ಬೆಂಗಳೂರು: ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯದ ಆರ್ಥಿಕ ಚಟುವಟಿಕೆ ಹೆಚ್ಚಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿಧಾನಸೌಧದ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ 100 ವಿದ್ಯುತ್ ಚಾಲಿತ ಬಸ್‌ಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
‘ನಮ್ಮ ಗ್ಯಾರಂಟಿಗಳಿಂದ ಜನರ ಕೊಳ್ಳುವ ಶಕ್ತಿ ಹೆಚ್ಚಾಗಿ ರಾಜ್ಯದ ಆರ್ಥಿಕ ಚಟುವಟಿಕೆ ಹೆಚ್ಚಳವಾಗಿದೆ. ಇದರಿಂದ ರಾಜ್ಯದ ಆರ್ಥಿಕ ಬೆಳವಣಿಗೆ ಆಗುತ್ತಿದೆ. ಕಾರ್ಮಿಕ ಮತ್ತು ರೈತ ಮಹಿಳೆಯರು, ದುಡಿಯುವ ವರ್ಗಗಳ ಮಹಿಳೆಯರಿಗೆ ಇದರಿಂದ ಸಾಕಷ್ಟು ಹಣ ಉಳಿತಾಯವಾಗಿದೆ. ಆ ಹಣವನ್ನು ತಮ್ಮ ಕುಟುಂಬದ ಇತರೆ ಅಗತ್ಯಗಳಿಗೆ ಬಳಸುತ್ತಿದ್ದಾರೆ. ಹೀಗಾಗಿ ಲಕ್ಷಾಂತರ ಕುಟುಂಬಗಳ ಆರ್ಥಿಕ ಶಕ್ತಿಯೂ ಹೆಚ್ಚುತ್ತಿದೆ’ ಎಂದು ಅವರು ಹೇಳಿದ್ದಾರೆ.
ಉಚಿತ ಬಸ್ ಪ್ರಯಾಣವನ್ನು ಬಿಜೆಪಿಯವರು ಟೀಕಿಸುತ್ತಿದ್ದಾರೆ. ಆದರೆ ಬಿಜೆಪಿಯವರು ತಾವು ಅಧಿಕಾರದಲ್ಲಿದ್ದಾಗ ಈ ಜನೋಪಯೋಗಿ ಯೋಜನೆಯನ್ನು ಏಕೆ ಜಾರಿಗೆ ತರಲಿಲ್ಲ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ರಾಜ್ಯದ 4 ಕೋಟಿ 30 ಲಕ್ಷ ಮಂದಿ ನೇರವಾಗಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದಾರೆ. ಆ ಮೂಲಕ ಬಡವರು ಮತ್ತು ದುಡಿಯುವ ವರ್ಗಗಳನ್ನು ಆರ್ಥಿಕ ಪ್ರಗತಿಯ ಮುಖ್ಯವಾಹಿನಿಗೆ ತರಲಾಗುತ್ತಿದೆ ಎಂದು ಅವರು ಹೇಳಿದರು.
ಶಕ್ತಿ ಮೂಲಕ ನಾಡಿನ ಸಮಸ್ತ ಮಹಿಳೆಯರಿಗೆ ಮತ್ತು ಬಡ, ಶ್ರಮಿಕ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಆರ್ಥಿಕ ಸ್ವಾತಂತ್ರ್ಯ ಲಭಿಸಿದೆ. ಇದನ್ನು ಸಾಧಿಸಲು ಕಾಂಗ್ರೆಸ್ ಸರ್ಕಾರವೇ ಬರಬೇಕಾಯಿತು. ಹಿಂದಿದ್ದ ಬಿಜೆಪಿ ಸರ್ಕಾರಗಳು ಇದನ್ನು ಸಾಧಿಸಲಿಲ್ಲ. ಬದಲಿಗೆ ಟೀಕಿಸುತ್ತಾ ಕುಳಿತಿವೆ ಎಂದು ದೂರಿದರು.
ಏಪ್ರಿಲ್ ವೇಳೆಗೆ 1400 ಹೊಸ ಎಲೆಕ್ಟ್ರಿಕ್ ಬಸ್‌ಗಳು ಬಿಎಂಟಿಸಿಗೆ ಸೇರ್ಪಡೆಯಾಗಲಿದೆ. ಇಲ್ಲಿಯವರೆಗೂ ರಾಜ್ಯ ಸಾರಿಗೆಯ ಬಸ್‌ಗಳಲ್ಲಿ 120 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ನಿತ್ಯ 40 ಲಕ್ಷ ಜನ ಬಿಎಂಟಿಸಿಯಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಇದರಲ್ಲಿ ಎಲ್ಲ ಜಾತಿ, ಎಲ್ಲ ಧರ್ಮದ, ಎಲ್ಲ ಅಂತಸ್ತಿನ ಮಹಿಳೆಯರು ಉಚಿತ ಪ್ರಯಾಣ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.