ಬೆಂಗಳೂರು: ವಿಶ್ವಸಂಸ್ಥೆ ನಿಗದಿಪಡಿಸಿರುವ ಸುಸ್ಥಿರ ಅಭಿವೃದ್ಧಿ ಗುರಿಯನ್ನು ತಲುಪಿ ರಾಜ್ಯವು ದೇಶದಲ್ಲೇ ಮೊದಲ ಸ್ಥಾನ ಪಡೆಯಲು ಶ್ರಮಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.
ನೀತಿ ಆಯೋಗದ ಪ್ರತಿನಿಧಿಗಳ ಜತೆ 2030ರ ಸಾಧನೆ ಕುರಿತು ಚರ್ಚೆಯ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಸುಸ್ಥಿರ ಅಭಿವೃದ್ಧಿಯ ಸೂಚ್ಯಂಕದಲ್ಲಿ ಗಣನೀಯ ಅಭಿವೃದ್ಧಿ ಆಗಿದೆ. ಮುಂದೆ ಗರ್ಭಿಣಿಯರು ಮತ್ತು ಮಕ್ಕಳ ಅಪೌಷ್ಟಿಕತೆ, ಲಿಂಗ ಸಮಾನತೆ, ವಸತಿ ಶಿಕ್ಷಣದ ಕುರಿತು ಹೆಚ್ಚಿನ ಗಮನಹರಿಸಲಾಗುವುದು ಎಂದು ಅವರು ಹೇಳಿದರು.
ನೀತಿ ಆಯೋಗದ ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಂಕದಲ್ಲಿ ರಾಜ್ಯದ ಅಂಕ ಹಾಗೂ ಸ್ಥಾನದಲ್ಲಿ ಗಣನೀಯ ಸುಧಾರಣೆ ಆಗಿರುವ ಬಗ್ಗೆ ನೀತಿ ಆಯೋಗದ ಅಧಿಕಾರಿಗಳು ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದರು.
ಈಗಾಗಲೇ ಆಯವ್ಯಯದಲ್ಲಿ ರಾಜ್ಯದ ಎಲ್ಲ ಯೋಜನೆಗಳು ಎಸ್‌ಡಿಜಿ ಗುರಿ ಸಾಧನೆಯನ್ನು ಕೇಂದ್ರೀಕರಿಸಿ ಅನುಷ್ಠಾನಗೊಳಿಸಲಾಗುವುದು ಎಂದು ಘೋಷಿಸಲಾಗಿದೆ. ಅದರಂತೆಯೇ ಸರ್ಕಾರ ಕಾರ್ಯನಿರ್ವಹಿಸಲಿದೆ ಎಂದು ಯಡಿಯೂರಪ್ಪ ತಿಳಿಸಿದರು.
ಎಸ್.ಜಿ.ಡಿ ಇಂಡಿಯಾ 2020- 21 ವರದಿಯ ಪ್ರಕಾರ 73 ಸೂಚ್ಯಂಕ ಪಡೆದಿರುವ ಆಂಧ್ರ ಪ್ರದೇಶ ಹಾಗೂ ಗೋವಾ ರಾಜ್ಯಗಳೊಂದಿಗೆ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. 16 ಸುಸ್ಥಿರ ಅಭಿವೃದ್ಧಿ ಗುರಿಗಳ ಪೈಕಿ ಕರ್ನಾಟಕ ರಾಜ್ಯ 7 ನೇ ಗುರಿ ಸಾಧಿಸುವಲ್ಲಿ ಮೊದಲನೇ ಸ್ಥಾನದಲ್ಲಿದೆ. ಉಳಿದ ಒಂಭತ್ತು ಗುರಿಗಳ ಸಾಧನೆಯಲ್ಲಿ ಮುಂಚೂಣಿಯಲ್ಲಿದ್ದು, ಬಾಕಿ 5 ಗುರಿಗಳ ಸಾಧನೆಯಲ್ಲಿ ಸಹ ಉತ್ತಮ ಸಾಧನೆ ತೋರುತ್ತಿದೆ.
ಕೃಷಿ, ತೋಟಗಾರಿಕೆ, ಜಲಸಂಪನ್ಮೂಲ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಶಿಕ್ಷಣ, ಆಹಾರ ಮತ್ತು ನಾಗರಿಕ ಸರಬರಾಜು, ಇಂಧನ, ವಾಣಿಜ್ಯ ಮತ್ತು ಕೈಗಾರಿಕೆ, ಐಟಿಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ, ನಗರಾಭಿವೃದ್ಧಿ (ಪೌರಾಡಳಿತ), ಇ-ಆಡಳಿತ, ವಸತಿ ಇಲಾಖೆ(ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ), ವಿತ್ತೀಯ ಮತ್ತು ಸಾಂಖ್ಯಿಕ ನಿರ್ದೇಶನಾಲಯಗಳು ಹೊಸ ಕ್ರಮವನ್ನು ಜಾರಿಗೆ ತರುತ್ತಿವೆ. ಇದು ರಾಜ್ಯದ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸುಧಾರಿಸಲಿದೆ. ಅಲ್ಲದೆ ನಾಗರಿಕರಿಗೆ ಉತ್ತಮ ಹಾಗೂ ಸುಸ್ಥಿರ ಭವಿಷ್ಯವನ್ನು ಒದಗಿಸಲಿದೆ ಎಂದು ಯಡಿಯೂರಪ್ಪ ಅಭಿಪ್ರಾಯಪಟ್ಟರು.
ಕೈಪಿಡಿ ಬಿಡುಗಡೆ: ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ವತಿಯಿಂದ ಹೊರ ತಂದಿರುವ ರಾಜ್ಯದಲ್ಲಿ ಅನುಷ್ಠಾನಗೊಂಡಿರುವ 20 ಅತ್ಯುತ್ತಮ ಆಚರಣೆಗಳ ಕುರಿತ ಕೈಪಿಡಿಯನ್ನು ಮುಖ್ಯಮಂತ್ರಿಯವರು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.
ಯು.ಎನ್.ಡಿ.ಪಿ ಸಂಸ್ಥೆಯು ಸುಸ್ಥಿರ ಅಭಿವೃದ್ಧಿ ಗುರಿಗಳ ಸಮನ್ವಯ ಕೇಂದ್ರದ ಪಾಲುದಾರಿಕೆಯಲ್ಲಿ ಯೋಜನಾ ಇಲಾಖೆ ಈ ಕೈಪಿಡಿಯನ್ನು ಹೊರತಂದಿದೆ.
ರಾಜ್ಯದಲ್ಲಿ ಅನುಷ್ಠಾನಗೊಂಡಿರುವ ವಿವಿಧ ನಾವೀನ್ಯತಾ ಯೋಜನೆಗಳ ಪೈಕಿ 20 ಅತ್ಯುತ್ತಮ ಆಚರಣೆಗಳನ್ನು ಗೋಲ್ಸ್ ಸಮಿತಿಯು ಗುರುತಿಸಿದೆ.
ಸಾರ್ವಜನಿಕರ ಜೀವನದ ಗುಣಮಟ್ಟವನ್ನು ಸುಧಾರಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳು ಹಾಗೂ ಅಭಿವೃದ್ಧಿ ಸಂಸ್ಥೆಗಳು ರಾಜ್ಯದ ನೀತಿ ಮತ್ತು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿರುವುದು ಅನುಕರಣೀಯವಾಗಿವೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಕೈಪಿಡಿಯಲ್ಲಿ ತಾಂತ್ರಿಕ ಪರಿಹಾರಗಳು, ಪ್ರಕ್ರಿಯೆಗಳು, ಅನುಷ್ಠಾನ ಕ್ರಮಗಳಲ್ಲದೆ ಪ್ರತಿ ಅತ್ಯುತ್ತಮ ಆಚರಣೆಯನ್ನು ಬಲಪಡಿಸಲು ಒತ್ತು ನೀಡುವ ಬಗ್ಗೆ ವಿವರಿಸಲಾಗಿದೆ.
ಯೋಜನಾ ಇಲಾಖೆ ಸಚಿವ ನಾರಾಯಣಗೌಡ, ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ, ನೀತಿ ಆಯೋಗದ ಎಸ್.ಡಿ.ಜಿ ಸಲಹೆಗಾರರಾದ ಸಂಯುಕ್ತಾ ಸಮದ್ದಾರ್, ಯೋಜನಾ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಮತ್ತಿತರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.