ADVERTISEMENT

ಮದ್ಯದ ದರಕ್ಕೆ ಲಗಾಮು: ನಿಯಮಕ್ಕೆ ತಿದ್ದುಪಡಿ ಮಾಡಲು ಮುಂದಾದ ರಾಜ್ಯ ಸರ್ಕಾರ

​ಪ್ರಜಾವಾಣಿ ವಾರ್ತೆ
Published 21 ಜೂನ್ 2024, 23:30 IST
Last Updated 21 ಜೂನ್ 2024, 23:30 IST
<div class="paragraphs"><p>ಮದ್ಯ (ಪ್ರಾತಿನಿಧಿಕ ಚಿತ್ರ)</p></div>

ಮದ್ಯ (ಪ್ರಾತಿನಿಧಿಕ ಚಿತ್ರ)

   

ಬೆಂಗಳೂರು: ಮದ್ಯದ ದರಕ್ಕೆ ಲಗಾಮು ಹಾಕುವುದಕ್ಕಾಗಿ ಮದ್ಯ ಉತ್ಪಾದಕರು ಇತರೆ ರಾಜ್ಯಗಳಿಗೆ ನೀಡುತ್ತಿರುವ ಕನಿಷ್ಠ ಘೋಷಿತ ದರದಲ್ಲೇ ಕರ್ನಾಟಕಕ್ಕೂ ಮದ್ಯ ಪೂರೈಸುವುದನ್ನು ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಈ ಉದ್ದೇಶದಿಂದ ಕರ್ನಾಟಕ ಅಬಕಾರಿ (ಅಬಕಾರಿ ಸುಂಕಗಳು ಮತ್ತು ಶುಲ್ಕಗಳು) ನಿಯಮಗಳು–1968ಕ್ಕೆ ಮತ್ತೊಂದು ತಿದ್ದುಪಡಿ ತರಲು ಹಣಕಾಸು ಇಲಾಖೆ ಶುಕ್ರವಾರ ಕರಡು ಅಧಿಸೂಚನೆ ಪ್ರಕಟಿಸಿದೆ. ಜುಲೈ 1ರಿಂದಲೇ ಈ ತಿದ್ದುಪಡಿಗಳೂ ಜಾರಿಗೆ ಬರಲಿವೆ.

ADVERTISEMENT

ಮದ್ಯ ತಯಾರಕರು ಮತ್ತು ಪೂರೈಕೆದಾರರು ನಿಗದಿಪಡಿಸುವ ಘೋಷಿತ ಬೆಲೆಗೆ ಅಬಕಾರಿ ತೆರಿಗೆ ಹಾಗೂ ಹೆಚ್ಚುವರಿ ಅಬಕಾರಿ ತೆರಿಗೆಗಳನ್ನು ಸೇರಿಸಿದ ಬಳಿಕ ಮಾರಾಟ ದರವನ್ನು ನಿರ್ಧರಿಸಲಾಗುತ್ತದೆ. ಬಹುತೇಕ ಮದ್ಯ ತಯಾರಿಕಾ ಕಂಪನಿಗಳು, ಪೂರೈಕೆದಾರರು ಇತರೆ ರಾಜ್ಯಗಳಿಗೆ ಕಡಿಮೆ ಘೋಷಿತ ದರಕ್ಕೆ ಮದ್ಯ ಪೂರೈಸುತ್ತಿದ್ದು, ಕರ್ನಾಟಕಕ್ಕೆ ಹೆಚ್ಚಿನ ಘೋಷಿತ ದರ ವಿಧಿಸುತ್ತಿವೆ. ಇದರಿಂದ ರಾಜ್ಯದಲ್ಲಿ ಮದ್ಯ ಖರೀದಿದಾರರಿಗೆ ಆಗುತ್ತಿರುವ ನಷ್ಟ ತಪ್ಪಿಸಲು ಅಬಕಾರಿ ನಿಯಮಗಳಿಗೆ ತಿದ್ದುಪಡಿ ತರಲಾಗುತ್ತಿದೆ ಎಂದು ಅಬಕಾರಿ ಇಲಾಖೆ ಮೂಲಗಳು ತಿಳಿಸಿವೆ.

ಹೊಸ ನಿಯಮಗಳ ಪ್ರಕಾರ, ಎಲ್ಲ ಮದ್ಯ ತಯಾರಕರು, ಬ್ರೀವರಿ, ವೈನರಿ ಮಾಲೀಕರು ಮತ್ತು ಮದ್ಯ ಪೂರೈಕೆದಾರರು ಪ್ರತಿಯೊಂದು ಘೋಷಿತ ಬ್ರ್ಯಾಂಡ್‌ ಮದ್ಯದ ಘೋಷಿತ ದರದ ಕುರಿತು ಪ್ರಮಾಣಪತ್ರ ಸಲ್ಲಿಸಬೇಕು. ಉತ್ಪಾದನಾ ವೆಚ್ಚದ ಮಾಹಿತಿಯನ್ನೂ ಲೆಕ್ಕ ಪರಿಶೋಧಕರು ಮತ್ತು ವೆಚ್ಚ ಪರಿಶೋಧಕರ ಪ್ರಮಾಣೀಕರಣದೊಂದಿಗೆ ಸಲ್ಲಿಸಬೇಕು.

ರಾಜ್ಯಕ್ಕೆ ನೀಡುವ ಮದ್ಯದ ಘೋಷಿತ ಬೆಲೆಯು ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಅಥವಾ ಸೇನಾ ಕ್ಯಾಂಟೀನ್‌ ಸ್ಟೋರ್ಸ್‌ ಇಲಾಖೆಗೆ ನೀಡುವ ಕನಿಷ್ಠ ಘೋಷಿತ ಬೆಲೆಗಿಂತ ಕಡಿಮೆ ಇರಬೇಕು ಅಥವಾ ಸಮನಾಗಿರಬೇಕು. ಇದರಲ್ಲಿ ಯಾವುದು ಕಡಿಮೆಯೋ ಅದನ್ನೇ ವಿಧಿಸಬೇಕು ಎಂಬ ತಿದ್ದುಪಡಿಯೂ ಇದೆ.

ಇತರ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ವಿಧಿಸುತ್ತಿರುವ ಘೋಷಿತ ದರದ ಕುರಿತು ಅಲ್ಲಿನ ಸರ್ಕಾರಿ ಸಂಸ್ಥೆಗಳ ದೃಢೀಕರಣದೊಂದಿಗೆ ಸಲ್ಲಿಸಬೇಕು. ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗಳಿಗೆ ಘೋಷಿತ ದರ ಕಡಿಮೆ ಮಾಡಿದರೆ ಅದನ್ನು ರಾಜ್ಯಕ್ಕೂ ಅನ್ವಯಿಸುವುದನ್ನು ಕಡ್ಡಾಯಗೊಳಿಸಲಾಗುತ್ತಿದೆ.

‘ಬಹುತೇಕ ಮದ್ಯ ತಯಾರಕರು ಇತರ ರಾಜ್ಯಗಳಿಗಿಂತ ಹೆಚ್ಚಿನ ಘೋಷಿತ ದರದಲ್ಲಿ ಕರ್ನಾಟಕಕ್ಕೆ ಮದ್ಯ ಮಾರಾಟ ಮಾಡುತ್ತಿವೆ. ಈ ತಿದ್ದುಪಡಿ ಜಾರಿಯಾದ ಬಳಿಕ ಮದ್ಯದ ಘೋಷಿತ ಬೆಲೆಯೂ ಇಳಿಕೆಯಾಗಲಿದೆ. ಇದರಿಂದ ಬಹುತೇಕ ಬ್ರ್ಯಾಂಡ್‌ಗಳ ಮದ್ಯದ ದರಗಳು ಮತ್ತಷ್ಟು ಇಳಿಕೆಯಾಗಲಿವೆ’ ಎಂದು ಅಬಕಾರಿ ಇಲಾಖೆ ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.