ADVERTISEMENT

2020–21ರ ಸಾಲಿನಲ್ಲಿ ಶೇ 85ರಷ್ಟು ಬೋಧನಾ ಶುಲ್ಕ ಮಾತ್ರ ಪಡೆಯಬೇಕು: ಸರ್ಕಾರ ಆದೇಶ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2021, 5:51 IST
Last Updated 13 ನವೆಂಬರ್ 2021, 5:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಖಾಸಗಿ ಶಾಲೆಗಳು 2020–21ನೇ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳಿಂದ ಬೋಧನಾ ಶುಲ್ಕ ಪೂರ್ಣ ಪಡೆದಿದ್ದರೆ, ಅದರಲ್ಲಿ ಶೇ 85ರಷ್ಟು ಮಾತ್ರ ಉಳಿಸಿಕೊಂಡು ಬಾಕಿ ಶೇ 15ರಷ್ಟು ಶುಲ್ಕವನ್ನು ತಕ್ಷಣ ಹಿಂದಿರುಗಿಸಬೇಕು ಎಂದು ರಾಜ್ಯ ಸರ್ಕಾರ ಶುಕ್ರವಾರ ಆದೇಶ ಹೊರಡಿಸಿದೆ.

ಅಲ್ಲದೆ, ಶಾಲಾ ಅಭಿವೃದ್ಧಿ ಶುಲ್ಕ ಸೇರಿದಂತೆ ಇತರ ಶುಲ್ಕಗಳು, ಟ್ರಸ್ಟ್‌ ಅಥವಾ ಸೊಸೈಟಿಗೆ ದೇಣಿಗೆ ಸ್ವೀಕರಿಸಬಾರದು ಎಂದು ಖಾಸಗಿ ಶಾಲಾ ಆಡಳಿತ ಮಂಡಳಿಗಳಿಗೆ ಸರ್ಕಾರ ಸೂಚಿಸಿದೆ.

ಹೆಚ್ಚುವರಿ ಶುಲ್ಕವನ್ನು 2021–22ನೇ ಸಾಲಿನ ಶುಲ್ಕಕ್ಕೆ ಹೊಂದಾಣಿಕೆ ಮಾಡಿಕೊಳ್ಳಬಹುದು. ಒಂದೊಮ್ಮೆ ನಿಗದಿಪಡಿಸಿದ ಶುಲ್ಕಕ್ಕಿಂತ (ಶೇ 85ಕ್ಕಿಂತ ಹೆಚ್ಚು) ಕಡಿಮೆ ಮಾಡಲು ಆಡಳಿತ ಮಂಡಳಿಗಳು ಇಚ್ಚಿಸಿದರೆ ಅದಕ್ಕೂ ಅವಕಾಶವಿದೆ ಎಂದೂ ಆದೇಶದಲ್ಲಿ ವಿವರಿಸಲಾಗಿದೆ.

ADVERTISEMENT

ಕೋವಿಡ್‌ ಕಾರಣದಿಂದ ಪೋಷಕರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಖಾಸಗಿ ಶಾಲೆಗಳು 2020–21ನೇ ಸಾಲಿನಲ್ಲಿ ಬೋಧನಾ ಶುಲ್ಕದಲ್ಲಿ ಶೇ 30ರಷ್ಟು ಕಡಿತ ಮಾಡುವಂತೆ ರಾಜ್ಯ ಸರ್ಕಾರ 2021ರ ಜ. 29ರಂದು ಆದೇಶ ಹೊರಡಿಸಿತ್ತು. ಆದರೆ, ಈ ಆದೇಶವನ್ನು ಪ್ರಶ್ನಿಸಿ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಹೈಕೋರ್ಟ್‌ ಮೆಟ್ಟಿಲೇರಿತ್ತು.

ಈ ಮಧ್ಯೆ, ಪೋಷಕರಿಂದ ಪೂರ್ಣ ಶುಲ್ಕ ವಸೂಲು ಮಾಡಿದ್ದ ಅನೇಕ ಖಾಸಗಿ ಶಾಲೆಗಳು, ಹೈಕೋರ್ಟ್‌ ಅಂತಿಮ ತೀರ್ಪು ಬಂದ ಬಳಿಕ ಶುಲ್ಕ ಕಡಿತ ಮಾಡುವುದಾಗಿ ಹೇಳಿದ್ದವು. ಸರ್ಕಾರದ ಆದೇಶವನ್ನು ಪರಿಷ್ಕರಿಸಿ ಇದೇ ಸೆ. 16ರಂದು ತೀರ್ಪು ನೀಡಿರುವ ಹೈಕೋರ್ಟ್‌, ಶೇ 15ರಷ್ಟು ಶುಲ್ಕ ಕಡಿತ ಮಾಡುವಂತೆ ಖಾಸಗಿ ಶಾಲೆಗಳಿಗೆ ಸೂಚಿಸಿದೆ. ಆದರೆ, ಅನೇಕ ಶಿಕ್ಷಣ ಸಂಸ್ಥೆಗಳು ಈ ಆದೇಶವನ್ನು ಪಾಲಿಸಿಲ್ಲ. ಹೀಗಾಗಿ, ಸರ್ಕಾರ ಈ ಬಗ್ಗೆ ಆದೇಶ ಹೊರಡಿಸಿದೆ.

ಸರ್ಕಾರದ ಈ ಆದೇಶವನ್ನು ಪೋಷಕರ ಸಂಘಟನೆಗಳು ಸ್ವಾಗತಿಸಿವೆ. ಆದರೆ, ಖಾಸಗಿ ಶಾಲಾ ಆಡಳಿತ ಮಂಡಳಿಗಳು ವಿರೋಧ ವ್ಯಕ್ತಪಡಿಸಿವೆ.

‘ವಾರ್ಷಿಕ ಶುಲ್ಕದಲ್ಲಿ ಶೇ 15ರಷ್ಟು ಕಡಿತ ಮಾಡಬೇಕೆಂದು ಹೈಕೋರ್ಟ್‌ ಸ್ಪಷ್ಟವಾಗಿ ಹೇಳಿದ್ದರೂ, ವಾರ್ಷಿಕ ಶುಲ್ಕವನ್ನು ಬೋಧನಾ ಶುಲ್ಕ ಮತ್ತು ಇತರ ಶುಲ್ಕಗಳು ಎಂದು ಶಿಕ್ಷಣ ಇಲಾಖೆ ಪ್ರತ್ಯೇಕಿಸಿದೆ. ಇದನ್ನು ಒಪ್ಪಲು ಸಾಧ್ಯ ಇಲ್ಲ. ಇದು ಹೈಕೋರ್ಟ್‌ ತೀರ್ಪಿನ ಉಲ್ಲಂಘನೆ ಆಗಲಿದೆ‘ ಎಂದು ಅಭಿಪ್ರಾಯಪಟ್ಟಿರುವ ಖಾಸಗಿ ಶಾಲಾ ಆಡಳಿತ ಮಂಡಳಿಗಳು, ಸರ್ಕಾರದ ಆದೇಶವನ್ನು ಕೋರ್ಟ್‌ನಲ್ಲಿ ಪ್ರಶ್ನಿಸಲು ಮುಂದಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.