ಬೆಂಗಳೂರು: ‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವ ಪರಿಸ್ಥಿತಿ ಹತ್ತಿರವಾಗುತ್ತಿದೆ. ಹೀಗಾಗಿ ಕಾಂಗ್ರೆಸ್‌ನಲ್ಲಿ ಆ ಹುದ್ದೆಯ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತಿದೆ. ಡಿ.ಕೆ.ಶಿವಕುಮಾರ್ ಆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಎತ್ತಿನಹೊಳೆ ಯೋಜನೆಯ ಮೊದಲನೇ ಹಂತವನ್ನು ಸಿದ್ದರಾಮಯ್ಯ ಅವರು ಶುಕ್ರವಾರ ಉದ್ಘಾಟಿಸಿದ್ದಾರೆ. ಆದರೆ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಒಂದು ದಿನ ಮೊದಲೇ ಎತ್ತಿನಹೊಳೆಗೆ ಹೋಗಿ, ಪೂಜೆಕಾರ್ಯ ನಡೆಸಿದ್ದಾರೆ. ಸಿದ್ದರಾಮಯ್ಯ ರಾಜಿನಾಮೆ ಕೊಡಲೇಬೇಕಾದ ಸ್ಥಿತಿ ಎದುರಾಗಿದೆ’ ಎಂದರು.
‘ಎತ್ತಿನಹೊಳೆ ಯೋಜನೆಯ ಕ್ರೆಡಿಟ್ ತೆಗೆದುಕೊಳ್ಳಲು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಮಧ್ಯೆ ಪೈಪೋಟಿ ನಡೆಯುತ್ತಿದೆ. ಅವರಿಬ್ಬರೂ ಪರಸ್ಪರ ಪೈಪೋಟಿ ನಡೆಸುವುದನ್ನು ಬಿಟ್ಟು, ಯೋಜನೆಯಿಂದ ಆ ಭಾಗದ ಜನರಿಗೂ ಅನುಕೂಲವಾಗುವಂತೆ ಮಾಡಬೇಕು’ ಎಂದರು.
‘ವಾಲ್ಮೀಕಿ ನಿಗಮ ಹಗರಣ, ಮುಡಾ ನಿವೇಶನ ಹಂಚಿಕೆ ಹಗರಣ, ಸಿಎ ನಿವೇಶನ ಹಂಚಿಕೆ ಹಗರಣಗಳು ಮುಖ್ಯಮಂತ್ರಿ ಮತ್ತು ಸಚಿವರಿಗೆ ಸುತ್ತಿಕೊಂಡಿವೆ. ಅವರ ಸಂಕಷ್ಟ ಎಂಥದ್ದು ಎಂಬುದು ನನಗೆ ಅರ್ಥವಾಗುತ್ತಿದೆ. ಆದರೆ ಅದನ್ನು ಒಪ್ಪಿಕೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ತಮ್ಮ ವಿರುದ್ಧ ಪಿತೂರಿ ನಡೆಯುತ್ತಿದೆ ಎಂದು ಆರೋಪಿಸುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.
ಸದಸ್ಯತ್ವ ನೋಂದಣಿ: ವಿಜಯೇಂದ್ರ ಅವರು ರಾಜ್ಯ ಬಿಜೆಪಿಯ ಹಿರಿಯ ನಾಯಕ ರಾಮಚಂದ್ರೇಗೌಡ ಅವರ ಮನೆಗೆ ಭೇಟಿ ನೀಡಿ, ಅವರ ಸದಸ್ಯತ್ವ ನವೀಕರಣ ಮಾಡಿದರು.
‘ಆರಂಭದಲ್ಲಿ ನಾವು ರಸ್ತೆಗಳಲ್ಲಿ, ವೃತ್ತಗಳಲ್ಲಿ ಕೂತು ಸದಸ್ಯತ್ವ ನೋಂದಣಿ ಮಾಡಿಸಿದ್ದೆವು. ಈಗ ಮೊಬೈಲ್‌ನಲ್ಲಿಯೇ ಪಕ್ಷದ ಸದಸ್ಯತ್ವ ಪಡೆಯಬಹುದು. ಇದೊಂದು ದೊಡ್ಡ ಅನುಕೂಲ’ ಎಂದು ರಾಮಚಂದ್ರೇಗೌಡ ಹೇಳಿದರು.
ಬಿಜೆಪಿ ನಾಯಕರ ವಿರುದ್ಧ ರಾಜ್ಯದ ಕಾಂಗ್ರೆಸ್ ಸರ್ಕಾರ ಹೂಡುತ್ತಿರುವ ಸಂಚು ಬೆದರಿಕೆ ತಂತ್ರಗಳಿಗೆ ನಾವು ಹೆದರುವ ಪ್ರಶ್ನೆಯೇ ಇಲ್ಲ.–ಬಿ.ವೈ.ವಿಜಯೇಂದ್ರ, ರಾಜ್ಯಾಧ್ಯಕ್ಷ ಬಿಜೆಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.