ADVERTISEMENT

ಎಸ್‌.ಟಿ ಮೀಸಲು ಹೆಚ್ಚಳ: ಮಾ.23ಕ್ಕೆ ಸಭೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 16:02 IST
Last Updated 18 ಮಾರ್ಚ್ 2022, 16:02 IST
ಜೆ.ಸಿ.ಮಾಧುಸ್ವಾಮಿ
ಜೆ.ಸಿ.ಮಾಧುಸ್ವಾಮಿ   

ಬೆಂಗಳೂರು: ಪರಿಶಿಷ್ಟ ಪಂಗಡಗಳ (ಎಸ್‌.ಟಿ) ಮೀಸಲಾತಿ ಪ್ರಮಾಣವನ್ನು ಶೇಕಡ 7.5ಕ್ಕೆ ಹೆಚ್ಚಿಸುವ ಬೇಡಿಕೆ ಕುರಿತು ಚರ್ಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇದೇ ಬುಧವಾರ (ಮಾರ್ಚ್‌ 23) ಉನ್ನತಮಟ್ಟದ ಸಭೆ ನಡೆಸಲಾಗುವುದು ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ಎಸ್‌.ಟಿ ಮೀಸಲಾತಿಯನ್ನುಶೇ 7.5ಕ್ಕೆ ಹೆಚ್ಚಿಸುವ ತೀರ್ಮಾನ ಪ್ರಕಟಿಸುವಂತೆ ಆಗ್ರಹಿಸಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರು ಗುರುವಾರ ಸಂಜೆ ವಿಧಾನಸಭೆಯಲ್ಲಿ ಧರಣಿ ಆರಂಭಿಸಿದ್ದರು.

ಶುಕ್ರವಾರವೂ ಕಲಾಪ ಆರಂಭವಾಗುತ್ತಿದ್ದಂತೆ ಧರಣಿ ಮುಂದುವರಿಸಿದರು. ಧರಣಿ ಹಿಂಪಡೆಯುವಂತೆ ಮನವೊಲಿಸಿದ ಕಾನೂನು ಸಚಿವರು ಈ ವಿಷಯ ಪ್ರಕಟಿಸಿದರು.

ADVERTISEMENT

‘ಈ ವಿಚಾರದಲ್ಲಿ ಮುಂದಿನ ಕ್ರಮ ಕೈಗೊಳ್ಳುವ ಕುರಿತು ಮುಖ್ಯಮಂತ್ರಿ ಮತ್ತು ನಾನು ಚರ್ಚಿಸಿದ್ದೇವೆ. ವಿರೋಧ ಪಕ್ಷಗಳ ನಾಯಕರು ಸೇರಿದಂತೆ ಸಂಬಂಧಿಸಿದ ಎಲ್ಲರ ಜತೆ ಬುಧವಾರ ಸಭೆ ನಡೆಸಲಾಗುವುದು’ ಎಂದರು.

ಕಾನೂನು ಸಚಿವರ ಭರವಸೆ ಆಧರಿಸಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರು ಧರಣಿ ಮುಕ್ತಾಯಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.