ADVERTISEMENT

ಎಸ್‌ಎಸ್‌ಎಲ್‌ಸಿ ಘಟಕ ಪರೀಕ್ಷೆ: ‘ವೆಬ್‌ಕಾಸ್ಟಿಂಗ್‌’ ಕಣ್ಗಾವಲು

ಚಂದ್ರಹಾಸ ಹಿರೇಮಳಲಿ
Published 7 ಸೆಪ್ಟೆಂಬರ್ 2024, 4:58 IST
Last Updated 7 ಸೆಪ್ಟೆಂಬರ್ 2024, 4:58 IST
   

ಬೆಂಗಳೂರು: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಆಯಾ ಶಾಲೆಗಳು ನಡೆಸುವ ಘಟಕ ಪರೀಕ್ಷೆಗಳಿಗೂ ಇನ್ನು ಮುಂದೆ ‘ವೆಬ್‌ಕಾಸ್ಟಿಂಗ್‌’ ಕಣ್ಗಾವಲು ಇರಲಿದೆ. 

ಸಾಮೂಹಿಕ ನಕಲು ತಡೆಯಲು 2023–24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಮೊದಲ ಬಾರಿ ಪರಿಚಯಿಸಿದ ವೆಬ್‌ಕಾಸ್ಟಿಂಗ್‌ ವ್ಯವಸ್ಥೆ ಯಿಂದಾಗಿ ಫಲಿತಾಂಶ ಕುಸಿದಿತ್ತು.

ಫಲಿತಾಂಶದಲ್ಲಿನ ಭಾರಿ ಕುಸಿತ ಚರ್ಚೆಗೆ ಗ್ರಾಸವಾದರೂ, ಹೆಚ್ಚು ಫಲಿತಾಂಶ ಪಡೆಯಲು ಇದುವರೆಗೆ ಅನುಸರಿಸುತ್ತಿದ್ದ ವಾಮಮಾರ್ಗಗಳನ್ನು ಅನಾವರಣಗೊಳಿಸಿತ್ತು. ಕಳೆದೆರಡು ದಶಕಗಳಿಂದ ‘ಹೆಚ್ಚಿನ ಫಲಿತಾಂಶ’ ಎಂಬ ಪ್ರತಿಷ್ಠೆಯ ಬೆನ್ನು ಹತ್ತಿದ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರನ್ನು ಅಂಕಗಳ ಭ್ರಮಾ ಲೋಕದಲ್ಲಿ ತೇಲಿಸಿದ್ದರು ಎಂಬ ಸತ್ಯವನ್ನು ಬಯಲು ಮಾಡಿತ್ತು.

ADVERTISEMENT

ಅಕ್ರಮಗಳನ್ನು ತಡೆಯಲು ತೆಗೆದುಕೊಂಡ ಕ್ರಮಗಳಿಂದಾಗಿ ಫಲಿತಾಂಶ 2022–23ನೇ ಸಾಲಿಗಿಂತ ಶೇಕಡ 30ರಷ್ಟು ಕುಸಿತವಾಗಿತ್ತು. ಪರೀಕ್ಷೆ ಬರೆದಿದ್ದ 8.59 ಲಕ್ಷ ವಿದ್ಯಾರ್ಥಿಗಳಲ್ಲಿ 3.97 ಲಕ್ಷ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರು. ಇದರಿಂದ ವಿದ್ಯಾರ್ಥಿಗಳ ಮನೋಬಲ ಕುಗ್ಗುವ ಸಾಧ್ಯತೆ ಇದೆ ಎಂದು ಮನಗಂಡ ಶಿಕ್ಷಣ ಇಲಾಖೆ ಕೃಪಾಂಕ ನಿಯಮಗಳನ್ನು ಬದಲಾಯಿಸಿ, 1.69 ಲಕ್ಷ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಿತ್ತು.

ಫಲಿತಾಂಶ ಕುಸಿತಕ್ಕೆ ಪೂರ್ವ ಸಿದ್ಧತೆ ಮಾಡಿಕೊಳ್ಳದೇ ವೆಬ್‌ಕಾಸ್ಟಿಂಗ್‌ ವ್ಯವಸ್ಥೆ ಪರಿಚಯಿಸಿದ್ದೇ ಕಾರಣ ಎಂದು ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಕೃಪಾಂಕ ನೀಡಿದ್ದನ್ನೂ ಹಲವರು ಖಂಡಿಸಿದ್ದರು. ಹಾಗಾಗಿ, ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ನಡೆಸುವ ಘಟಕ ಪರೀಕ್ಷೆಗಳನ್ನೂ ವೆಬ್‌ಕಾಸ್ಟಿಂಗ್‌ ವ್ಯವಸ್ಥೆ ಮೂಲಕವೇ ನಡೆಸುವಂತೆ ಶಾಲಾ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

‘ಎಲ್ಲ ಶಾಲೆಗಳು ಕಡ್ಡಾಯವಾಗಿ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಿಕೊಳ್ಳಬೇಕು. ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಕುಳಿತು ಅಧಿಕಾರಿಗಳು ವೆಬ್‌ಕಾಸ್ಟಿಂಗ್‌ ಮೂಲಕ ಪರೀಕ್ಷಾ ಪ್ರಕ್ರಿಯೆ ವೀಕ್ಷಿಸಬೇಕು. ಸಿ.ಸಿ.ಟಿ.ವಿ. ಕ್ಯಾಮೆರಾ ಸೌಲಭ್ಯ ಇಲ್ಲದ ಶಾಲೆಗಳು ಲಭ್ಯವಿರುವ ಸಮೀಪದ ಶಾಲೆಗಳಿಗೆ ತೆರಳಿ ಪರೀಕ್ಷೆ ಬರೆಸಬೇಕು. ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿದ ನಂತರ ಕಡಿಮೆ ಫಲಿತಾಂಶ ಪಡೆದ ವಿದ್ಯಾರ್ಥಿಗಳ ಜೊತೆ ಚರ್ಚಿಸಿ, ಫಲಿತಾಂಶ ವೃದ್ಧಿಗೆ ಅಗತ್ಯ ಕ್ರಮ ವಹಿಸಬೇಕು’ ಎಂದು ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶ್‌ಕುಮಾರ್ ಸಿಂಗ್‌ ಅವರು ಸೂಚಿಸಿದ್ದಾರೆ. 

ಸಿ.ಸಿ.ಟಿ.ವಿ. ಕ್ಯಾಮೆರಾ ಕಡ್ಡಾಯ

ಎಲ್ಲ ಶಾಲೆಗಳಲ್ಲೂ ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆ ಸೂಚಿಸಿದೆ. ಅಳವಡಿಸಿದ ಕ್ಯಾಮೆರಾಗಳ ಐಪಿ ಸಂಖ್ಯೆಗಳನ್ನು (ಇಂಟರ್‌ನೆಟ್‌ ಪ್ರೋಟೊಕಾಲ್‌ ನಂಬರ್‌) ಆಯಾ ಶಾಲೆಗಳ ಮುಖ್ಯ ಶಿಕ್ಷಕರು ಮೇಲಧಿಕಾರಿಗಳ ಜೊತೆ ಹಂಚಿಕೊಳ್ಳಬೇಕು.  ಐಪಿ ಸಂಖ್ಯೆ ಬಳಸಿಕೊಂಡ ಅಧಿಕಾರಿಗಳು ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ತಮ್ಮ ಕಚೇರಿಯಲ್ಲೇ ಕುಳಿತು ಪರೀಕ್ಷಾ ಚಟುವಟಿಕೆ ವೀಕ್ಷಿಸುತ್ತಾರೆ.

ಡಿಸೆಂಬರ್‌ಗೆ ಪಠ್ಯ ಬೋಧನೆ ಪೂರ್ಣ

ಎಸ್‌ಎಸ್‌ಎಲ್‌ಸಿಯ ಎಲ್ಲ ವಿಷಯಗಳ ಪಠ್ಯ ಬೋಧನೆಯನ್ನು ಈ ವರ್ಷ ಡಿಸೆಂಬರ್‌ ಒಳಗೆ ಪೂರ್ಣಗೊಳಿಸಲಾಗುತ್ತದೆ. ಘಟಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಪ್ರಗತಿ ವೀಕ್ಷಿಸಿ, ಕಡಿಮೆ ಫಲಿತಾಂಶ ಪಡೆದ ಮಕ್ಕಳಿಗೆ ವಿಶೇಷ ತರಗತಿ ನಡೆಸಬೇಕು. ಅಂತಹ ಮಕ್ಕಳನ್ನು ಇತರೆ ಮಕ್ಕಳ ಹಂತಕ್ಕೆ ತರಲು ಎಲ್ಲ ಶಿಕ್ಷಕರೂ ಸಮಾನವಾಗಿ ಜವಾಬ್ದಾರಿ ಹಂಚಿಕೊಳ್ಳಬೇಕು. ಬರವಣಿಗೆಯ ಗುಣಮಟ್ಟ ಹೆಚ್ಚಿಸಲು ಪ್ರತಿ ದಿನ ಎರಡು ಪುಟಗಳನ್ನು ಬರೆಸಬೇಕು. ಗಟ್ಟಿಯಾಗಿ ಓದಿಸುವ ಹವ್ಯಾಸ ರೂಢಿಸಬೇಕು. ಪ್ರತಿ 15 ದಿನಗಳಿಗೆ ಒಮ್ಮೆ ಪೋಷಕರ ಸಭೆ ನಡೆಸಿ, ಮಾಹಿತಿ ನೀಡಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಸೂಚಿಸಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.