ADVERTISEMENT

ಒಳ ಮೀಸಲಾತಿಗೆ ಆಯೋಗ ರಚಿಸಿದ ರಾಜ್ಯ ಸರ್ಕಾರ

ನ್ಯಾ. ನಾಗಮೋಹನ್ ದಾಸ್ ನೇತೃತ್ವ *ಕಾಂತರಾಜ ವರದಿಯ ದತ್ತಾಂಶ ಪರಿಗಣನೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2024, 22:55 IST
Last Updated 13 ನವೆಂಬರ್ 2024, 22:55 IST
<div class="paragraphs"><p>ನ್ಯಾ. ನಾಗಮೋಹನ್ ದಾಸ್</p></div>

ನ್ಯಾ. ನಾಗಮೋಹನ್ ದಾಸ್

   

ಬೆಂಗಳೂರು: ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸುವ ಕುರಿತು ಪರಿಶೀಲಿಸಿ, ಸೂಕ್ತ ಶಿಫಾರಸುಗಳ ಸಹಿತ ವರದಿ ನೀಡಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅಧ್ಯಕ್ಷತೆಯಲ್ಲಿ ಏಕ ಸದಸ್ಯ ಆಯೋಗವನ್ನು ರಾಜ್ಯ ಸರ್ಕಾರ ರಚಿಸಿದೆ.

‌ಈ ಸಂಬಂಧ ಸಮಾಜ ಕಲ್ಯಾಣ ಇಲಾಖೆ ನ.12ರಂದು ಆದೇಶ ಹೊರಡಿಸಿದೆ.

ADVERTISEMENT

ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರನ್ನು ಈ ಆಯೋಗದ ಸಂಚಾಲಕರಾಗಿ ಮತ್ತು ಇಂದಿರಾ ಗಾಂಧಿ ವೃತ್ತಿ ತರಬೇತಿ ಕೇಂದ್ರದ ಹೆಚ್ಚುವರಿ ನಿರ್ದೇಶಕಿ ಎಂ.ಎನ್. ಸತ್ಯಶ್ರೀ ಅವರನ್ನು ಕಾರ್ಯದರ್ಶಿಯಾಗಿ ನೇಮಿಸಲು ತೀರ್ಮಾನಿಸಲಾಗಿದೆ ಎಂದು ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ರಾಜ್ಯದಲ್ಲಿ ಶಿಕ್ಷಣ ಮತ್ತು ಸರ್ಕಾರಿ ಸೇವೆಗಳಲ್ಲಿ ಪರಿಶಿಷ್ಟ ಜಾತಿಯ ವಿವಿಧ ಉಪಜಾತಿಗಳಿಗೆ ಸೇರಿದವರ ಪ್ರಾತಿನಿಧ್ಯ ಕುರಿತು ಪರಿಶೀಲನಾರ್ಹ ದತ್ತಾಂಶ (ಎಂಫರಿಕಲ್ ಡಾಟಾ) ಪಡೆದು, ಒಳ ಮೀಸಲಾತಿ ಬಗ್ಗೆ ಎರಡು ತಿಂಗಳ ಒಳಗೆ ಆಯೋಗವು ವರದಿ ಸಲ್ಲಿಸಬೇಕಿದೆ.

ಒಳ ಮೀಸಲಾತಿ ಕುರಿತು ಪರಿಶೀಲಿಸುವ ಸಲುವಾಗಿ ಆಯೋಗ ರಚಿಸಲು ಅಗಸ್ಟ್ 24ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು.

ಲಿಂಗಾಯತಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡಬೇಕೆಂಬ ಬೇಡಿಕೆ ಹಾಗೂ ಪರಿಶಿಷ್ಟ ಪಂಗಡದವರ ಮೀಸಲಾತಿ ಹೆಚ್ಚಳದ ಕುರಿತು ವರದಿ ನೀಡಲು ನ್ಯಾ. ನಾಗಮೋಹನದಾಸ್ ಅವರ ನೇತೃತ್ವದಲ್ಲಿಯೇ ಸಮಿತಿ ರಚಿಸಲಾಗಿತ್ತು.

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಐದು ಪ್ರಮುಖ ಇಲಾಖೆಗಳ ಕಾಮಗಾರಿಗಳಲ್ಲಿ ಶೇ 40ರಷ್ಟು ಕಮಿಷನ್‌ ಪಡೆಯಲಾಗುತ್ತಿತ್ತು ಎಂಬ ಆರೋಪ ಕುರಿತು ತನಿಖೆ ನಡೆಸಲು ನಾಗಮೋಹನ್‌ ದಾಸ್ ನೇತೃತ್ವದ

ಆಯೋಗ ವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ 2023ರ ಆಗಸ್ಟ್‌ 5ರಂದು ನೇಮಿಸಿದ್ದು, ಆಯೋಗ ತನಿಖೆ ನಡೆಸುತ್ತಿದೆ.

ಒಳಮೀಸಲಾತಿ ಹಂಚಿಕೆಗೆ ಪರಿಶಿಷ್ಟ ಜಾತಿಯಲ್ಲಿರುವ ಉಪಜಾತಿಗಳ ಜನಸಂಖ್ಯೆಯ ಎಂಫರಿಕಲ್ ಡಾಟಾ ಅಗತ್ಯವಿದೆ. ಸದ್ಯ 2011ರ ಜನಗಣತಿಯ ಅಂಕಿಅಂಶ ಮಾತ್ರ ಅಧಿಕೃತ. ಆದರೆ, ಅದರಲ್ಲಿ ಉಪ ಜಾತಿಗಳ ಅಂಕಿಅಂಶ ಇಲ್ಲ. ಪರಿಶೀಲನಾ ತ್ಮಕ ದತ್ತಾಂಶವಾಗಿ ಯಾವುದನ್ನು ಪರಿಗಣಿಸಬೇಕು ಎಂಬ ಬಗ್ಗೆಯೂ ಚರ್ಚೆ ನಡೆದಿದೆ.

2011ರ ಜನಗಣತಿಯಲ್ಲಿ ಪರಿಶಿಷ್ಟ ಜಾತಿಯಲ್ಲಿನ ಉಪ ಜಾತಿಗಳ ದತ್ತಾಂಶ ಇಲ್ಲ. ಹೊಸತಾಗಿ ದತ್ತಾಂಶ ಸಂಗ್ರಹಿಸಲು ಕನಿಷ್ಠ ಆರು ತಿಂಗಳು ಬೇಕು.

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಎಚ್. ಕಾಂತರಾಜ ಅವರ ಅವಧಿಯಲ್ಲಿ 2015ರಲ್ಲಿ ರಾಜ್ಯದಲ್ಲಿ ನಡೆದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಜನಗಣತಿ) ವರದಿಯಲ್ಲಿ ಪರಿಶಿಷ್ಟ ಜಾತಿಯಲ್ಲಿನ ಉಪ ಜಾತಿಗಳ ದತ್ತಾಂಶವಿದೆ. ಆದರೆ, ಈ ವರದಿಯನ್ನು ಸರ್ಕಾರ ಇನ್ನೂ ಒಪ್ಪಿಕೊಂಡಿಲ್ಲ.

ಕಾಂತರಾಜ ಆಯೋಗದ ವರದಿಯನ್ನು ಸರ್ಕಾರ ಒಪ್ಪಿಕೊಳ್ಳಲಿದೆ ಎಂದು ಮುಖ್ಯಮಂತ್ರಿ ಮಾತು ಕೊಟ್ಟಿದ್ದಾರೆ. ಅದರಲ್ಲಿರುವ ದತ್ತಾಂಶವನ್ನೇ ಆಯೋಗವು ಪರಿಗಣನೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.