ಬೆಂಗಳೂರು: ಕೊಲೆ ಆರೋಪಿಗಳಿಗೆ ಶಿಕ್ಷೆ ಆದಾಗ ಮಾತ್ರ ಪತ್ರಕರ್ತೆ ಗೌರಿ ಲಂಕೇಶ್ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಗೌರಿ ಮೆಮೋರಿಯಲ್ ಟ್ರಸ್ಟ್‌ನವರು ಗೌರಿ ಲಂಕೇಶ್ ಅವರ ಸ್ಮರಣಾರ್ಥ ನಗರದಲ್ಲಿ ಹಮ್ಮಿಕೊಂಡಿದ್ದ ‘ಸರ್ವಾಧಿಕಾಲದ ಹೊತ್ತಲ್ಲಿ ದೇಶವನ್ನು ಮರುಕಟ್ಟುವ ಕಲ್ಪನೆ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದ್ದಾರೆ.
‘ಅತ್ಯಂತ ಧರ್ಮವಂತರಾಗಿ ಬದುಕುತ್ತಿದ್ದ ಮಹಾತ್ಮ ಗಾಂಧಿಯನ್ನು ಕೊಂದ ಮನಸ್ಥಿತಿಯವರೇ ಗೌರಿ ಲಂಕೇಶ್, ನರೇಂದ್ರ ದಾಭೋಲ್ಕರ್, ಗೋವಿಂದ ಪನ್ಸಾರೆ, ಎಂ.ಎಂ.ಕಲ್ಬುರ್ಗಿ ಅವರನ್ನು ಕೊಂದಿದ್ದಾರೆ. ಮಹಾತ್ಮಗಾಂಧಿ ಅತ್ಯಂತ ಧರ್ಮನಿರಪೇಕ್ಷತೆಯಿಂದ ಬದುಕನ್ನು ಆಚರಿಸುತ್ತಿದ್ದರು. ಅದನ್ನು ಸಹಿಸಲಾಗದ ಮನಸ್ಥಿತಿಯವರು ಅವರನ್ನು ಕೊಂದು ಹಾಕಿದ್ದರು. ಅಂತೆಯೇ ಗೌರಿ ಲಂಕೇಶ್ ಅವರು ಇಂದು ನಮ್ಮ ಜತೆಗಿಲ್ಲ. ಆದರೆ, ಅವರ ಅದಮ್ಯ ಚೇತನ ನಮ್ಮ ಜತೆಗಿದೆ’ ಎಂದು ಸಿದ್ದರಾಮಯ್ಯ ಸ್ಮರಿಸಿದ್ದಾರೆ.
‘ನಾನು ಮೊದಲ ಬಾರಿ ಮುಖ್ಯಮಂತ್ರಿ ಆಗಿದ್ದಾಗ ಗೌರಿ ಅವರು ನನ್ನನ್ನು ಹತ್ತಾರು ಬಾರಿ ಭೇಟಿಯಾಗಿದ್ದರು. ಆದರೆ ಒಂದು ಬಾರಿಯೂ ಪತ್ರಿಕೆಗೆ ಸಹಾಯ ಕೇಳಲು, ತನ್ನ ಕುಟುಂಬಕ್ಕೆ ಸಹಾಯ ಕೇಳಲು, ವೈಯಕ್ತಿಕ ಕೆಲಸಗಳಿಗಾಗಿ ಬಂದಿರಲಿಲ್ಲ. ಕೇವಲ ಆದಿವಾಸಿಗಳ, ರೈತರ, ಕಾರ್ಮಿಕರ ಸಮಸ್ಯೆಗಳಿಗಾಗಿ ಪರಿಹಾರ ಕೇಳಲು ಬರುತ್ತಿದ್ದರು. ಗೌರಿಯನ್ನು ಕೊಂದವರು ಹೇಡಿಗಳು. ವೈಚಾರಿಕವಾಗಿ ಆಕೆಯನ್ನು ಎದುರಿಸಲಾಗದವರು ಕೊಂದಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮಹಾತ್ಮ ಗಾಂಧಿ, ಗೌರಿ ಲಂಕೇಶ್ ಮಾತ್ರವಲ್ಲ. ಯಾರು ಬಸವಾದಿ ಶರಣರು, ಅಂಬೇಡ್ಕರ್, ಬುದ್ಧನ ವಿಚಾರ ಧಾರೆಗಳನ್ನು ಆಚರಿಸುತ್ತಾ ಜಾತಿ ಅಸಮಾನತೆ, ಧರ್ಮ ಸಂಘರ್ಷವನ್ನು ವಿರೋಧಿಸುತ್ತಾರೋ ಅವರೆಲ್ಲರಿಗೂ ಬೆದರಿಕೆ ಪತ್ರಗಳನ್ನು ಬರೆಯುತ್ತಿದ್ದಾರೆ. ಸಾಹಿತಿಗಳಿಗೆ ಬೆದರಿಕೆ ಪತ್ರ ಬರೆಯುತ್ತಿರುವ ಕಿಡಿಗೇಡಿಗಳು ಎಷ್ಟೇ ಪ್ರಬಲರಾಗಿದ್ದರೂ, ಅವರ ಹಿಂದೆ ಎಷ್ಟೇ ದೊಡ್ಡ ರಾಜಕೀಯ ಒತ್ತಾಸೆ ಇದ್ದರೂ ಅವರನ್ನು ಬಂಧಿಸಿ ಕಾನೂನು ಕ್ರಮಕ್ಕೆ ಒಪ್ಪಿಸಲಾಗುವುದು ಎಂದು ಸಿಎಂ ಭರವಸೆ ನೀಡಿದ್ದಾರೆ.
‘ಆರೋಪಿಗಳಿಗೆ ಶಿಕ್ಷೆ ಆದಾಗ ಮಾತ್ರ ಗೌರಿ ಆತ್ಮಕ್ಕೆ ಶಾಂತಿ ಸಿಗುತ್ತದೆ. ಪೊಲೀಸ್ ಅಧಿಕಾರಿಗಳ ಜತೆ ಈ ಬಗ್ಗೆ ಚರ್ಚೆ ನಡೆಸಿ ಮಾಹಿತಿ ಪಡೆದಿದ್ದೇನೆ. ಸಾವಿರಕ್ಕೂ ಅಧಿಕ ಪುಟಗಳ ಆರೋಪ ಪಟ್ಟಿ ಸಲ್ಲಿಕೆಯಾಗಿ, 500ಕ್ಕೂ ಹೆಚ್ವು ಸಾಕ್ಷಿಗಳನ್ನು ಪಟ್ಟಿ ಮಾಡಲಾಗಿದೆ. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಕೂಡ ವೇಗವಾಗಿ ನಡೆಯುತ್ತಿದೆ ಎನ್ನುವ ಮಾಹಿತಿ ಸಿಕ್ಕಿದೆ. ಹೀಗಾಗಿ ತನಿಖಾ ತಂಡದ ವೃತ್ತಿಪರತೆ ಮತ್ತು ಶ್ರಮ ವ್ಯರ್ಥ ಆಗುವುದಿಲ್ಲ. ಆರೋಪಿಗಳಿಗೆ ಖಂಡಿತಾ ಶಿಕ್ಷೆ ಆಗುತ್ತದೆ ಎನ್ನುವ ಭರವಸೆ ನನಗಿದೆ’ ಎಂದಿದ್ದಾರೆ.
‘ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ. ನನ್ನ ಅಪ್ಪ–ಅಮ್ಮನಿಗೆ ಹುಟ್ಟಿದ್ದೇನೆ. ನಾನು ಧರ್ಮದ ವಿರುದ್ಧ ಅಲ್ಲ. ಆದರೆ ಸಂಸತ್‌ನಲ್ಲಿ ಹೋಮ–ಹವನ ಮಾಡಬಾರದು. ಇಂದು ಗೌರಿಯ ದಿನ. ನಮ್ಮ ಧ್ವನಿ ಹತ್ತಿಕ್ಕಿಸಲು ಯಾರಿಂದಲೂ ಸಾಧ್ಯವಿಲ್ಲ’ ಎಂದು ನಟ ಪ್ರಕಾಶ್ ರಾಜ್ ಹೇಳಿದರು.
‘ಗೌರಿಯ ಕುಟುಂಬ ಬೆಳೆಯುತ್ತಿದೆ. ನಾವು ನಿರಂತರವಾಗಿ ಹೋರಾಟ ಮುಂದುವರಿಸೋಣ. ಗೌರಿಯ ಆಶಯಗಳನ್ನು ಮುಂದಿನ ಪೀಳಿಗೆಯತ್ತ ಕೊಂಡೊಯ್ಯಬೇಕು’ ಎಂದು ಗೌರಿ ಸೋದರಿ ಕವಿತಾ ಲಂಕೇಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.