ADVERTISEMENT

ಕೆಪಿಸಿಎಲ್‌: ನೇಮಕಾತಿ ಪತ್ರ ವಿತರಣೆ ಇಲ್ಲ –ಸರ್ಕಾರ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 20:30 IST
Last Updated 13 ನವೆಂಬರ್ 2024, 20:30 IST
   

ಬೆಂಗಳೂರು: ‘ಕರ್ನಾಟಕ ವಿದ್ಯುತ್‌ ನಿಗಮ ನಿಯಮಿತದ (ಕೆಪಿಸಿಎಲ್‌) ವಿವಿಧ ಹುದ್ದೆಗಳಿಗೆ ನಡೆದಿರುವ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾದವರಿಗೆ ಹೈಕೋರ್ಟ್‌ ಆದೇಶ ನೀಡುವತನಕ ನೇಮಕಾತಿ ಪತ್ರ ವಿತರಿಸುವುದಿಲ್ಲ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮುಚ್ಚಳಿಕೆ ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಎನ್‌.ನವೀನ್‌ ಕುಮಾರ್‌ ಮತ್ತಿತರರು ಸಲ್ಲಿಸಿರುವ ರಿಟ್‌ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠಕ್ಕೆ ಈ ಕುರಿತಂತೆ ಸರ್ಕಾರ ತಿಳಿಸಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಾದ ಮಂಡಿಸಿದ ಹೈಕೋರ್ಟ್‌ ವಕೀಲ ಎಂ.ಕೆ.ಪೃಥ್ವೀಶ್‌, ‘ತಾತ್ಕಾಲಿಕ ಅಯ್ಕೆ ಪಟ್ಟಿ ಸಂದರ್ಭದಲ್ಲಿ ನೆಗೆಟಿವ್‌ ಮಾರ್ಕಿಂಗ್‌ ಇದೆ ಎಂಬ ನಿಗಮದ ಆದೇಶ ಕಾನೂನು ಬಾಹಿರ. ಇದರಿಂದ ವಿದ್ಯಾರ್ಥಿಗಳಿಗೆ ಸಾಕಷ್ಟು ಅನ್ಯಾಯವಾಗಿದೆ’ ಎಂಬ ಅಂಶವನ್ನು ನ್ಯಾಯಪೀಠದ ಗಮನಕ್ಕೆ ತಂದರು.

ADVERTISEMENT

ಇದಕ್ಕೆ ಪ್ರತಿಯಾಗಿ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ್‌ ಶೆಟ್ಟಿ, ‘ಹೈಕೋರ್ಟ್‌ ಆದೇಶ ನೀಡುವತನಕ ಆಯ್ಕೆಯಾದವರಿಗೆ ನೇಮಕಾತಿ ಆದೇಶ ನೀಡುವುದಿಲ್ಲ’ ಎಂದು ಭರವಸೆ ನೀಡಿದರು. ಇದನ್ನು ದಾಖಲಿಸಿಕೊಂಡ ನ್ಯಾಯಪೀಠ ವಿಚಾರಣೆಯನ್ನು ಇದೇ 26 ಕ್ಕೆ ಮುಂದೂಡಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.