥಿಗಳು ನೋಂದಣಿ ಸಂಖ್ಯೆ ಮತ್ತು ಒಟಿಪಿ ಬಳಸಿ ಅಗತ್ಯ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
ಇದೇ ರೀತಿ ಉತ್ತರಪತ್ರಿಕೆಗಳನ್ನೂ ಪಡೆಯಬಹುದಾಗಿದ್ದು, ಮೂರು ದಿನಗಳಲ್ಲಿ ಉತ್ತರಪತ್ರಿಕೆಗಳು ವೆಬ್‌ಸೈಟ್‌ನಲ್ಲಿ ಲಭ್ಯವಾಗಲಿವೆ.
ಈ ಮೊದಲು ಸ್ಕ್ಯಾನ್ ಮಾಡಿದ ಉತ್ತರಪತ್ರಿಕೆಗಳನ್ನು ಅಂಚೆ ಮೂಲಕ ವಿದ್ಯಾರ್ಥಿಗಳು ನೀಡಿರುವ ವಿಳಾಸಕ್ಕೆ ಕಳುಹಿಸಲಾಗುತ್ತಿತ್ತು. ಈ ವ್ಯವಸ್ಥೆ ಬದಲಿಸಿ ವಿದ್ಯಾರ್ಥಿಗಳ ಇ–ಮೇಲ್‌ಗೆ ಕಳುಹಿಸಲಾಗುತ್ತಿತ್ತು. ಆದರೆ, ವಿದ್ಯಾರ್ಥಿಗಳು ಇ–ಮೇಲ್ ವಿಳಾಸ ನೀಡುವಲ್ಲಿ ತಪ್ಪುಗಳನ್ನು ಮಾಡುತ್ತಿದ್ದರಿಂದ ಸ್ಕ್ಯಾನ್ ಪ್ರತಿ ತಲುಪುತ್ತಿರಲಿಲ್ಲ. ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದರೆ ಡೌನ್‌ಲೋಡ್ ಮಾಡಿಕೊಳ್ಳುವುದು ಸುಲಭ. 2019ರಲ್ಲಿ ಪೂರಕ ಪರೀಕ್ಷೆ ಸಂದರ್ಭದಲ್ಲಿ ಪ್ರಾಯೋಗಿಕವಾಗಿ ಈ ಕ್ರಮಕೈಗೊಳ್ಳಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಈಗಿರುವ ವ್ಯವಸ್ಥೆಯನ್ನು ಸುಧಾರಿಸಿರುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಕಡಿಮೆ ಅವಧಿಯಲ್ಲಿ ಉತ್ತರ ಪತ್ರಿಕೆಗಳನ್ನು ಪಡೆಯಬಹುದು’ ಎಂದು ಮಂಡಳಿಯ ನಿರ್ದೇಶಕ ಎಚ್.ಎನ್. ಗೋಪಾಲಕೃಷ್ಣ ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.