ಬೆಂಗಳೂರು: ಖಾಸಗಿಯಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ಈ ಬಾರಿ ಪ್ರತ್ಯೇಕ ಪರೀಕ್ಷಾ ಕೇಂದ್ರಗಳು ಹಾಗೂ ಪ್ರತ್ಯೇಕ ಪ್ರಶ್ನೆ ಪತ್ರಿಕೆ ಇರುವುದಿಲ್ಲ.
ಪರೀಕ್ಷಾ ಅಕ್ರಮ ತಡೆಯಲು, ನಕಲು ಪ್ರಕರಣಗಳಿಗೆ ಸಂಪೂರ್ಣ ಕಡಿವಾಣ ಹಾಕಲು ಮುಂದಾಗಿರುವ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ (ಕೆಎಸ್‌ಇಎಬಿ), ಇತರೆ ವಿದ್ಯಾರ್ಥಿಗಳಿಗೆ ಸಿದ್ಧಪಡಿಸುವ ಪ್ರಶ್ನೆಪತ್ರಿಕೆಗಳನ್ನೇ ನೀಡಲು ನಿರ್ಧರಿಸಿದೆ.
ಹೊಸಬರು ಹಾಗೂ ಪುನರಾವರ್ತಿತರು ಸೇರಿ ಪ್ರತಿ ವರ್ಷ ಸುಮಾರು 40 ಸಾವಿರ ಖಾಸಗಿ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ನೋಂದಾಯಿಸಿಕೊಳ್ಳುತ್ತಾರೆ. ನಿತ್ಯ ಶಾಲೆಗಳಿಗೆ ತೆರಳಿ ಇತರೆ ವಿದ್ಯಾರ್ಥಿಗಳಂತೆ ಶಿಕ್ಷಣ ಪಡೆಯದ ಅವರಿಗೆ ಒಂದಷ್ಟು ಸುಲಭ ಪ್ರಶ್ನೆಗಳಿರುವ ಪ್ರತ್ಯೇಕ ಪ್ರಶ್ನೆಪತ್ರಿಕೆ ಸಿದ್ಧಪಡಿಸಲಾಗುತ್ತಿತ್ತು. ಅವರ ಸಂಖ್ಯೆಗೆ ಅನುಗುಣವಾಗಿ ಪ್ರತ್ಯೇಕ ಪರೀಕ್ಷಾ ಕೇಂದ್ರಗಳನ್ನು ನೀಡಲಾಗುತ್ತಿತ್ತು. 2023ರ ಪರೀಕ್ಷೆಯಲ್ಲಿ ಖಾಸಗಿ ಅಭ್ಯರ್ಥಿಗಳಿಗೆ ಮೀಸಲಾಗಿದ್ದ ಪರೀಕ್ಷಾ ಕೇಂದ್ರಗಳಲ್ಲಿ ಹೆಚ್ಚಿನ ನಕಲು ನಡೆದಿದ್ದವು. ಹಾಗಾಗಿ, ಎಲ್ಲ ವಿದ್ಯಾರ್ಥಿಗಳಿಗೂ ಏಕ ರೀತಿಯ ವ್ಯವಸ್ಥೆ ಮಾಡಲು ಮಂಡಳಿ ತೀರ್ಮಾನ ತೆಗೆದುಕೊಂಡಿದೆ.
‘ಪ್ರಸಕ್ತ ವರ್ಷದಿಂದ ಮೂರು ಪರೀಕ್ಷಾ ಪದ್ಧತಿ ಪರಿಚಯಿಸಲಾಗಿದೆ. ಹಾಗಾಗಿ, ಪ್ರತ್ಯೇಕ ವ್ಯವಸ್ಥೆಯ ಅಗತ್ಯವಿಲ್ಲ. ಖಾಸಗಿ ವಿದ್ಯಾರ್ಥಿಗಳಿಗೆ 20 ಅಂಕಗಳ ಆಂತರಿಕ ಮೌಲ್ಯಮಾಪಕ ಇಲ್ಲದ ಕಾರಣ ಇತರೆ ವಿದ್ಯಾರ್ಥಿಗಳಂತೆ 80 ಅಂಕಗಳಿಗೆ ಪರೀಕ್ಷೆ ನಡೆಸಿ, ಅದನ್ನು 100 ಅಂಕಗಳಿಗೆ ಪರಿಗಣಿಸಲಾಗುತ್ತದೆ’ ಎಂದು ಕೆಎಸ್‌ಇಎಬಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.