ಬೆಂಗಳೂರು: ‘ಖಾಸಗಿ, ಅನುದಾನರಹಿತ ಶಾಲೆಗಳಲ್ಲಿ ನಾಡಗೀತೆ ಹಾಡುವುದು ಕಡ್ಡಾಯವಲ್ಲ’ ಎಂಬರ್ಥದಲ್ಲಿ ಆದೇಶ ಹೊರಡಿಸಿದ್ದ ಸರ್ಕಾರ, ಇದು ವಿವಾದದ ಸ್ವರೂಪ ಪಡೆಯುತ್ತಿದ್ದಂತೆಯೇ ತಿದ್ದುಪಡಿ ಆದೇಶ ಹೊರಡಿಸಿ ಬಚಾವಾಗುವ ದಾರಿ ಹುಡುಕಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದೇ 16ರಂದು ಹೊರಡಿಸಿದ್ದ ಆದೇಶದಲ್ಲಿ ಎಡವಟ್ಟು ಮಾಡಿತ್ತು. ‘ಎಲ್ಲ ಶಾಲೆಗಳಲ್ಲಿ ನಾಡಗೀತೆಯನ್ನು ದೈನಂದಿನ ಚಟುವಟಿಕೆಗಳು ಆರಂಭವಾಗುವ ಮುನ್ನ ಹಾಡುವುದು’ ಎಂಬ ವಾಕ್ಯವನ್ನು ‘ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ’ ಎಂದು ಬದಲಾವಣೆ ಮಾಡಿತ್ತು. ಖಾಸಗಿ ಶಾಲೆಗಳಲ್ಲಿ ಹಾಡುವ ಅಗತ್ಯವಿಲ್ಲ ಎಂದು ಸ್ಪಷ್ಟ ಉಲ್ಲೇಖ ಇರದಿದ್ದರೂ ‘ಎಲ್ಲ ಶಾಲೆಗಳಲ್ಲಿ’ ಎಂಬ ಪದಗಳನ್ನು ತೆಗೆಯುವ ಮೂಲಕ ಎಲ್ಲಿ ಹಾಡಬೇಕು ಎಂಬುದನ್ನು ನಿರ್ದಿಷ್ಟಗೊಳಿಸಲಾಗಿತ್ತು. ಹೀಗಾಗಿ, ಖಾಸಗಿ ಶಾಲೆಗಳು ನಾಡಗೀತೆ ಹಾಡಬೇಕಾದ ಅನಿವಾರ್ಯ ಇರಲಿಲ್ಲ.
ಈ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಸರ್ಕಾರ ಮುಜುಗರಕ್ಕೆ ಸಿಲುಕಿತು. ‘ಕಣ್ತಪ್ಪಿನಿಂದ ಅದ ಪ್ರಮಾದ’ ಎಂದು ಸಮಜಾಯಿಷಿ ಕೊಟ್ಟ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ವಿವಾದವನ್ನು ತಣ್ಣಗಾಗಿಸುವ ಯತ್ನ ಮಾಡಿದರು. ಕೆಲ ಹೊತ್ತಿನಲ್ಲೇ ಈ ಕುರಿತ ಆದೇಶ ಹೊರಬಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.