ADVERTISEMENT

ಅಕ್ರಮ ಗಣಿಗಾರಿಕೆ: ಜನಾರ್ದನ‌ ರೆಡ್ಡಿ ಆಸ್ತಿ ಜಪ್ತಿ ಪ್ರಕ್ರಿಯೆಗೆ ಸರ್ಕಾರ ಅಸ್ತು

​ಪ್ರಜಾವಾಣಿ ವಾರ್ತೆ
Published 12 ಜನವರಿ 2023, 18:12 IST
Last Updated 12 ಜನವರಿ 2023, 18:12 IST
ಗಾಲಿ ಜನಾರ್ದನ‌ ರೆಡ್ಡಿ
ಗಾಲಿ ಜನಾರ್ದನ‌ ರೆಡ್ಡಿ   

ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣದ ಆರೋಪಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮತ್ತು ಅವರ ಕುಟುಂಬದ ಸದಸ್ಯರಿಗೆ ಸೇರಿದ ಸ್ಥಿರಾಸ್ತಿಗಳ ಜಪ್ತಿಗೆ ಚಾಲನೆ ನೀಡುವ ಸಿಬಿಐನ ಕಾನೂನು ಪ್ರಕ್ರಿಯೆಗೆ ರಾಜ್ಯ ಸರ್ಕಾರ ಹಸಿರು ನಿಶಾನೆ ತೋರಿದೆ.

‘ಜನಾರ್ದನ ರೆಡ್ಡಿ ಅವರಿಗೆ ಸೇರಿದ ಹೆಚ್ಚುವರಿ ಆಸ್ತಿಗಳ ಜಪ್ತಿಗೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಅನುಮತಿ ಕೋರಿ ಸಲ್ಲಿಸಿರುವ ಮನವಿ ಪತ್ರವನ್ನು ತುರ್ತಾಗಿ ಪರಿಗಣಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು‘ ಎಂದು ಕೋರಿ ಸಿಬಿಐ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಸರ್ಕಾರದ ಪರ ವಿಡಿಯೊ ಕಾನ್ಫರೆನ್ಸ್‌ ಮುಖಾಂತರ ಹಾಜರಾಗಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ, ‘ಜಪ್ತಿ ಪ್ರಕ್ರಿಯೆ ಆರಂಭಿಸಲು ಸರ್ಕಾರ ಅನುಮತಿ ನೀಡಿ ಗುರುವಾರ (ಜ.12) ಆದೇಶಿಸಿದೆ’ ಎಂದು ವಿವರಿಸಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ, ‘ಈ ಅರ್ಜಿ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸುವ ಅಗತ್ಯವಿಲ್ಲ’ ಎಂದು ವಿಲೇವಾರಿ ಮಾಡಿತು. ಇದರಿಂದಾಗಿ ₹ 19 ಕೋಟಿ ಮೌಲ್ಯದ 219 ಹೆಚ್ಚುವರಿ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಯ ಹಾದಿ ಸುಗುಮಗೊಂಡಂತಾಗಿದೆ. ಸಿಬಿಐ ಪರ ಪಿ.ಪ್ರಸನ್ನಕುಮಾರ್ ಹಾಜರಿದ್ದರು.

ADVERTISEMENT

ಸಿಬಿಐ ವಿಳಂಬ ನಡೆಯಿಂದ ಆಘಾತ: ನ್ಯಾಯಪೀಠ
‘ಸಿಬಿಐ ಈ ಪ್ರಕರಣದಲ್ಲಿ ಏಳು ವರ್ಷಗಳ ವಿಳಂಬ ತೋರಿದೆ. ಇದನ್ನು ಸಿಬಿಐ ಹೇಗೆ ಸಮರ್ಥಿಸಿಕೊಳ್ಳುತ್ತದೆ. ತಡವಾಗಿದೆ ಎಂದು ರಾಜ್ಯ ಸರ್ಕಾರದ ಮೇಲೆ ದೂರು ಹೇಳುವ ಸಿಬಿಐ, ರೆಡ್ಡಿಯ ₹ 65 ಕೋಟಿ ಮೌಲ್ಯದ ಆಸ್ತಿಯನ್ನು ಏಕೆ ಜಪ್ತಿ ಮಾಡಿಲ್ಲ? ಇದರ ಹಿಂದಿನ ಉದ್ದೇಶವೇನು? ಪ್ರಕರಣವನ್ನು ನಮೂದಿಸಿ ಅದಕ್ಕೊಂದು ನಂಬರ್‌ ಪಡೆಯಲು ಏಳು ವರ್ಷ ಹಿಡಿದಿದೆ ಎಂಬ ವಿಚಾರ ಆಘಾತ ಉಂಟು ಮಾಡುತ್ತದೆ. ಎಲ್ಲಾ ಅರ್ಜಿಗಳಲ್ಲೂ ಇದೇ ರೀತಿ ಆಗುತ್ತದೆಯೇ? ಅಥವಾ ಈ ಅರ್ಜಿಯಲ್ಲಿ ಮಾತ್ರವೇ ಹೀಗಾಗಿದೆಯೇ’ ಎಂದು ಪ್ರಶ್ನಿಸಿದ ನ್ಯಾಯಪೀಠ, ಸಿಬಿಐ ಆದಷ್ಟು ಶೀಘ್ರವೇ ವಿಚಾರಣಾ ನ್ಯಾಯಾಲಯದಲ್ಲಿ ತನ್ನ ಕಾನೂನು ಪ್ರಕ್ರಿಯೆ ಪೂರೈಸುವಂತೆ ಆದೇಶಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.