ಬೆಳಗಾವಿ: ಮಹದಾಯಿ-ಕಳಸಾ-ಬಂಡೂರಿ ಕುಡಿಯುವ ನೀರಿನ ಕಾಮಗಾರಿಗೆ ಗೋವಾ ಸರ್ಕಾರ ಮತ್ತೆ ಆಕ್ಷೇಪ ವ್ಯಕ್ತಪಡಿಸುತ್ತಿರುವುದನ್ನು ಭಾರತೀಯ ಕೃಷಿಕ ಸಮಾಜ (ಸಂಯುಕ್ತ) ಸಂಘಟನೆ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ತೀವ್ರವಾಗಿ ಖಂಡಿಸಿದ್ದಾರೆ.
‘ಸುದೀರ್ಘ ಹೋರಾಟದ ನಂತರ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯವು ಕಳಸಾ-ಬಂಡೂರಿ ಕುಡಿಯುವ ನೀರಿನ ಕಾಮಗಾರಿಗಳಿಗೆ ಅನುಮತಿ ನೀಡಿದೆ. ಈ ಕಾಮಗಾರಿಗಳಿಗೂ ಗೋವಾಕ್ಕೆ ಯಾವುದೇ ಸಂಬಂಧವಿಲ್ಲ. ಇವು ಸಂಪೂರ್ಣವಾಗಿ ಬೆಳಗಾವಿ ಜಿಲ್ಲಾ ವ್ಯಾಪ್ತಿಯಲ್ಲಿ ನಡೆಯುವವಾಗಿವೆ. ಸಂಬಂಧವಿಲ್ಲದ ವಿಷಯದಲ್ಲಿ ಗೋವಾ ಸರ್ಕಾರ ಅನಗತ್ಯ ತಗಾದೆ ತೆಗೆಯುತ್ತಿರುವುದು ಸರಿಯಲ್ಲ. ಅಪಪ್ರಚಾರವನ್ನು ಕೂಡಲೇ ನಿಲ್ಲಿಸಬೇಕು’ ಎಂದು ಒತ್ತಾಯಿಸಿದ್ದಾರೆ.
‘ಗೋವಾದ ಮೊಂಡುತನ ಮತ್ತು ಅನಗತ್ಯ ಆಕ್ಷೇಪಗಳಿಂದಾಗಿ ಈ ಭಾಗದ ಕುಡಿಯುವ ನೀರಿನ ಈ ಯೋಜನೆಗಳು ದಶಕಗಳಿಂದ ನನೆಗುದಿಗೆ ಬಿದ್ದಿವೆ. 4 ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಈ ನದಿಗಳ ಜೋಡಣೆ ಹೋರಾಟವನ್ನು ಕನ್ನಡಿಗರು ಮತ್ತು ರೈತರು ಅತ್ಯಂತ ಸಂಯಮದಿಂದ ನಡೆಸಿಕೊಂಡು ಬಂದಿದ್ದೇವೆ. ಸಹನೆಗೂ ಮಿತಿ ಇರುತ್ತದೆ ಎನ್ನುವುದನ್ನು ಗೋವಾ ಸರ್ಕಾರ ಅರಿಯಬೇಕು’ ಎಂದು ಎಚ್ಚರಿಕೆ ನೀಡಿದ್ದಾರೆ.
‘ಕಳಸಾ-ಬಂಡೂರಿ ಕಾಮಗಾರಿಗಳಿಗೆ ನೀಡಿರುವ ಅನುಮತಿ ಮರು ಪರಿಶೀಲಿಸುವಂತೆ ಕೇಂದ್ರ ಪರಿಸರ ಸಚಿವರ ಮೇಲೆ ಒತ್ತಡ ತರುವುದನ್ನು ಗೋವಾ ಮುಖ್ಯಮಂತ್ರಿ ತಕ್ಷಣ ನಿಲ್ಲಿಸಬೇಕು’ ಎಂದು ಆಗ್ರಹಿಸಿದ್ದಾರೆ.
‘ಕೇಂದ್ರ ಸರ್ಕಾರವು ಗೋವಾದ ಭಾವನಾತ್ಮಕ ರಾಜಕಾರಣಕ್ಕೆ ಮಣೆ ಹಾಕದೇ ವಿವಾದವನ್ನು ಶಾಶ್ವತವಾಗಿ ಬಗೆಹರಿಸಬೇಕು. ಮಹದಾಯಿ ವ್ಯಾಪ್ತಿಯ ಇಬ್ಬರು ಕೇಂದ್ರ ಸಚಿವರು ಸೇರಿದಂತೆ ನಾಲ್ವರು ಸಂಸದರು, ಕಳಸಾ-ಬಂಡೂರಿ ಕಾಮಗಾರಿಗಳ ಬಗ್ಗೆ ಕೇಂದ್ರಕ್ಕೆ ಮನವರಿಕೆ ಮಾಡಿಕೊಡಬೇಕು. ಅಧ್ಯಯನಕ್ಕೆ ರಚಿಸಿರುವ ಉಪ ಸಮಿತಿ ರದ್ದುಪಡಿಸಬೇಕು. ಈಗ ಸಿಕ್ಕಿರುವ ಅನುಮತಿ ರದ್ದಾಗದಂತೆ ನೋಡಿಕೊಳ್ಳಬೇಕು. ಗೋವಾ ತಗಾದೆಯಿಂದ ಕಾಮಗಾರಿಗಳಿಗೆ ಮತ್ತೆ ಹಿನ್ನಡೆಯಾದರೆ, ಈ ಭಾಗದ ಸಂಸದರ ಮನೆ ಎದುರು ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.