ADVERTISEMENT

ರಾಜ್ಯ ಬಜೆಟ್‌: ಕೃಷಿ ಕ್ಷೇತ್ರಕ್ಕೆ ಸಿಕ್ಕಿದ್ದು ಏನು? 

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2019, 9:08 IST
Last Updated 8 ಫೆಬ್ರುವರಿ 2019, 9:08 IST
   

ಬೆಂಗಳೂರು: 2019–20ನೇ ಸಾಲಿನ ಬಜೆಟ್‌ ಮಂಡಿಸಿದ ಕುಮಾರಸ್ವಾಮಿ, ಕೃಷಿಗೆ ಸಂಬಂಧಿಸಿದಎಲ್ಲಾ ಕ್ಷೇತ್ರಗಳಿಗೂ ಹೊಸ ಕೊಡುಗೆಗಳನ್ನು ಘೋಷಣೆ ಮಾಡಿದ್ದಾರೆ.

ಕೃಷಿ ಭಾಗ್ಯ, ಸಾವಯವ ಕೃಷಿ, ಶೂನ್ಯ ಬಂಡವಾಳ, ಕೃಷಿ ಹಾಗೂ ಇಸ್ರೇಲ್ ಮಾದರಿ ಕಿರು ನೀರಾವರಿ ಕಾರ್ಯಕ್ರಮಗಳಿಗೆ ಒಟ್ಟಾರೆ ₹472 ಕೋಟಿ ಅನುದಾನ ಮೀಸಲಿಡಲಾಗಿದೆ.ಮುಖ್ಯಮಂತ್ರಿಗಳ ಸೂಕ್ಷ್ಮ ನೀರಾವರಿ ಯೋಜನೆಯಡಿ ಎಲ್ಲ ವರ್ಗದ ರೈತರಿಗೆ ಶೇ 90ರಷ್ಟು ಪ್ರೋತ್ಸಾಹಧನ ನೀಡುವುದಕ್ಕಾಗಿ ₹368 ಕೋಟಿ ಅನುದಾನ ನೀಡಿದ್ದಾರೆ.

ಬರಪೀಡಿತ ಮತ್ತು ಅತಿಹೆಚ್ಚು ಅಂತರ್ಜಲ ಕುಸಿತ ಇರುವ 100 ತಾಲ್ಲೂಕುಗಳಲ್ಲಿ ಬರನಿರೋಧಕ ಜಲಾನಯನ ಚಟುವಟಿಕೆಗಳ ಅನುಷ್ಠಾನ,ಸಿರಿಧಾನ್ಯ ಬೆಳೆಗಾರರ ಉತ್ತೇಜನಕ್ಕೆ ‘ರೈತ ಸಿರಿ’ ಯೋಜನೆ, ಕರಾವಳಿ ಹಾಗೂ ಮಲೆನಾಡು ಜನರಿಗೆ ಭತ್ತ ಬೆಳೆಯಲು ಉತ್ತೇಜಿಸಲುಪ್ರತಿ ಹೆಕ್ಟೇರ್‌ಗೆ ₹7500 ನೀಡುವ‘ಕರಾವಳಿ ಪ್ಯಾಕೇಜ್’ ಘೋಷಿಸಲಾಯಿತು.ಮಂಡ್ಯ ಜಿಲ್ಲೆಯ ವಿ.ಸಿ. ಫಾರಂ ಹಾಗೂ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನಲ್ಲಿ ಕೃಷಿ ಪ್ರಾತ್ಯಕ್ಷಿಕೆ ಸಂಸ್ಥೆ ಸ್ಥಾಪನೆ ಮಾಡುವುದಾಗಿ ಕುಮಾರಸ್ವಾಮಿ ಘೋಷಿಸಿದರು.

ADVERTISEMENT

ತೋಟಗಾರಿಕೆ

ದಾಳಿಂಬೆ ಹಾಗೂ ದ್ರಾಕ್ಷಿ ಬೆಳೆಗಾರ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ₹ 150 ಕೋಟಿಯವಿಶೇಷ ಪ್ಯಾಕೇಜ್,ರಾಮನಗರ , ಧಾರವಾಡ ಜಿಲ್ಲೆಗಳಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಮಾವು ಉತ್ಪನ್ನ ಸಂಸ್ಕರಣಾ ಘಟಕ ಹಾಗೂ ಕೋಲಾರದಲ್ಲಿ ಟೊಮೆಟೊ ಉತ್ಪನ್ನಗಳ ಸಂಸ್ಕರಣಾ ಘಟಕ ಸ್ಥಾಪನೆ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಯಿತು.ಜೇನು ಕೃಷಿ ಉತ್ತೇಜನಕ್ಕೆ ₹5 ಕೋಟಿ, ಮಿಡಿಸೌತೆ ಬೆಳೆಗಾರರ ಅನುಕೂಲಕ್ಕಾಗಿ ಹಾಗೂ ರಫ್ತು ಮೌಲ್ಯ ಹೆಚ್ಚಿಸಲು ₹6 ಕೋಟಿಗಳ ವಿಶೇಷ ಪ್ಯಾಕೇಜ್‌ ಕೃಷಿಕರಿಗೆಸಿಗಲಿದೆ.

ರೇಷ್ಮೆ

ಕಚ್ಚಾ ರೇಷ್ಮೆ ದರದಲ್ಲಿ ಸ್ಥಿರತೆ ಕಾಪಾಡಲು ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಬಲಪಡಿಸಲು ₹ 10 ಕೋಟಿ , ರೇಷ್ಮೆ ವಿಸ್ತರಣಾ ಕಾರ್ಯಕ್ರಮಕ್ಕೆ ₹2 ಕೋಟಿ ಮೀಸಲಿಡಲಾಗಿದೆ.ಸಂತೇಮರಹಳ್ಳಿ ರೇಷ್ಮೆ ಕಾರ್ಖಾನೆ ಆಧುನೀಕರಣ ಹಾಗೂ ಯುವಕರಿಗೆ ತರಬೇತಿ ನೀಡಲು ₹2 ಕೋಟಿ, ಚಾಮರಾಜನಗರ ರೇಷ್ಮೆ ಕಾರ್ಖಾನೆ ಪುನಶ್ಚೇತನಕ್ಕೆ ₹5ಅನುದಾನ ನೀಡಲಾಗಿದೆ.

ಪಶುಸಂಗೋಪನೆ

ರಾಜ್ಯದ 15 ಜಿಲ್ಲೆಗಳಿಗೆಸುಸಜ್ಜಿತ ಪಶುಚಿಕಿತ್ಸಾ ವಾಹನ ಒದಗಿಸುವುದು, ಹತ್ತು ಸಾವಿರ ಬಡ ನಿರುದ್ಯೋಗಿ ಯವಕ–ಯುವತಿಯರಿಗೆ ‘ನಾಟಿ ಕೋಳಿ ಸಾಕಾಣಿಕೆ’ ಅವಕಾಶ,ಹಾಲು ಉತ್ಪಾದಕರ ಪ್ರೋತ್ಸಾಹಧನ ಪ್ರತಿ ಲೀಟರ್‌ಗೆ ₹1ಹೆಚ್ಚಳ ಮಾಡಲಾಗಿದೆ. ಹಾಲು ಉತ್ಪಾದಕರ ಕ್ಷೇಮಾಭಿವೃದ್ಧಿಗೆ ₹2,502 ಕೋಟಿಯನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ.

ಮೀನುಗಾರಿಕೆ

ಮೀನುಗಾರಿಕೆ ದೋಣಿಗಳಿಗೆ ಇಸ್ರೊ ಅಧಿಕೃತಗೊಳಿಸಿರುವ ಡಿಎಟಿ ಉಪಕರಣ ಅಳವಡಿಸಿಕೊಳ್ಳಲು ಶೇ 50 ರಷ್ಟು ಸಹಾಯಧನವನ್ನು ಸರ್ಕಾರ ನೀಡಲಿದೆ.ಸಿಗಡಿ ಮತ್ತು ಮೀನು ಕೃಷಿಗೆ ಪ್ರೋತ್ಸಾಹ ಘೋಷಿಸಿದ್ದು, 400 ಘಟಕಗಳಿಗೆ ಸರ್ಕಾರದ ವತಿಯಿಂದ ಸಹಾಯಧನ ನೀಡಲಾಗುತ್ತಿದೆ.

ಮತ್ಯ್ಸಾಶ್ರಯ ಯೋಜನೆ ಮುಂದುವರಿಕೆ,ಮಲ್ಪೆಯ ಮೀನುಗಾರಿಕೆ ಚಟುವಟಿಕೆಗಳ ಅಭಿವೃದ್ಧಿಗೆ ಜೆಟ್ಟಿ ನಿರ್ಮಾಣ ಹಾಗೂ ತ್ಯಾಜ್ಯ ನಿರ್ವಹಣಾ ಘಟಕ, ನೈರ್ಮಲ್ಯ ಸೌಲಭ್ಯಅಭಿವೃದ್ಧಿಗಾಗಿ ₹15 ಕೋಟಿ ಅನುದಾನ ನೀಡಿದೆ. ಡೀಸೆಲ್‌, ಸೀಮೆಎಣ್ಣೆ ದೋಣಿಗಳಿಗೆ ಸಬ್ಸಿಡಿಯನ್ನು ಘೋಷಿಸಲಾಗಿದೆ.

ಸಹಕಾರ

ರೈತರಿಗೆ ಕನಿಷ್ಟ ಬೆಂಬಲ ಬೆಲೆ ನೀಡುವ ರೈತ ಕಣಜ ಯೋಜನೆ ಜಾರಿ, ಕೃಷಿ ಮಾರುಕಟ್ಟೆಗಳಲ್ಲಿ ಶಾಶ್ವತ ಸಂಗ್ರಹಣಾ ಕೇಂದ್ರ ಸ್ಥಾಪನೆ, ಈರುಳ್ಳಿ , ಆಲೂಗಡ್ಡೆ ಹಾಗೂ ಟೊಮೆಟೊ ಉತ್ಪನ್ನಗಳಿಗೆ ಬೆಲೆ ಕುಸಿತದಲ್ಲಿ ನೆರವಾಗಲು ‘ಬೆಲೆ ಕೊರತೆ ಪಾವತಿ’ಯೋಜನೆಯನ್ನು ಸರ್ಕಾರ ಜಾರಿ ಮಾಡಿದೆ.

ಸಹಕಾರ ವಲಯದಲ್ಲಿ ಕೃಷಿ ಇಲಾಖೆಯಲ್ಲಿ ರೈತ ಉತ್ಪಾದಕರ ಸಂಸ್ಥೆಯ ಮಾದರಿಯಲ್ಲಿ 500 ಸಂಯುಕ್ತ ಬೇಸಾಯ ಸಹಕಾರ ಸಂಘಗಳ ಸ್ಥಾಪನೆ, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅವರ ಆಭರಣಗಳ ಮೇಲೆ ಶೇ 3ರಷ್ಟು ಬಡ್ಡಿದರಲ್ಲಿ ಸಾಲ ನೀಡುವ ’ಗೃಹಲಕ್ಷ್ಮಿ’ ಬೆಳೆ ಸಾಲ ಯೋಜನೆ ಜಾರಿ.

ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ 500 ಸ್ವಯಂಚಾಲಿತ ಹಾಲು ಶೇಖರಣೆ ಯಂತ್ರ ಖರೀದಿ, ರಾಜ್ಯದ 5 ತರಕಾರಿ ಮಾರುಕಟ್ಟೆಗಳಿಗೆ ₹10 ಕೋಟಿ ವೆಚ್ಚದಲ್ಲಿ ಸಮಗ್ರ ವೈಜ್ಞಾನಿಕ ತ್ಯಾಜ್ಯ ನಿರ್ವಹಣಾ ಘಟಕಗಳ ಸ್ಥಾಪನೆ, ಕೇರಳದಂತೆ ಕರ್ನಾಟಕದಲ್ಲಿಯೂ ಸಾಲ ಪರಿಹಾರ ಆಯೋಗ ಸ್ಥಾಪನೆಯಾಗಲಿದೆ.

ರೈತರಿಗೆ ನೇರ ಮಾರಾಟಕ್ಕೆ ಅವಕಾಶ ಹಾಗೂ ಸಾಗಾಣಿಕ ವೆಚ್ಚ ಉಳಿತಾಯ ಮಾಡುವ ಉದ್ದೇಶದಿಂದ600 ಗ್ರಾಮೀಣ ಸಂತೆಗಳಿಗೆ ಮೂಲಸೌಲಭ್ಯ ಒದಗಿಸಿ ಕಿರು ಮಾರುಕಟ್ಟೆಗಳಾಗಿ ಅಭಿವೃದ್ಧಿಮಾಡಲು ಯೋಜನೆ ರೂಪಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.