ಬೆಂಗಳೂರು: ‘ನೀಟ್’ ರದ್ದುಪಡಿಸಬೇಕು, ‘ಒಂದು ರಾಷ್ಟ್ರ ಒಂದು ಚುನಾವಣೆ’ ಜಾರಿ ಮಾಡಬಾರದು ಮತ್ತು ಕ್ಷೇತ್ರ ಪುನರ್‌ವಿಂಗಡಣೆ 1971 ಜನಗಣತಿ ಆಧರಿಸಿಯೇ ನಿರ್ಧರಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ವಿಧಾನಮಂಡಲದ ಉಭಯ ಸದನಗಳಲ್ಲಿ ಗುರುವಾರ ವಿರೋಧ ಪಕ್ಷಗಳ ಧರಣಿ ಮತ್ತು ಗದ್ದಲ ಮಧ್ಯೆಯೇ ಸರ್ಕಾರ ನಿರ್ಣಯಗಳನ್ನು ಮಂಡಿಸಿ ಒಪ್ಪಿಗೆ ಪಡೆಯಲಾಯಿತು.
‘ಒಂದು ರಾಷ್ಟ್ರ ಮತ್ತು ಒಂದು ಚುನಾವಣೆ’ ಪ್ರಸ್ತಾವಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದರೆ, ಉಳಿದ ನಿರ್ಣಯಗಳಿಗೆ ವಿರೋಧ ವ್ಯಕ್ತಪಡಿಸಲಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ನಿರ್ಣಯ ಮಂಡಿಸಿದರು.
‘ಈ ಮೂರು ನಿರ್ಣಯಗಳನ್ನು ಚರ್ಚಿಸಲು ಪ್ರತ್ಯೇಕ ಅಧಿವೇಶನಗಳನ್ನು ಕರೆಯಬೇಕು. ವಿರೋಧಪಕ್ಷಗಳು ಧರಣಿಯಲ್ಲಿ ಇರುವಾಗ ನಿರ್ಣಯ ಮಂಡಿಸುತ್ತಿರುವುದು ಸರಿಯಲ್ಲ. ಸದಸ್ಯರು ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಅವಕಾಶ ನೀಡಬೇಕಿತ್ತು. ಚರ್ಚೆಗೆ ನಾವು ಸಿದ್ಧರಿದ್ದೇವೆ. ಸರ್ಕಾರಕ್ಕೆ ಚರ್ಚೆಯೇ ಬೇಕಿಲ್ಲ’ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ ದೂರಿದರು.
ನೀಟ್ ರದ್ದು:
ನೀಟ್ ಪರೀಕ್ಷಾ ವ್ಯವಸ್ಥೆಯು ಗ್ರಾಮೀಣ ಬಡ ಮಕ್ಕಳ ವೈದ್ಯಕೀಯ ಶಿಕ್ಷಣಾವಕಾಶಗಳ ಮೆಲೆ ತೀವ್ರ ಪರಿಣಾಮ ಬೀರುತ್ತಿದೆ. ಶಾಲಾ ಶಿಕ್ಷಣ ವ್ಯವಸ್ಥೆಯನ್ನು ನಿರರ್ಥಕಗೊಳಿಸುವುದು ಮಾತ್ರವಲ್ಲದೇ, ರಾಜ್ಯ ಸರ್ಕಾರದ ವೈದ್ಯಕೀಯ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ರಾಜ್ಯ ಸರ್ಕಾರಗಳನ್ನು ಕಸಿದುಕೊಳ್ಳುತ್ತಿದ್ದು, ಅದನ್ನು ರದ್ದುಪಡಿಸಬೇಕು ಎಂದು ನಿರ್ಣಯದಲ್ಲಿ ಒತ್ತಾಯಿಸಿದೆ.
ಈ ಪರೀಕ್ಷೆಯಿಂದ ಕರ್ನಾಟಕಕ್ಕೆ ವಿನಾಯಿತಿ ನೀಡಬೇಕು. ಶಾಲಾ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಅಂಕಗಳನ್ನು ಆಧರಿಸಿ ವೈದ್ಯಕೀಯ ಪ್ರವೇಶ ನೀಡಬೇಕು. ನೀಟ್ ಪರೀಕ್ಷೆಗಳಲ್ಲಿ ಆಗುತ್ತಿರುವ ಪುನರಾವರ್ತಿತ ಅಕ್ರಮಗಳನ್ನು ಪರಿಗಣಿಸಿ ರಾಷ್ಟ್ರೀಯ ಮಟ್ಟದಲ್ಲಿ ನೀಟ್ ವ್ಯವಸ್ಥೆ ರದ್ದುಪಡಿಸಬೇಕು. ಅಲ್ಲದೇ, ಕೇಂದ್ರ ಸರ್ಕಾರ ರಾಷ್ಟ್ರೀಯ ವೈದ್ಯಕೀಯ ಆಯೋಗ ಅಧಿನಿಯಮ 2019ಕ್ಕೆ ಅಗತ್ಯ ತಿದ್ದುಪಡಿ ಮಾಡಬೇಕು ಎಂದು ಆಗ್ರಹಿಸಿದೆ.
ಪುನರ್ವಿಂಗಡಣೆ:
ಕರ್ನಾಟಕ ವಿಧಾನಸಭೆಯು 2026 ರಲ್ಲಿನ ಅಥವಾ ಅದರ ನಂತರ ನಡೆಸುವ ಹೊಸ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಪುನರ್‌ವಿಂಗಡಣಾ ಪ್ರಕ್ರಿಯೆ ನಡೆಸಬಾರದು. ಜನಸಂಖ್ಯೆಯನ್ನು ಆಧರಿಸಿ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸುವ ಸಂದರ್ಭದಲ್ಲಿ ಪ್ರತಿ ರಾಜ್ಯಕ್ಕೆ ಹಂಚಿಕೆ ಮಾಡಬೇಕಾದ ಲೋಕಸಭಾ ಸ್ಥಾನಗಳ ಸಂಖ್ಯೆಯನ್ನು ಮತ್ತು ಪ್ರತಿ ರಾಜ್ಯದ ವಿಧಾನಸಭೆಗೆ ನಿಗದಿಪಡಿಸಬೇಕಾದ ಸ್ಥಾನಗಳ ಒಟ್ಟು ಸಂಖ್ಯೆಯನ್ನು 1971 ರ ಜನಗಣತಿ ಆಧರಿಸಿ ನಿರ್ಧರಿಸಬೇಕು.ಚುನಾವಣೆ: ಸರ್ಕಾರದ ನಿರ್ಣಯಕ್ಕೆ ಬಿಜೆಪಿ ವಿರೋಧ
ಒಂದು ರಾಷ್ಟ್ರ ಒಂದು ಚುನಾವಣೆ ಪ್ರಸ್ತಾವನೆ ಭಾರತದ ಪ್ರಜಾಸತ್ತಾತ್ಮಕ ಮತ್ತು ಒಕ್ಕೂಟ ವ್ಯವಸ್ಥೆಗೆ ಅಪಾಯ ಉಂಟು ಮಾಡುತ್ತದೆ. ಬೇರೆ ಬೇರೆ ರಾಜ್ಯಗಳ ವಿಧಾನಸಭೆಗಳು ಅವುಗಳದ್ದೇ ಆದ ಅಧಿಕಾರ ಅವಧಿಗಳನ್ನು ಹೊಂದಿರುತ್ತವೆ. ಏಕರೂಪ ಚುನಾವಣಾ ವೇಳಾ ಪಟ್ಟಿಯು ರಾಷ್ಟ್ರೀಯ ವಿಷಯಗಳ ಮೇಲೆ ಹೆಚ್ಚಾಗಿ ಗಮನಹರಿಸುವ ಮತ್ತು ಸ್ಥಳೀಯ ಕಾಳಜಿಗಳನ್ನು ನಿರ್ಲಕ್ಷಿಸುವ ಮೂಲಕ ರಾಜ್ಯಗಳ ಸ್ವಾಯತ್ತತೆಯನ್ನು ದುರ್ಬಲಗೊಳಿಸಬಹುದು. ಸಾಕಷ್ಟು ಭದ್ರತೆಯನ್ನು ಖಚಿತಪಡಿಸಿಕೊಳ್ಳಬೇಕು. ಚುನಾವಣಾ ಸಿಬ್ಬಂದಿಯನ್ನು ನಿರ್ವಹಿಸುವುದು, ಮತದಾರರ ಬೇಸರ, ಕಡಿಮೆಯಾದ ಸರ್ಕಾರದ ಉತ್ತರದಾಯಿತ್ವ, ಆರ್ಥಿಕ ಮತ್ತು ಸಾಮಾಜಿಕ ಅಡೆತಡೆಗಳು ಏಕಕಾಲಿಕ ಚುನಾವಣೆಗಳಿಗೆ ಸಂಬಂಧಿಸಿದ ಗುರುತರ ಗಂಡಾತರಗಳಾಗಿವೆ. ಭಾರತದ ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳು ಮತ್ತು ಒಕ್ಕೂಟ ಸಮಗ್ರತೆಯನ್ನು ಈ ಕಠೋರ ನೀತಿಯನ್ನು ಜಾರಿಗೊಳಿಸಬಾರದು.
ಇದಕ್ಕೆ ಪ್ರತಿಕ್ರಿಯಿಸಿದ ವಿರೋಧಪಕ್ಷದ ನಾಯಕ ಆರ್.ಅಶೋಕ, ‘ಒಂದು ರಾಷ್ಟ್ರ ಒಂದು ಚುನಾವಣೆ ಒಂದು ಉತ್ತಮ ಪರಿಕಲ್ಪನೆ. ಅದು ಜಾರಿಗೆ ಬರಬೇಕು. ಇದರಿಂದ ದೇಶದ ಬೊಕ್ಕಸಕ್ಕೆ ಅಪಾರ ಪ್ರಮಾಣದಲ್ಲಿ ಹಣ ಉಳಿತಾಯ ಆಗುತ್ತದೆ. ಚುನಾವಣೆಗಾಗಿ ವರ್ಷವಿಡೀ ಒಂದಲ್ಲ ಒಂದು ರಾಜ್ಯದಲ್ಲಿ ಚುನಾವಣೆ ನಡೆಯುತ್ತಿರುತ್ತದೆ. ಇದಕ್ಕಾಗಿ ಸರ್ಕಾರಿ ಯಂತ್ರ ಬಳಕೆ ಆಗುತ್ತದೆ. ಅಧಿಕಾರಿಗಳು ಇಲ್ಲದೇ, ಜನರ ಕೆಲಸ ಕಾರ್ಯಗಳು ನಿಂತು ಹೋಗುತ್ತವೆ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.