ಬೆಂಗಳೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡರೆ ಚಿಂತಿಸುವ ಅಗತ್ಯವಿಲ್ಲ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಶೀಘ್ರದಲ್ಲೇ ಪೂರಕ ಪರೀಕ್ಷೆ ನಡೆಸಲಿದೆ. 2019–20ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಅನುತ್ತೀರ್ಣರಾಗಿರುವ ವಿದ್ಯಾರ್ಥಿಗಳು ಹಾಗೂ ಈ ಹಿಂದಿನ ಸಾಲುಗಳಲ್ಲಿ ಅನುತ್ತೀರ್ಣ ಆಗಿರುವ ಎಲ್ಲ ಅರ್ಹ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್‌ನಲ್ಲಿ ಪೂರಕ ಪರೀಕ್ಷೆ ನಡೆಯಲಿದೆ.
ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡ ಬೆನ್ನಲ್ಲೆ, ಅರ್ಹ ಪುನರಾವರ್ತಿತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪರೀಕ್ಷೆ ನಡೆಯುತ್ತಿದ್ದ ಸಂದರ್ಭದಲ್ಲಿ ಕೊರೊನಾ ಸೇರಿದಂತೆ ಇತರ ಕಾರಣಗಳಿಗೆ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಈ ಪೂರಕ ಪರೀಕ್ಷೆಯನ್ನು ‘ಪ್ರಥಮ ಅವಕಾಶ’ ಎಂದೇ ಪರಿಗಣಿಸಲಾಗುತ್ತದೆ. ಅಲ್ಲದೆ, ಈ ಕಾರಣಗಳಿಗೆ ಕೆಲವು ವಿಷಯಗಳಿಗೆ ಹಾಜರಾಗಿ, ಕೆಲವು ವಿಷಯಗಳ ಪರೀಕ್ಷೆಗೆ ಗೈರಾದವರು ಪೂರಕ ಪರೀಕ್ಷೆ ಬರೆದರೂ ‘ಪ್ರಥಮ ಅವಕಾಶ’ ಎಂದೇ ಪರಿಗಣಿಸಲಾಗುತ್ತದೆ. ಆದರೆ, ಎಲ್ಲ ಆರು ವಿಷಯಗಳ ಪರೀಕ್ಷೆಗೆ ಹಾಜರಾಗಿದ್ದು, ಯಾವುದೇ ಒಂದು ವಿಷಯದಲ್ಲಿ ಅನುತ್ತೀರ್ಣ ಆಗಿದ್ದರೂ ಆ ವಿದ್ಯಾರ್ಥಿಯನ್ನು ಅನುತ್ತೀರ್ಣ ವಿದ್ಯಾರ್ಥಿ ಮತ್ತು ಪೂರಕ ಪರೀಕ್ಷೆಯನ್ನು ಎರಡನೇ ಪ್ರಯತ್ನ ಎಂದು ಪರಿಗಣಿಸಲಾಗುತ್ತದೆ.
2011ರಿಂದ 2017ರವರೆಗೆ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಆರು ಪ್ರಯತ್ನಗಳು ಮುಗಿಯುವುದರಿಂದ ಅಂಥವರು, 2020ರ ಸೆಪ್ಟೆಂಬರ್‌ನಲ್ಲಿ ಪೂರಕ ಪರೀಕ್ಷೆ ತೆಗೆದುಕೊಳ್ಳಲು ಅವಕಾಶ ಇರುವುದಿಲ್ಲ. ಅವರು 2021ರ ಮಾರ್ಚ್– ಏಪ್ರಿಲ್‌ನ ಪರೀಕ್ಷೆಗೆ ಹೊಸದಾಗಿ ಖಾಸಗಿ ವಿದ್ಯಾರ್ಥಿಯಾಗಿ ನೋಂದಾಯಿಸಿಕೊಂಡು ಎಲ್ಲ ಆರು ವಿಷಯಗಳ ಪರೀಕ್ಷೆಗೆ ಹಾಜರಾಗಬೇಕು. 2018ರ ಏಪ್ರಿಲ್ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿ, ತೇರ್ಗಡೆಯಾಗಲು ಸತತ ಆರು ಪ್ರಯತ್ನಗಳನ್ನು ಕಲ್ಪಿಸಲಾಗುತ್ತದೆ. ಈ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್‌ನ ಪರೀಕ್ಷೆ ಕೊನೆಯ ಪೂರಕ ಪರೀಕ್ಷೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.