ಬೆಳಗಾವಿ (ಸುವರ್ಣ ವಿಧಾನಸೌಧ): ಕೇಂದ್ರ ತೆರಿಗೆಗಳಲ್ಲಿ ರಾಜ್ಯಕ್ಕೆ ಹಂಚಿಕೆ ಮಾಡಿದ್ದ ₹24,273 ಕೋಟಿಯಲ್ಲಿ ಸೆಪ್ಟೆಂಬರ್‌ವರೆಗೆ ಕೇವಲ ₹ 9,488 ಕೋಟಿ ಮೊತ್ತವನ್ನಷ್ಟೇ ಕೇಂದ್ರ ಸರ್ಕಾರ ಕೊಟ್ಟಿದೆ. 15ನೇ ಹಣಕಾಸು ಆಯೋಗದ ಶಿಫಾರಸುಗಳ ಪ್ರಕಾರ ಇಷ್ಟು ಮೊತ್ತವನ್ನು ಕೇಂದ್ರ ನೀಡಬೇಕಿತ್ತು. ಆದರೆ, ಶೇ 39ರಷ್ಟನ್ನು ಮಾತ್ರ ಕೇಂದ್ರ ನೀಡಿದೆ.
ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನಸಭೆಯಲ್ಲಿ ಶುಕ್ರವಾರ ಮಂಡಿಸಿದ ‘ರಾಜ್ಯ ಹಣಕಾಸಿನ ಮಧ್ಯವಾರ್ಷಿಕ ಪರಿಶೀಲನೆ’ ವರದಿಯಲ್ಲಿ ಈ ವಿವರಗಳಿವೆ.
ಕೇಂದ್ರ ತೆರಿಗೆಗಳಲ್ಲಿ ರಾಜ್ಯದ ಪಾಲು ಮತ್ತು ಸಹಾಯಧನ ಇಳಿಮುಖವಾಗಿದೆ. 2021–22ರಲ್ಲಿ ಸಹಾಯಧನ ₹15,538 ಕೋಟಿ ಬರಬೇಕಿತ್ತು. ಆದರೆ ವರ್ಷದ ಮೊದಲಾರ್ಧದಲ್ಲಿ ₹10,938 ಕೋಟಿ ಸ್ವೀಕೃತವಾಗಿದ್ದು, ಒಟ್ಟು ಶೇ 70.4ರಷ್ಟಾಗಿದೆ ಎಂದೂ ವರದಿ ಹೇಳಿದೆ.
ತೆರಿಗೆ: ₹3,105 ಕೋಟಿ ಕೊರತೆ
ಕೋವಿಡ್ ಎರಡನೇ ಅಲೆಯ ಪರಿಣಾಮ ರಾಜ್ಯದ ಸ್ವಂತ ತೆರಿಗೆ ಸಂಗ್ರಹದಲ್ಲಿ ₹3,105 ಕೋಟಿ ಕೊರತೆಯಾಗಿದೆ.
ಈ ವರ್ಷದ ಸೆಪ್ಟೆಂಬರ್‌ವರೆಗೆ ರಾಜಸ್ವ ಸ್ವೀಕೃತಿಗಳ ಆಯವ್ಯಯದ ಗುರಿ ₹ 86,136 ಕೋಟಿಯಷ್ಟಿದ್ದು, ₹ 83,031 ಕೋಟಿ ಸಂಗ್ರಹವಾಗಿದೆ. ಕೋವಿಡ್ ಹರಡುವಿಕೆ ಕಡಿಮೆ ಆಗಿದ್ದರಿಂದಾಗಿ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಚೇತರಿಕೆ ಕಾಣಿಸಿದೆ ಎಂದೂ ವರದಿ ಉಲ್ಲೇಖಿಸಿದೆ.
ವಿವಿಧ ಆರ್ಥಿಕ ಚಟುವಟಿಕೆಯ ಮೇಲೆ ನಿರ್ಬಂಧ ವಿಧಿಸಿದ್ದರಿಂದಾಗಿ ನೋಂದಣಿ ಮತ್ತು ಮುದ್ರಾಂಕ, ಮೋಟಾರು ವಾಹನ ತೆರಿಗೆ ಸಂಗ್ರಹಣೆಯೂ ಕುಂಠಿತಗೊಂಡಿದೆ. ಅದರ ಜತೆಗೆ, ನೆರೆ ಸಂತ್ರಸ್ತ ಜಿಲ್ಲೆಗಳಲ್ಲಿ ವಿಪತ್ತು ನಿರ್ವಹಣೆಗಾಗಿ ಬದ್ಧ (ಅನಿವಾರ್ಯವಾಗಿ ಮಾಡಲೇಬೇಕಾದ) ವೆಚ್ಚ ಹೆಚ್ಚಾಗಿದೆ.
ಬದ್ಧ ವೆಚ್ಚದಲ್ಲಿ ಅನಿರೀಕ್ಷಿತ ಹೆಚ್ಚಳವನ್ನು ತಡೆಯಬೇಕು. ಅದರ ಜತೆಗೆ, ಎರಡನೇ ಆಡಳಿತ ಸುಧಾರಣಾ ಆಯೋಗದ ಶಿಫಾರಸುಗಳನ್ನು ಅನುಷ್ಠಾನ ಮಾಡಬೇಕು. ಇಲಾಖೆಗಳಲ್ಲಿರುವ ಅನವಶ್ಯಕ ಹುದ್ದೆಗಳನ್ನು ರದ್ದುಗೊಳಿಸುವುದರೊಂದಿಗೆ ಇಲಾಖೆಗಳನ್ನು ಮರುವಿನ್ಯಾಸ ಅಥವಾ ವಿಲೀನಗೊಳಿಸಿದರೆ ಆರ್ಥಿಕ ಸ್ಥಿತಿ ಸುಧಾರಿಸಬಹುದು ಎಂದು ವರದಿ ಹೇಳಿದೆ.
2021–22ರ ಆರ್ಥಿಕ ವರ್ಷದ ಅಂತ್ಯಕ್ಕೆ(ಮಾರ್ಚ್) ರಾಜ್ಯದ ಒಟ್ಟು ಸಾಲವು ರಾಜ್ಯದ ಒಟ್ಟು ಆಂತರಿಕ ಉತ್ಪನ್ನದ ಶೇ 26.66ರಷ್ಟಾಗಲಿದೆ. ಅಂದರೆ, 2021ರ ಮಾರ್ಚ್‌ನಲ್ಲಿ ಬಾಕಿ ಇದ್ದ ₹3,36,692 ಕೋಟಿಯಷ್ಟು ಸಾಲದ ಹೊರೆ, 2022ರ ಮಾರ್ಚ್ ವೇಳೆಗೆ ₹ 4,45,899 ಕೋಟಿಗೆ ಏರಲಿದೆ ಎಂದು ವರದಿಅಂದಾಜಿಸಿದೆ.
ಪಿಡಬ್ಲ್ಯೂಡಿ: ವೆಚ್ಚ 8 ಪಟ್ಟು ಹೆಚ್ಚಳ
ನೀರಾವರಿ, ಲೋಕೋಪಯೋಗಿ ಇಲಾಖೆಗಳ ಬದ್ಧ ವೆಚ್ಚವು ಬಜೆಟ್‌ನಲ್ಲಿ ಅನುಮೋದನೆ ನೀಡಿದ ಮೊತ್ತಕ್ಕಿಂತ 5ರಿಂದ 8 ಪಟ್ಟು ವೆಚ್ಚ ಹೆಚ್ಚಳವಾಗಿದೆ ಎಂದು ವರದಿ ಹೇಳಿದೆ. ವಿವಿಧ ಕಾಮಗಾರಿಗಳಿಗೆ ಇಂತಿಷ್ಟು ಮೊತ್ತ ಎಂದು ಹಂಚಿಕೆ ಮಾಡಿ ಬಜೆಟ್‌ನಲ್ಲಿ ಒಪ್ಪಿಗೆ ನೀಡಲಾಗಿತ್ತು. ಈಗ ಅದಕ್ಕಿಂತ ಹೆಚ್ಚಾಗಿದೆ. ಬಜೆಟ್ ಅನುಮೋದಿತ ವೆಚ್ಚದ ಅನುಪಾತವನ್ನು ಸಮದೂಗಿಸುವವರೆಗೆ ಯಾವುದೇ ಹೊಸ ಕಾಮಗಾರಿಗಳನ್ನು ಮಂಜೂರು ಮಾಡದಂತೆ ವರದಿ ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.