ADVERTISEMENT

ಪಿ.ಎಂ. ಆವಾಸ್‌ ಯೋಜನೆ: ಅನುದಾನ ಹೆಚ್ಚಳಕ್ಕೆ ಆಗ್ರಹಿಸಿ ಪ್ರಧಾನಿಗೆ ಪತ್ರ

ಸಂಪುಟ ಸಭೆಯಲ್ಲಿ ನಿರ್ಣಯ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 23:19 IST
Last Updated 14 ನವೆಂಬರ್ 2024, 23:19 IST
<div class="paragraphs"><p>ವಿಧಾನ ಸೌಧ</p></div>

ವಿಧಾನ ಸೌಧ

   

(ಸಾಂಕೇತಿಕ ಚಿತ್ರ)

ಬೆಂಗಳೂರು: ಪ್ರಧಾನ ಮಂತ್ರಿ ಆವಾಸ್‌ ಯೋಜನೆ (ನಗರ) 2.0 ಅಡಿಯಲ್ಲಿ ಕೇಂದ್ರ ಸರ್ಕಾರದ ಪಾಲಿನ ಅನುದಾನವನ್ನು ಹೆಚ್ಚಿಸುವಂತೆ ಒತ್ತಾಯಿಸಿ ಪ್ರಧಾನಿಯವರಿಗೆ ಪತ್ರ ಬರೆಯಲು ಗುರುವಾರ ನಡೆದ ಸಂಪುಟ ಸಭೆ ನಿರ್ಧರಿಸಿದೆ.

ADVERTISEMENT

ಸಭೆಯ ಬಳಿಕ ವಿವರ ನೀಡಿದ ಕಾನೂನು ಸಚಿವ ಎಚ್.ಕೆ. ಪಾಟೀಲ, ‘ಪಿ.ಎಂ. ಆವಾಸ್‌ ಯೋಜನೆಯ ಪ್ರತಿ ಫಲಾನುಭವಿಗೆ ಕೇಂದ್ರ ಸರ್ಕಾರವು ₹ 1.5 ಲಕ್ಷ ಅನುದಾನವನ್ನು ಮಾತ್ರ ಒದಗಿಸುತ್ತಿದೆ. ಇದರಿಂದ ಯೋಜನೆ ಅನುಷ್ಠಾನ ಕಷ್ಟವಾಗುತ್ತಿದೆ. ಕೇಂದ್ರದ ಪಾಲಿನ ಅನುದಾನ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಿದ್ದಾರೆ’ ಎಂದರು.

ಪಿ.ಎಂ. ಆವಾಸ್‌ 2.0 ಯೋಜನೆ ಅನುಷ್ಠಾನಕ್ಕೆ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಾಜ್ಯಮಟ್ಟದ ಮಂಜೂರಾತಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆ, ವಿವಿಧ ಹಂತಗಳಲ್ಲಿ ಸಮಿತಿಗಳ ರಚನೆ, ಶೇಕಡ 60:40ರ ಅನುಪಾತದಲ್ಲಿ ಕೇಂದ್ರ ಹಾಗೂ ರಾಜ್ಯಗಳು ಅನುದಾನ ಭರಿಸುವುದು ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ತಿಳಿಸಿರುವ ಎಲ್ಲ ಸುಧಾರಣಾ ಕ್ರಮಗಳನ್ನು ಅನುಷ್ಠಾನಗೊಳಿಸಲು ಸಂಪುಟ ಒಪ್ಪಿಗೆ ಸೂಚಿಸಿದೆ.

ಅಂಗನವಾಡಿಗಳಿಗೆ ಅನುದಾನ:

ರಾಜ್ಯದ 17,551 ಅಂಗನವಾಡಿ ಕೇಂದ್ರಗಳಿಗೆ ಎಲ್‌ಇಡಿ ಮತ್ತು ಇತರೆ ಧ್ವನಿ ಹಾಗೂ ದೃಶ್ಯ ಸಾಧನ, ಆರ್.ಒ. ಕುಡಿಯುವ ನೀರು ಶುದ್ಧೀಕರಣ ಘಟಕ, ಮಳೆ ನೀರಿನ ಕೊಯ್ಲು, ಪೋಷಣ್ ವಾಟಿಕಾ ಮತ್ತು ಇತರೆ ಸೌಲಭ್ಯಗಳನ್ನು ₹ 174.75 ಕೋಟಿ ವೆಚ್ಚದಲ್ಲಿ ಒದಗಿಸಲು ನಿರ್ಧರಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಪ್ರತಿ ಅಂಗನವಾಡಿಗೆ ₹ 1 ಲಕ್ಷ ಒದಗಿಸಲಾಗುವುದು ಎಂದು ಪಾಟೀಲ ವಿವರ ನೀಡಿದರು.

ರಾಜ್ಯದ 69,919 ಅಂಗನವಾಡಿ ಕೇಂದ್ರಗಳಿಗೆ ₹ 20.98 ಕೋಟಿ ವೆಚ್ಚದಲ್ಲಿ ಶಾಲಾ ಪೂರ್ವ ಶಿಕ್ಷಣ ಕಿಟ್‌ಗಳನ್ನು ವಿತರಿಸುವ ಪ್ರಸ್ತಾವಕ್ಕೆ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಪ್ರತಿ ಕೇಂದ್ರಕ್ಕೆ ₹ 3,000 ಮೌಲ್ಯದ ಕಿಟ್‌ ವಿತರಿಸಲಾಗುವುದು ಎಂದು ಪಾಟೀಲ ಹೇಳಿದರು.

ಉಡುಪಿ ಮತ್ತು ದಾವಣಗೆರೆ ಜಿಲ್ಲಾ ಆಸ್ಪತ್ರೆಗಳಲ್ಲಿ ಒಟ್ಟು ₹ 39.37 ಕೋಟಿ ವೆಚ್ಚದಲ್ಲಿ ತಲಾ 50 ಹಾಸಿಗೆಗಳ ತೀವ್ರನಿಗಾ ಘಟಕ ಸ್ಥಾಪಿಸುವ ಪ್ರಸ್ತಾವಕ್ಕೆ ಒಪ್ಪಿಗೆ ನೀಡಲಾಗಿದೆ.

ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಮಂಡ್ಯ, ಹುಬ್ಬಳ್ಳಿ, ಹಾಸನ, ಬಳ್ಳಾರಿ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಒಟ್ಟು ₹ 148.20 ಕೋಟಿ ವೆಚ್ಚದಲ್ಲಿ ತಲಾ  50 ಹಾಸಿಗೆಗಳ ಸಾಮರ್ಥ್ಯದ ತುರ್ತು ನಿಗಾ ಘಟಕ (ಕ್ರಿಟಿಕಲ್‌ ಕೇರ್‌ ಯೂನಿಟ್‌) ನಿರ್ಮಾಣದ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಗಿದೆ.

ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ: ತಿದ್ದುಪಡಿ ಮಸೂದೆಗಳಿಗೆ ಸಂಪುಟ ತಡೆ

ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗಳ ವ್ಯಾಪ್ತಿಯಲ್ಲಿರುವ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಶೇಕಡ 50ರಷ್ಟು ಸೀಟು ಗಳನ್ನು ಅದೇ ಸಮುದಾಯದ ವಿದ್ಯಾರ್ಥಿಗಳಿಗೆ ನೀಡಬೇಕೆಂಬ ಷರತ್ತನ್ನು ಸಡಿಲಿಸುವ ಎರಡು ತಿದ್ದುಪಡಿ ಮಸೂದೆಗಳನ್ನು ಸಂಪುಟ ತಡೆಹಿಡಿದಿದೆ.

‘ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆ’ಯ ಸ್ಥಾನಮಾನ ಹೊಂದಿರುವ ಸಂಸ್ಥೆಗಳಲ್ಲಿ ಶೇ 25ರಷ್ಟು ಸೀಟುಗಳನ್ನು ಅದೇ ಸಮುದಾಯದ ವಿದ್ಯಾರ್ಥಿಗಳಿಗೆ ನೀಡಬೇಕು ಎಂಬ ಬದಲಾವಣೆ ತಿದ್ದುಪಡಿ ಮಸೂದೆಗಳಲ್ಲಿದೆ.

55 ಸಜಾ ಕೈದಿಗಳ ಬಿಡುಗಡೆಗೆ ನಿರ್ಧಾರ

ಜೀವಾವಧಿ ಶಿಕ್ಷೆಗೆ ಗುರಿಯಾಗಿ ರಾಜ್ಯದ ವಿವಿಧ ಕಾರಾಗೃಹಗಳಲ್ಲಿರುವ 55 ಸಜಾ ಕೈದಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲು ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಕಾನೂನು ಸಚಿವ
ಎಚ್.ಕೆ. ಪಾಟೀಲ ತಿಳಿಸಿದರು.

‘55 ಕೈದಿಗಳನ್ನು ರಾಜ್ಯ ಸರ್ಕಾರ ಸನ್ನಡತೆ ಆಧಾರದಲ್ಲಿ ಅವಧಿಪೂರ್ವ ಬಿಡುಗಡೆ ಮಾಡುತ್ತಿದೆ. ಇನ್ನೂ ಮೂವರು ಕೈದಿಗಳನ್ನು ಕೇಂದ್ರ ಗೃಹ ಸಚಿವಾಲಯದ ಒಪ್ಪಿಗೆ ದೊರೆತ ಬಳಿಕ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ’ ಎಂದರು.

ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿರುವ 19, ಬೆಳಗಾವಿ ಮತ್ತು ಬಳ್ಳಾರಿಯಲ್ಲಿರುವ ತಲಾ ಒಂಬತ್ತು, ಕಲಬುರಗಿಯಲ್ಲಿರುವ ಏಳು, ಮೈಸೂರು ಮತ್ತು ವಿಜಯಪುರದಲ್ಲಿರುವ ತಲಾ ನಾಲ್ಕು, 
ಧಾರವಾಡದಲ್ಲಿರುವ ಮೂರು ಕೈದಿಗಳ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಸಂಪುಟ ಸಭೆಯ ಇತರ ನಿರ್ಣಯಗಳು

  • ವಿಧಾನ ಪರಿಷತ್‌ನ ಒಂದು ಸ್ಥಾನದ ನಾಮನಿರ್ದೇಶನಕ್ಕೆ ಮುಖ್ಯಮಂತ್ರಿಗೆ ಅಧಿಕಾರ

  • ಕರ್ನಾಟಕ ಜಾಗತಿಕ ಸಾಮರ್ಥ್ಯ ಕೇಂದ್ರಗಳ ನೀತಿ–2024–15ಕ್ಕೆ ಒಪ್ಪಿಗೆ

  • ₹28 ಕೋಟಿ ವೆಚ್ಚದಲ್ಲಿ ಬೆಂಗಳೂರಿನಲ್ಲಿ ಕೃತಕ ಬುದ್ಧಿಮತ್ತೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ

  • ಗದಗ–ಬೆಟಗೇರಿ ವ್ಯಾಪಾರ, ಸಂಸ್ಕೃತಿ ಮತ್ತು ವಸ್ತುಪ್ರದರ್ಶನ ಪ್ರಾಧಿಕಾರ (ತಿದ್ದುಪಡಿ) ಸುಗ್ರೀವಾಜ್ಞೆಗೆ ಅನುಮೋದನೆ

  • ಬೆಂಗಳೂರಿನ ಹೆಬ್ಬಾಳದಲ್ಲಿ ₹20 ಕೋಟಿ ವೆಚ್ಚದಲ್ಲಿ ಸಿರಿಧಾನ್ಯ ಹಬ್‌ ಸ್ಥಾಪನೆ

  • ಚನ್ನಪಟ್ಟಣದಲ್ಲಿ  ₹250 ಕೋಟಿ ವೆಚ್ಚದಲ್ಲಿ ರೇಷ್ಮೆ ಗೂಡಿನ ಮಾರುಕಟ್ಟೆ ನಿರ್ಮಾಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.