ADVERTISEMENT

ಸಿದ್ದರಾಮಯ್ಯ ಸರ್ಕಾರಕ್ಕೆ ವರ್ಷದ ಸಂಭ್ರಮ: ಸವಾಲುಗಳ ಮಧ್ಯೆ ‘ಗ್ಯಾರಂಟಿ’ ಅನುಷ್ಠಾನ

​ಪ್ರಜಾವಾಣಿ ವಾರ್ತೆ
Published 19 ಮೇ 2024, 23:30 IST
Last Updated 19 ಮೇ 2024, 23:30 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಸೋಮವಾರ (ಮೇ 20) ವರ್ಷ ಪೂರೈಸಲಿದೆ.

ಹೆಚ್ಚುವರಿ ಆರ್ಥಿಕ ಸಂಪನ್ಮೂಲಗಳ ಸಂಗ್ರಹದ ಸವಾಲಿನ ಮಧ್ಯೆಯೇ ಐದು ಗ್ಯಾರಂಟಿ ಯೋಜನೆ
ಗಳನ್ನು ಜಾರಿಗೊಳಿಸಿರುವ ‘ಕೈ’ಸರ್ಕಾರ, ಅದರ ಪ್ರಭಾವವನ್ನು ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಕಾಣಲು ಕಾತರದಿಂದ ಕಾಯುತ್ತಿದೆ.

2023ರ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ 135 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತ ಪಡೆದಿದ್ದ ಕಾಂಗ್ರೆಸ್‌ ಪಕ್ಷ, ಮೇ 20ರಂದು ಸರ್ಕಾರ ರಚಿಸಿತ್ತು. ಸಿದ್ದರಾಮಯ್ಯ ಎರಡನೇ ಅವಧಿಗೆ ರಾಜ್ಯದ ಮುಖ್ಯಮಂತ್ರಿ ಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಇತರ ಎಂಟು ಸಚಿವರೂ ಅದೇ ದಿನ ಸಂ‍‍ಪುಟ ಸೇರಿದ್ದರು. ಮೇ 27ರಂದು ಸಂಪುಟದ ವಿಸ್ತರಣೆಯೊಂದಿಗೆ ಎಲ್ಲ ಸ್ಥಾನಗಳನ್ನೂ ಭರ್ತಿ ಮಾಡಲಾಗಿತ್ತು.

ADVERTISEMENT

ಪ್ರತಿ ಕುಟುಂಬಕ್ಕೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ಪೂರೈಸುವ ‘ಗೃಹ ಜ್ಯೋತಿ’, ಕುಟುಂಬದ ಯಜಮಾನಿಗೆ ತಿಂಗಳಿಗೆ ₹2,000 ನೆರವು ನೀಡುವ ‘ಗೃಹ ಲಕ್ಷ್ಮಿ’, ಅಂತ್ಯೋದಯ ಮತ್ತು ಆದ್ಯತಾ ವಲಯದ ಕುಟುಂಬಗಳ (ಪಿಎಚ್‌ಎಚ್‌) ಪಡಿತರ ಚೀಟಿ ಹೊಂದಿದ ಕುಟುಂಬಗಳ ಪ್ರತಿ ಸದಸ್ಯರಿಗೆ ತಿಂಗಳಿಗೆ 10 ಕೆ.ಜಿ. ಆಹಾರ ಧಾನ್ಯವನ್ನು ಉಚಿತವಾಗಿ ವಿತರಿಸುವ ‘ಅನ್ನ ಭಾಗ್ಯ’, ರಾಜ್ಯ ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆಗಳ ಬಸ್‌ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ‘ಶಕ್ತಿ’ ಮತ್ತು ನಿರುದ್ಯೋಗಿ ಪದವೀಧರರು ಹಾಗೂ ಡಿಪ್ಲೊಮಾ ಪದವೀಧರರಿಗೆ ಮಾಸಾಶನ ನೀಡುವ ‘ಯುವನಿಧಿ’ ಗ್ಯಾರಂಟಿ ಗಳನ್ನು ಕಾಂಗ್ರೆಸ್‌ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿತ್ತು.

ಪ್ರಮಾಣವಚನದ ಬಳಿಕ ನಡೆಸಿದ ಮೊದಲ ಸಂಪುಟ ಸಭೆಯಲ್ಲೇ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಒಪ್ಪಿಗೆ ನೀಡಲಾಗಿತ್ತು. ಹಂತ ಹಂತವಾಗಿ ಈ ಯೋಜನೆಗಳು ಅನುಷ್ಠಾನಕ್ಕೆ ಬಂದವು. ಯುವನಿಧಿ ಇನ್ನೂ ಅನುಷ್ಠಾನದ ಹಂತದಲ್ಲಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನ ಕ್ಕಾಗಿ ₹52,000 ಕೋಟಿ ಸಂಪನ್ಮೂಲ ಸಂಗ್ರಹಿಸಬೇಕಾದ ಒತ್ತಡವೂ ಸರ್ಕಾರದ ಮೇಲಿತ್ತು. ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟ ಸರ್ಕಾರ, ಅಭಿವೃದ್ಧಿ ವೆಚ್ಚಗಳಿಗೆ ಕತ್ತರಿ ಹಾಕಿ ಗ್ಯಾರಂಟಿ ಗಳತ್ತ ಅನುದಾನದ ಹರಿವು ತಿರುಗಿಸಿತ್ತು. ಲೋಕಸಭಾ ಚುನಾವಣೆಯ ಬಳಿಕ ಮುಂದೇನು ಎಂಬ ಕುತೂಹಲ ರಾಜ್ಯದಲ್ಲಿದೆ.

ಸಂಘರ್ಷದ ಕಾಲ: ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಒಂದು ವರ್ಷದಲ್ಲಿ ಕೇಂದ್ರ ಸರ್ಕಾರದ ಜತೆ ಹಲವು ವಿಚಾರಗಳಲ್ಲಿ ಸಂಘರ್ಷ ನಡೆಸಿದೆ. ತೆರಿಗೆ ಪಾಲು ಮತ್ತು ಅನುದಾನದಲ್ಲಿ ನ್ಯಾಯಯುತ ಹಂಚಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರ ನಡೆಸುತ್ತಿರುವ ಆಂದೋಲನ ರಾಷ್ಟ್ರವ್ಯಾಪಿ ಚರ್ಚೆಗೆ ಎಡೆಮಾಡಿತು. ದಕ್ಷಿಣದ ಇತರ ರಾಜ್ಯಗಳೂ ಕರ್ನಾಟಕದ ಕೂಗಿಗೆ ದನಿಗೂಡಿಸಿದವು.

ಅನುದಾನ ಹಂಚಿಕೆ, ತೆರಿಗೆ ಪಾಲು, ನೆರವು ಹೀಗೆ ಹಲವು ವಿಚಾರಗಳಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಂಘರ್ಷದ ಹಾದಿಯಲ್ಲೇ ಸಾಗುತ್ತಿವೆ. ಬರ ಪರಿಹಾರ ಮಂಜೂರು ಮಾಡದೆ ಸತಾಯಿಸುತ್ತಿದ್ದ ಕೇಂದ್ರ ಸರ್ಕಾರದ ನಿಲುವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ರಾಜ್ಯ ಸರ್ಕಾರ, ಅಲ್ಪ ಪ್ರಮಾಣದ ಪರಿಹಾರ ಪಡೆಯುವಲ್ಲೂ ಯಶಸ್ವಿಯಾಯಿತು.

ಅಧಿಕಾರ ಹಂಚಿಕೆಯ ಸದ್ದು
ಮುಖ್ಯಮಂತ್ರಿ ಹುದ್ದೆಯ ಅವಧಿಯನ್ನು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮಧ್ಯೆ ಹಂಚಿಕೆ ಮಾಡಲಾಗುತ್ತದೆ ಎಂಬ ಸುದ್ದಿ ಆಗಾಗ ರಾಜ್ಯ ರಾಜಕಾರಣದಲ್ಲಿ ಸದ್ದು ಮಾಡುತ್ತಲೇ ಇದೆ. ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಹಲವು ಬಾರಿ ಈ ವಿಚಾರ ಮಾರ್ದನಿಸಿತು. ಜಾತಿವಾರು ಪ್ರಾತಿನಿಧ್ಯ ಆಧಾರದಲ್ಲಿ ಹೆಚ್ಚು ಮಂದಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಬೇಕೆಂಬ ಬೇಡಿಕೆ ಕೆಲವು ಸಚಿವರಿಂದ ಆಗಾಗ ಕೇಳಿಬರುತ್ತಿದೆ. ‘ಆಪರೇಷನ್‌ ಕಮಲ’ದ ಮೂಲಕ ಬಿಜೆಪಿ ನಾಯಕರು ‘ಕೈ’ ಸರ್ಕಾರದ ಬುಡ ಅಲ್ಲಾಡಿಸುವ ಪ್ರಯತ್ನಕ್ಕೆ ಕೈ ಹಾಕಬಹುದು ಎಂಬ ಮಾತೂ ಚಾಲ್ತಿಯಲ್ಲಿದೆ.
ಬೆಂಬಿಡದ ‘ಕಮಿಷನ್‌’ ಭೂತ!
ಬಿಜೆಪಿ ನೇತೃತ್ವದ ಸರ್ಕಾರ ಹಿಂದೆ ಇದ್ದಾಗ ಶೇಕಡ 40ರಷ್ಟು ಕಮಿಷನ್ ಆರೋಪ ಜೋರಾಗಿ ಸದ್ದು ಮಾಡಿತ್ತು. ಕೈ ಸರ್ಕಾರವನ್ನೂ ಈ ‘ಕಮಿಷನ್‌’ ಭೂತ ಬಿಟ್ಟಿಲ್ಲ. ವಿವಿಧ ಇಲಾಖೆಗಳಲ್ಲಿ ಗುತ್ತಿಗೆದಾರರಿಗೆ ಬಿಲ್‌ ಪಾವತಿಗೆ ಭಾರಿ ಮೊತ್ತದ ಕಮಿಷನ್‌ಗೆ ಬೇಡಿಕೆ ಇಡಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಲೇ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.