ADVERTISEMENT

‘ಗೊಂಡ’ರಿಗೆ ಉದ್ಯೋಗ ಕೈತಪ್ಪುವ ಆತಂಕ

ವಿಜಯಕುಮಾರ್ ಎಸ್.ಕೆ.
Published 5 ಅಕ್ಟೋಬರ್ 2021, 21:00 IST
Last Updated 5 ಅಕ್ಟೋಬರ್ 2021, 21:00 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಸರ್ಕಾರಿ ಹುದ್ದೆಗೆ ಆಯ್ಕೆಯಾದರೂ ಜಾತಿ ಸಿಂಧುತ್ವ ಪ್ರಮಾಣಪತ್ರ ಸಿಗದೆ ‘ಗೊಂಡ’ ಸಮುದಾಯದ (ಎಸ್‌.ಟಿ) ಅಭ್ಯರ್ಥಿಗಳು ಅತಂತ್ರರಾಗಿದ್ದು, ಉದ್ಯೋಗವೇ ಕೈತಪ್ಪುವ ಆತಂಕದಲ್ಲಿದ್ದಾರೆ.

‘ಗೊಂಡ’ ಸಮುದಾಯಕ್ಕೆ ಕೆಲವು ಜಿಲ್ಲೆಗಳಲ್ಲಿ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರವನ್ನು ಹಿಂದಿನಿಂದ ನೀಡಲಾಗುತ್ತಿದೆ. ಪರಿಶಿಷ್ಟ ಪಂಗಡದ ವಿದ್ಯಾರ್ಥಿ ವೇತನ, ವಿದ್ಯಾರ್ಥಿ ನಿಲಯ, ಸರ್ಕಾರಿ ಉದ್ಯೋಗ ಸೇರಿ ಎಲ್ಲ ರೀತಿಯ ಸೌಲಭ್ಯಗಳನ್ನು ಈ ಸಮುದಾಯ ಪಡೆದುಕೊಂಡು ಬಂದಿದೆ.

ಆದರೆ, 2021ರ ಜನವರಿ 16ರಂದು ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ, ಜಾತಿ ಪ್ರಮಾಣ ಪತ್ರ ಇದ್ದರೂ, ಪರಿಶಿಷ್ಟ ಪಂಗಡದಲ್ಲಿ ಇರುವ 12 ಮತ್ತು ಪರಿಶಿಷ್ಟ ಜಾತಿಯಲ್ಲಿರುವ 6 ಸಮುದಾಯಗಳಿಗೆ ಜಾತಿ ಸಿಂಧುತ್ವ ಪ್ರಮಾಣ ಪತ್ರ ನೀಡುವ ಮೊದಲು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ (ಜಾಗೃತ ಕೋಶ) ವರದಿಯನ್ನುಜಿಲ್ಲಾಧಿಕಾರಿ ಅಧ್ಯಕ್ಷತೆಯ ಸಮಿತಿ ಪಡೆದುಕೊಳ್ಳಬೇಕು.

ADVERTISEMENT

ಪೊಲೀಸ್, ಎಫ್‌ಡಿಎ, ಎಸ್‌ಡಿಎ, ಪಿಎಸ್‌ಐ, ಕೆಪಿಟಿಸಿಎಲ್‌, ಕೆಎಸ್‌ಆರ್‌ಟಿಸಿ, ಬಿಎಂಟಿಸಿಯಲ್ಲಿ ನೌಕರರಾಗಿ ಆಯ್ಕೆಯಾಗಿರುವ 85ಕ್ಕೂ ಹೆಚ್ಚು ಅಭ್ಯರ್ಥಿಗಳು ಈಗ ಅತಂತ್ರರಾಗಿದ್ದಾರೆ. ಸಿಂಧುತ್ವ ನೀಡದಿದ್ದರೆ ಆಯ್ಕೆ ರದ್ದುಪಡಿಸುವುದಾಗಿ ನೇಮಕಾತಿ ಪ್ರಾಧಿಕಾರಗಳು ನೋಟಿಸ್ ನೀಡಲು ಆರಂಭಿಸಿವೆ.

‘ವರದಿ ಕೇಳಿ ಜಿಲ್ಲಾಧಿಕಾರಿಗಳ ಮೂಲಕ ಪ್ರಸ್ತಾವನೆಗಳು ಸಲ್ಲಿಕೆಯಾಗುತ್ತಿದ್ದು, ಗೊಂಡ ಸಮುದಾಯಕ್ಕೆ ವ್ಯತಿರಿಕ್ತವಾದ ವರದಿಗಳು ಅಲ್ಲಿಂದ ಬರುತ್ತಿವೆ. ಇದರಿಂದಾಗಿ ಉದ್ಯೋಗದಿಂದಲೇ ವಂಚಿತರಾಗುವ ಆತಂಕ ಎದುರಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಭ್ಯರ್ಥಿಗಳು ಹೇಳುತ್ತಾರೆ.

‘ಪರಿಶಿಷ್ಟ ಪಂಗಡದ ಜಾತಿ ಪ್ರಮಾಣ ಪತ್ರವನ್ನು ನಾವು ಹಿಂದಿನಿಂದ ಪಡೆದುಕೊಂಡು ಬಂದಿದ್ದೇವೆ. ಬೀದರ್ ಜಿಲ್ಲೆಯಲ್ಲೇ ಹೆಚ್ಚಿನ ಸಂಖ್ಯೆಯಲ್ಲಿರುವ ನಮ್ಮ (ಗೊಂಡ) ಸಮುದಾಯದ ಸಾವಿರಾರು ಮಂದಿ ಉದ್ಯೋಗವನ್ನೂ ಪಡೆದುಕೊಂಡಿದ್ದಾರೆ. ಈಗ ನಮಗೆ ಪರಿಶಿಷ್ಟ ಪಂಗಡದ ಜಾತಿ ಸಿಂಧುತ್ವ ನೀಡಲು ನಿರಾಕರಿಸಲಾಗುತ್ತಿದೆ’ ಎಂದರು.

‘2015ರಲ್ಲೂ ಇದೇ ರೀತಿಯ ಆದೇಶವನ್ನು ಸರ್ಕಾರ ಹೊರಡಿಸಿತ್ತು. ಬಳಿಕ ವಾಪಸ್ ಪಡೆಯಿತು. 2021ರ ಜನವರಿಯಲ್ಲಿ ಹೊಸದಾಗಿ ಆದೇಶ ಹೊರಡಿಸಲಾಗಿದೆ. ಆದರೆ, ನಾವು 2017ರಿಂದ ವಿವಿಧ ನೇಮಕಾತಿಗೆ ಅರ್ಜಿ ಹಾಕಿದ್ದೇವೆ. ಪರೀಕ್ಷೆ ನಡೆಸಿ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳುವಷ್ಟರಲ್ಲಿ 2021ಕ್ಕೆ ಬಂದಿದ್ದೇವೆ. ಅರ್ಜಿ ಸಲ್ಲಿಸುವಾಗ ಎಸ್‌.ಟಿ ಎಂದು ನಮೂದಿಸಿದ್ದೇವೆ. ಈಗ ಅದೇ ಜಾತಿಯ ಸಿಂಧುತ್ವ ಪ್ರಮಾಣ ಪತ್ರ ಒದಗಿಸದಿದ್ದರೆ ಆಯ್ಕೆಯನ್ನು ಆ ಪ್ರಾಧಿಕಾರಗಳು ರದ್ದು ಮಾಡಲಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಪರಿಶಿಷ್ಟ ಪಂಗಡ ಎಂದು ನಮೂದಿಸಿದ್ದರೂ, ಕೆಲವರು ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಕಾರಣಕ್ಕೆ ಸಾಮಾನ್ಯ ವರ್ಗದಲ್ಲಿ ಆಯ್ಕೆಯಾಗಿದ್ದಾರೆ. ಆದರೆ, ಜಾತಿ ನಮೂದಿಸಿರುವ ಕಾರಣ ಸಿಂಧುತ್ವ ಪ್ರಮಾಣ ಪತ್ರ ಒದಗಿಸಬೇಕಾಗುತ್ತದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಆಗಿದೆ’ ಎಂದು ಅಳಲು ತೋಡಿಕೊಂಡರು.

‘ಹಿಂದಿನಿಂದ ಸರ್ಕಾರವೇ ಈ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಪ್ರಮಾಣ ಪತ್ರ ನೀಡಿದೆಯೇ ಹೊರತು ನಾವು ನಕಲಿ ಪ್ರಮಾಣ ಪತ್ರ ಪಡೆದಿಲ್ಲ. ಈಗ ಯಾವ ಜಾತಿಯ ಪ್ರಮಾಣ ಪತ್ರ ಪಡೆದುಕೊಳ್ಳಬೇಕು ಎಂಬ ಗೊಂದಲಕ್ಕೆ ಸರ್ಕಾರ ನಮ್ಮನ್ನು ತಳ್ಳಿದೆ’ ಎಂದರು.

ಕೆಲ ಸಮುದಾಯಗಳನ್ನು ಗುರಿಯಾಗಿಸಿಕೊಂಡು ಹೊರಡಿಸಿರುವ ಈ ಆದೇಶ ಹಿಂದಕ್ಕೆ ಪಡೆಯಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಈ ಹಿಂದೆಯೇ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.