ಬೆಂಗಳೂರು: ‘ರಾಜ್ಯದ ಕಾಂಗ್ರೆಸ್ ಸರ್ಕಾರದ ಹಠಮಾರಿತನದ ಕಾರಣದಿಂದ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆಯ (ಕೆಐಒಸಿಎಲ್) 300–400 ಕಾರ್ಮಿಕರು ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಕೇಂದ್ರದ ಕೈಗಾರಿಕೆಗಳಿಗೆ ರಾಜ್ಯದಲ್ಲಿ ಸಹಕಾರ ಸಿಗುತ್ತಿಲ್ಲ’ ಎಂದು ಕೇಂದ್ರ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, ‘ಕೆಐಒಸಿಎಲ್ ಮತ್ತು ಎಚ್‌ಎಂಟಿ ವಿಚಾರದಲ್ಲಿ ರಾಜ್ಯಸರ್ಕಾರವು ಸುಳ್ಳು ಹೇಳುತ್ತಿದೆ. ಈ ಮೂಲಕ ರಾಜ್ಯದ ಜನರ ಹಾದಿ ತಪ್ಪಿಸುತ್ತಿದೆ’ ಎಂದರು.
‘ಕೆಐಒಸಿಎಲ್‌ಗೆ ರಾಜ್ಯ ಸರ್ಕಾರವು ಗಣಿ ಮಂಜೂರು ಮಾಡದೇ ಇರುವ ಕಾರಣಕ್ಕೆ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ವಿಶಾಖಪಟ್ಟಣದ ರಾಷ್ಟ್ರೀಯ ಉಕ್ಕು ಕಾರ್ಖಾನೆಯಲ್ಲಿ ಹೀಗೆಯೇ 4,500 ಜನ ಕೆಲಸ ಕಳೆದುಕೊಂಡಿದ್ದರು. ಅಲ್ಲಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜತೆ ಚರ್ಚಿಸಿದರು. 48 ಗಂಟೆಯಲ್ಲೇ ಎಲ್ಲರನ್ನೂ ಕೆಲಸಕ್ಕೆ ತೆಗೆದುಕೊಳ್ಳಲಾಯಿತು’ ಎಂದರು.
‘ನಮ್ಮ ನೆರೆಯ ಆಂಧ್ರಪ್ರದೇಶದಲ್ಲಿ ಅಷ್ಟು ಸಹಕಾರ ಸಿಗುತ್ತಿದೆ. ರಾಜ್ಯದಲ್ಲಿನ ಬೃಹತ್ ಕೈಗಾರಿಕೆಗಳನ್ನು ಉಳಿಸಬೇಕು ಎಂದು ನಾನು ಹೋರಾಡುತ್ತಿದ್ದೇನೆ. ಆದರೆ ಈ ಬಗ್ಗೆ ರಾಜ್ಯದ ಒಬ್ಬ ಪ್ರತಿನಿಧಿಯೂ ನನ್ನನ್ನು ಸಂಪರ್ಕಿಸಿ, ಚರ್ಚಿಸಿಲ್ಲ. ಇಲ್ಲಿ ಸಹಕಾರವೇ ಇಲ್ಲ’ ಎಂದರು.
‘ಈ ಸಮಸ್ಯೆಗಳನ್ನು ಬಗೆಹರಿಸುವಂತೆ ಮುಖ್ಯಮಂತ್ರಿ ಮತ್ತು ಅರಣ್ಯ ಸಚಿವರಿಗೆ ಪತ್ರ ಬರೆಯುತ್ತೇನೆ. ಸಭೆ ನಡೆಸಲಿ, ದಾಖಲೆಗಳನ್ನು ಮುಂದಿಡುತ್ತೇನೆ. ನನ್ನ ತಪ್ಪಿದ್ದರೆ, ಅದರ ಹೊಣೆ ಹೊರುತ್ತೇನೆ’ ಎಂದರು.
‘ಈ ಸರ್ಕಾರದ ಬಳಿ ಹಣವೇ ಇಲ್ಲ. ಒಂದು ಪೈಸೆ ಇಲ್ಲದಿದ್ದರೂ ನೈಸ್ ಹೆದ್ದಾರಿ ಮಾಡುತ್ತೇವೆ, ಟೌನ್‌ಶಿಪ್ ಮಾಡುತ್ತೇವೆ ಎನ್ನುತ್ತಾರೆ. ಆ ಭಾಗದ ಜನರ ಬಗ್ಗೆ ಕಾಳಜಿ ಇದ್ದದ್ದೇ ಆದರೆ ನೈಸ್ ಯೋಜನೆಯಲ್ಲಿ ಆಗಿರುವ ಅಕ್ರಮಗಳ ಬಗ್ಗೆ ಟಿ.ಬಿ.ಜಯಚಂದ್ರ ನೇತೃತ್ವದ ಸದನ ಸಮಿತಿ ನೀಡಿದ ವರದಿಯ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಲಿ’ ಎಂದು ಡಿ.ಕೆ.ಶಿವಕುಮಾರ್ ಅವರ ಹೆಸರು ಹೇಳದೆಯೇ ಸವಾಲು ಹಾಕಿದರು.
‘ಬೆಂಗಳೂರು ಮಳೆ ನೀರಿನಲ್ಲಿ ಮುಳುಗಿದೆ. ಬ್ರ್ಯಾಂಡ್ ಬೆಂಗಳೂರು ಮಾಡುತ್ತೇವೆ ಎಂದು ಹೇಳಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಲ್ಲಿದ್ದಾರೆ? ಅರ್ಧಗಂಟೆಯಲ್ಲಿ ನೀರು ಖಾಲಿ ಮಾಡುತ್ತೇವೆ ಎಂದಿದ್ದರು. ಬೆಂಗಳೂರು ಉಸ್ತುವಾರಿ ಸಚಿವರಾಗಿ ಒಂದೂವರೆ ವರ್ಷದಲ್ಲಿ ಮಾಡದ ಕೆಲಸವನ್ನು ಅರ್ಧ ಗಂಟೆಯಲ್ಲಿ ಮಾಡಲು ಸಾಧ್ಯವೇ’ ಎಂದು ಪ್ರಶ್ನಿಸಿದರು.
ಸಂಸದರ ಕೋಟಾದಲ್ಲಿ 26 ಸಂಸದರಿಗೆ ರಾಜ್ಯ ಸರ್ಕಾರ ಹೊಸ ಕಾರು ನೀಡಿದೆ. ಆದರೆ ನನಗೆ ಮತ್ತು ಕೋಲಾರ ಸಂಸದ ಮಲ್ಲೇಶ್ ಬಾಬುಗೆ ಹೊಸ ಕಾರು ಕೊಟ್ಟಿಲ್ಲ.–ಎಚ್.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ
‘ಡಿಎಂಕೆ ಜತೆ ಮಾತನಾಡಲಿ’
‘ಕುಮಾರಸ್ವಾಮಿ ಅವರು ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುಮತಿ ಕೊಡಿಸಿಕೊಡಲಿ ಎಂದು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಹೇಳಿದ್ದಾರೆ. ತಮಿಳುನಾಡು ತಕರಾರು ತೆಗೆಯುತ್ತಿದೆ. ಕಾಂಗ್ರೆಸ್‌ನ ಮಿತ್ರಪಕ್ಷ ಡಿಎಂಕೆ ಅಲ್ಲಿ ಅಧಿಕಾರದಲ್ಲಿದೆ. ಅವರೊಂದಿಗೆ ಮಾತನಾಡಲಿ’ ಎಂದರು.
‘ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಅನುಕೂಲವಾಗುತ್ತದೆ. ಈ ಯೋಜನೆಗೆ ಅನುಮತಿ ಹೇಗೆ ಪಡೆದುಕೊಳ್ಳಬೇಕು ಎಂಬುದು ಕಾಂಗ್ರೆಸ್ ಸರ್ಕಾರಕ್ಕೆ ಗೊತ್ತಿಲ್ಲ. ಕೇಂದ್ರ ಸರ್ಕಾರದ ಜತೆ ಹೇಗೆ ವರ್ತಿಸಬೇಕು ಎಂಬುದೇ ಇವರಿಗೆ ಗೊತ್ತಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.