ಬೆಂಗಳೂರು: ರಾಜ್ಯದಲ್ಲಿ ಸುಳ್ಳು ಸುದ್ದಿಗಳನ್ನು ಮಟ್ಟ ಹಾಕಲು ರಾಜ್ಯ ಸರ್ಕಾರ ಉನ್ನತ ಮಟ್ಟದ ‘ಫ್ಯಾಕ್ಟ್ ಚೆಕ್’ ಸಮಿತಿಯೊಂದನ್ನು ರಚಿಸಿದೆ.
ಈ ಸಮಿತಿಗೆ ಗೃಹ ಸಚಿವ ಜಿ.ಪರಮೇಶ್ವರ ಅಧ್ಯಕ್ಷರಾಗಿದ್ದು, ಐಟಿ/ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಉಪಾಧ್ಯಕ್ಷರಾಗಿದ್ದಾರೆ ಎಂದು ಸರ್ಕಾರದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
ರಾಜ್ಯ ಸರ್ಕಾರದ ‘ಫ್ಯಾಕ್ಟ್ ಚೆಕ್’ ಸಮಿತಿಯಲ್ಲಿ ಕಾನೂನು ಮತ್ತು ಗೃಹ ಇಲಾಖೆಯ ಪ್ರತಿನಿಧಿಗಳೂ ಇದ್ದಾರೆ. ಈ ಸಮಿತಿಯು ಸುಳ್ಳು ಸುದ್ದಿಗಳನ್ನು ಯಾವ ರೀತಿ ತಡೆಯಬೇಕು ಎಂಬ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಲಿದೆ ಎಂದು ಮೂಲಗಳು ತಿಳಿಸಿವೆ.
ಲೋಕಸಭಾ ಚುನಾವಣೆ ವೇಳೆ ಸುಳ್ಳು ಸುದ್ದಿಯನ್ನು ತಡೆಯಲೆಂದು ಸಿದ್ದರಾಮಯ್ಯ ಸರ್ಕಾರವು ಸುಳ್ಳು ಮಾಹಿತಿ ತಡೆ ಘಟಕವನ್ನು ಸ್ಥಾಪಿಸಿತ್ತು. satya.karnataka.gov.in ವೆಬ್‌ಸೈಟ್ ಮೂಲಕ 90 ದಿನಗಳವರೆಗೆ ಕಾರ್ಯನಿರ್ವಹಿಸಿತ್ತು. ಈ ಅವಧಿಯಲ್ಲಿ ಅಂತರ್ಜಾಲದಲ್ಲಿ ಪ್ರತಿದಿನ 64 ಸಾವಿರ ಲೇಖನಗಳನ್ನು ಪರಿಶೀಲಿಸುತ್ತಿತ್ತು. ಅದನ್ನು ಆಧರಿಸಿ 18 ಎಫ್‌ಐಆರ್ ದಾಖಲಿಸಲಾಗಿತ್ತು. 537 ಫ್ಯಾಕ್ಟ್‌ಚೆಕ್ ಮಾಡಿತ್ತು. 500 ಲೇಖನಗಳನ್ನು ಬೆದರಿಕೆ ಎಂದು ಪರಿಗಣಿಸಲಾಗಿತ್ತು. ಚುನಾವಣೆ ವೇಳೆ ಆಗಿದ್ದರಿಂದ ಅದು ಪೂರ್ಣ ಪ್ರಮಾಣದಲ್ಲಿ ಕಾರ್ಯವಿಧಾನ ರೂಪುಗೊಂಡಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದೇ ಮಾದರಿಯ ಫ್ಯಾಕ್ಟ್–ಚೆಕ್ ಘಟಕವನ್ನು ಸ್ಥಾಪಿಸಿತ್ತು. ಬಾಂಬೆ ಹೈಕೋರ್ಟ್ ಕಳೆದ ವಾರವಷ್ಟೇ ಅದನ್ನು ರದ್ದು ಮಾಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳನ್ನು ತಡೆಯಲು ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ನಿಯಮ 2023 ರ ಅಡಿ ಫ್ಯಾಕ್ಟ್ ಚೆಕ್ ಘಟಕ ಸ್ಥಾಪಿಸಿತ್ತು.
ಬಾಂಬೆ ಹೈಕೋರ್ಟ್ ತೀರ್ಪಿನ ಕುರಿತು ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಪ್ರಶ್ನಿಸಿದಾಗ, ‘ನ್ಯಾಯಾಲಯದ ತೀರ್ಪು ನಮ್ಮ ಸರ್ಕಾರದ ಪ್ರಯತ್ನದ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರುವುದಿಲ್ಲ. ಕೇಂದ್ರ ಸರ್ಕಾರ ಕಾನೂನು ಬದಲಿಸಿ ಫ್ಯಾಕ್ಟ್ ಚೆಕ್ ಘಟಕ ಮಾಡಲು ಹೊರಟಿತ್ತು. ನಮ್ಮ ಸರ್ಕಾರ ಈಗ ಇರುವ ಕಾನೂನಿನ ಅಡಿಯಲ್ಲೇ ಮಾಡುತ್ತಿದೆ’ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.