ADVERTISEMENT

ರಾಜ್ಯದ ವಿತ್ತೀಯ ಕೊರತೆ ಹೆಚ್ಚಳ: ಕೇಂದ್ರ ಸಚಿವರ, ಸಂಸದರ ಕಳವಳ

ಮುಖ್ಯಮಂತ್ರಿಗೆ ಪತ್ರ ಬರೆದ ಬಿಜೆಪಿ ಸಂಸದರು, ರಾಜ್ಯಸಭಾ ಸದಸ್ಯರು

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 0:19 IST
Last Updated 30 ಜೂನ್ 2024, 0:19 IST
<div class="paragraphs"><p>ಎಚ್‌.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ</p></div>

ಎಚ್‌.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ

   

ನವದೆಹಲಿ: ಹಣಕಾಸು ವ್ಯವಸ್ಥೆಯ ಅಸಮರ್ಪಕ ನಿರ್ವಹಣೆಯಿಂದಾಗಿ ಕರ್ನಾಟಕದಲ್ಲಿ ಕಳದೊಂದು ವರ್ಷದಿಂದ ಆದಾಯ ಕೊರತೆ ಹಾಗೂ ವಿತ್ತೀಯ ಕೊರತೆ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ಕೇಂದ್ರದ ನಾಲ್ವರು ಸಚಿವರು, ಬಿಜೆಪಿ ಸಂಸದರು ಹಾಗೂ ರಾಜ್ಯಸಭಾ ಸದಸ್ಯರು ಕಳವಳ ವ್ಯಕ್ತಪಡಿಸಿದ್ದಾರೆ. 

ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಂದ್ರ ಭಾರಿ ಕೈಗಾರಿಕೆ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಆಹಾರ ಸಚಿವ ಪ್ರಲ್ಹಾದ ಜೋಶಿ, ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ.ಸೋಮಣ್ಣ, ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಕೈಗಾರಿಕಾ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿಗಳೂ ಆಗಿರುವ ಸಂಸದರಾದ ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್‌, ಸಂಸದರಾದ ವಿಶ್ವೇಶರ ಹೆಗಡೆ ಕಾಗೇರಿ, ಪಿ.ಸಿ.ಮೋಹನ್‌, ಲಹರ್ ಸಿಂಗ್‌ ಸಿರೋಯಾ, ಗೋವಿಂದ ಕಾರಜೋಳ, ಮಲ್ಲೇಶ್‌ಬಾಬು ಮತ್ತಿತರರು ಐದು ಪುಟಗಳ ಪತ್ರ ಬರೆದಿದ್ದಾರೆ. 

ADVERTISEMENT

ವಿತ್ತೀಯ ಕೊರತೆ ಶೇ 3ಕ್ಕೆ ಏರಿಕೆ 

‘2022–23ನೇ ಸಾಲಿನಲ್ಲಿ ವಿತ್ತೀಯ ಕೊರತೆ ಶೇ 2.1 (₹46,622 ಕೋಟಿ) ಆಗಿತ್ತು. ಅದು 2023–24ರಲ್ಲಿ ಶೇ 2.7ಕ್ಕೆ (₹68,505 ಕೋಟಿ) ಹಾಗೂ 2024–25ರಲ್ಲಿ ಶೇ 3ಕ್ಕೆ (₹82,981 ಕೋಟಿ) ಏರಿದೆ. ಆದಾಯ ಕೊರತೆಯು 2022–23ರಲ್ಲಿ ಶೇ –0.6 (–13,496 ಕೋಟಿ) ಇತ್ತು. 23–24ರಲ್ಲಿ ಶೇ 0.5 (₹13,951 ಕೋಟಿ) ಹಾಗೂ 24–25ರಲ್ಲಿ ಶೇ 1 (₹27,354 ಕೋಟಿ ಆಗಿದೆ. 22-23ಕ್ಕೆ ಹೋಲಿಸಿದರೆ ವಿತ್ತೀಯ ಕೊರತೆ 24–24ರಲ್ಲಿ ಶೇ 78ರಷ್ಟು ಹೆಚ್ಚಾಗಿದೆ. ಆದಾಯ ಹೆಚ್ಚುವರಿಯ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿತ್ತು. ಈಗ ಆದಾಯ ಕೊರತೆಯ ರಾಜ್ಯವಾಗಿದೆ. ಇದು ರಾಜ್ಯದ ಆಡಳಿತ ಹಾಗೂ ಆರ್ಥಿಕ ವ್ಯವಸ್ಥೆ ದಿಕ್ಕು ತಪ್ಪಿರುವುದಕ್ಕೆ ಸಾಕ್ಷಿ’ ಎಂದು ಅವರು ಪ್ರತಿಪಾದಿಸಿದ್ದಾರೆ. 

‘2024–25ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಒಟ್ಟಾರೆ ವೆಚ್ಚ ಶೇ 16.8 ಜಾಸ್ತಿಯಾಗಿದೆ. ಆದರೆ, ಬಂಡವಾಳ ವೆಚ್ಚವನ್ನು ಶೇ 28ರಿಂದ ಶೇ 15ಕ್ಕೆ ಕಡಿತಗೊಂಡಿದೆ. ಜತೆಗೆ, ಕರ್ನಾಟಕ ಸರ್ಕಾರದ ಸಾಲ ಪ್ರಮಾಣ ಗಣನೀಯವಾಗಿ ಹೆಚ್ಚಳ ಆಗಿದೆ. ಇದರಿಂದ ಜನರು ಹಾಗೂ ಉದ್ಯಮಗಳು ಸಾಲದ ಹೊರೆ ಹೊರಬೇಕಿದೆ. ಇತಿಹಾಸದಲ್ಲಿ ಮೊದಲ ಬಾರಿಗೆ ವರ್ಷವೊಂದರಲ್ಲಿ ರಾಜ್ಯ ಸರ್ಕಾರವು ₹1 ಲಕ್ಷ ಕೋಟಿ ಸಾಲ ಎತ್ತಿದೆ’ ಎಂದು ಅವರು ಬೊಟ್ಟು ಮಾಡಿದ್ದಾರೆ. 

‘ವ್ಯವಸ್ಥಿತ ಹಣಕಾಸಿನ ಯೋಜನೆಗಳನ್ನು ರೂಪಿಸದೆ ಹಾಗೂ ಬಜೆಟ್‌ನಲ್ಲಿ ಹಂಚಿಕೆ ಮಾಡದೆ ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದರಿಂದ ರಾಜ್ಯದ ಅಭಿವೃದ್ಧಿ ಚಟುವಟಿಕೆಗಳ ಮೇಲೆ ಹೊಡೆತ ಬಿದ್ದಿದೆ. ಪರಿಣಾಮವಾಗಿ, ಗ್ಯಾರಂಟಿಗಳೂ ಜನರನ್ನು ತಲುಪುತ್ತಿಲ್ಲ ಹಾಗೂ ಅಭಿವೃದ್ಧಿ ಚಟುವಟಿಕೆಗಳು ನಡೆಯುತ್ತಿಲ್ಲ. ಒಂದು ವೇಳೆ ರಾಜ್ಯದ ಹಣಕಾಸಿನ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದ್ದರೆ ಕೇಂದ್ರ ಸರ್ಕಾರದ ಬಹುತೇಕ ಯೋಜನೆಗಳು ವಿಳಂಬವೇ ಆಗುತ್ತಿರಲಿಲ್ಲ. ಈಗಾಗಲೇ ಪೂರ್ಣಗೊಂಡಿರುತ್ತಿದ್ದವು’ ಎಂದು ಅವರು ಹೇಳಿದ್ದಾರೆ. 

ಹುಬ್ಬಳ್ಳಿ, ಅಂಕೋಲಾ, ತುಮಕೂರು–ಚಿತ್ರದುರ್ಗ ಹೊಸ ಮಾರ್ಗ, ಧಾರವಾಡ–ಬೆಳಗಾವಿ, ಕುಡಚಿ–ಬಾಗಲಕೋಟೆ ಮಾರ್ಗ ಸೇರಿದಂತೆ ಹಲವು ರೈಲ್ವೆ ಮಾರ್ಗಗಳ ಕಾಮಗಾರಿ ನನೆಗುದಿಗೆ ಬಿದ್ದಿವೆ. ಕೇಂದ್ರ ಸರ್ಕಾರವು ಈ ಸಲ ಬಜೆಟ್‌ನಲ್ಲಿ ರಾಜ್ಯ ರೈಲು ಯೋಜನೆಗಳ ಅನುಷ್ಠಾನಕ್ಕೆ ₹7,524 ಕೋಟಿ ಮೀಸಲಿಟ್ಟಿದೆ. ಆದರೆ, ಭೂಸ್ವಾಧೀನ ಸಮಸ್ಯೆ ಹಾಗೂ ರಾಜ್ಯದ ಪಾಲಿನ ಮೊತ್ತ ಬಿಡುಗಡೆಯಾಗದಿರುವ ಕಾರಣ ಈ ಯೋಜನೆಗಳ ಅನುಷ್ಠಾನ ವಿಳಂಬವಾಗಿದೆ’ ಎಂದು ಅವರು ಕಿಡಿಕಾರಿದ್ದಾರೆ. 

5,225 ಕಿ.ಮೀ. ಉದ್ದದ 39 ರಾಷ್ಟ್ರೀಯ ಹೆದ್ದಾರಿಗಳ ಉನ್ನತೀಕರಣಕ್ಕೆ ಕೇಂದ್ರ ಸರ್ಕಾರ ತಾತ್ವಿಕ ಅನುಮೋದನೆ ಕೊಟ್ಟಿದೆ. ಈ ಯೋಜನೆಗಳ ಸಾಮಾಜಿಕ–ಆರ್ಥಿಕ ಸ್ಥಿತಿಗತಿ, ಭೂಸ್ವಾಧೀನದ ಪ್ರಗತಿ ಸೇರಿದಂತೆ ಅಗತ್ಯ ಮಾಹಿತಿಗಳನ್ನು ರಾಜ್ಯ ಸರ್ಕಾರ ಒದಗಿಸಬೇಕು. ಶಿರಾಡಿ ಘಾಟ್‌ನಲ್ಲಿ ಸುರಂಗ ನಿರ್ಮಾಣದ ಪ್ರಸ್ತಾವದ ಇತ್ತೀಚಿನ ಬೆಳವಣಿಗೆಗಳ ಕುರಿತು ಮಾಹಿತಿ ನೀಡಬೇಕು. ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಈ ಯೋಜನೆಗಳ ಅನುಷ್ಠಾನಕ್ಕೆ ಸಹಕಾರ ನೀಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. 

ರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌, ಹಾಲು ಬೆಲೆ ಹೆಚ್ಚಳದ ಬಗ್ಗೆಯೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.