ಬೆಂಗಳೂರು: ನ್ಯಾ.ಸದಾಶಿವ ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸುವ ಕುರಿತು ರಾಜ್ಯ ಸರ್ಕಾರ 15 ದಿನಗಳ ಒಳಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೋರಲಾಗಿದೆ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡಗಳಿಗೆ ಒಳಮೀಸಲಾತಿ ನೀಡುವ ಅಧಿಕಾರ ರಾಜ್ಯಗಳಿಗೆ ಇದೆ ಎಂದು ಸುಪ್ರೀಂಕೋರ್ಟ್‌ನ ಸಂವಿಧಾನ ಪೀಠ ಐತಿಹಾಸಿಕ ತೀರ್ಪು ನೀಡಿದೆ. ಹಾಗಾಗಿ, ಒಳ ಮೀಸಲಾತಿ ಜಾರಿಗೆ ಇದ್ದ ಎಲ್ಲ ತೊಡಕುಗಳೂ ನಿವಾರಣೆಯಾಗಿವೆ. ತೀರ್ಪುಹೊರಬಿದ್ದ ತಕ್ಷಣ ತೆಲಂಗಾಣ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸುವುದಾಗಿ ಘೋಷಿಸಿದೆ. ಸುಗ್ರೀವಾಜ್ಞೆ ಹೊರಡಿಸುವ ಭರವಸೆ ನೀಡಿದೆ. ರಾಜ್ಯದಲ್ಲೂ ಪರಿಶಿಷ್ಟರ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ಜಾರಿಗೆ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪರಿಶಿಷ್ಟ ಜಾತಿಗಳು ಏಕರೂಪಿ ಸಮುದಾಯವಲ್ಲ. ಹೀಗಾಗಿ ರಾಜ್ಯಗಳು ಸಂವಿಧಾನದ 15(4), 16(4)ನೇಯ ವಿಧಿಯಡಿಯಲ್ಲಿ ಅಧಿಕಾರವನ್ನು ಬಳಸಿ, ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸಬಹುದು ಎಂಬ ತೀರ್ಪು ತಳಸಮುದಾಯಗಳ ಹಲವು ವರ್ಷಗಳ ಹೋರಾಟಕ್ಕೆ ದೊರೆತ ಫಲ. ಒಳ ಮೀಸಲಾತಿ ವಿರುದ್ಧ ಕೋರ್ಟ್ ಮೊರೆ ಹೋಗಿದ್ದ ಇ.ವಿ. ಚಿನ್ನಯ್ಯ ಅವರ ನಡೆಯಿಂದಾದ ಸಮಸ್ಯೆಗಳೂ ನಿವಾರಣೆಯಾಗಿವೆ ಎಂದರು.
ಮಾಜಿ ಸಚಿವ ಎಚ್. ಆಂಜನೇಯ ಮಾತನಾಡಿ, ಪರಿಶಿಷ್ಟರಲ್ಲಿ ಕೆಲವೇ ಸಮುದಾಯಗಳು ಮೀಸಲಾತಿಯ ಲಾಭ ಪಡೆಯುತ್ತಿವೆ. ಮಾದಿಗರು ಸೇರಿದಂತೆ ಕೆಲವರಿಗೆ ಸಿಕ್ಕ ಮೀಸಲಾತಿ ಶೇ 1ರಷ್ಟು ಇರಲಿಲ್ಲ. ಈಗ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸುವ ಮೂಲಕ ಶೋಷಿತ ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಕೋರಿದರು.
ರಾಜ್ಯಸಭೆ ಮಾಜಿ ಸದಸ್ಯ ಎಲ್. ಹನುಮಂತಯ್ಯ ಮಾತನಾಡಿ, ಶೋಷಿತ ಸಮುದಾಯಗಳ ದಶಕಗಳ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಪರಿಷ್ಟರ ಜನಸಂಖ್ಯೆ ಆಧಾರದಲ್ಲಿ ನ್ಯಾ. ಸದಾಶಿವ ಆಯೋಗ ಒಳಮೀಸಲಾತಿ ವರ್ಗೀಕರಣ ಮಾಡಿತ್ತು. ವಿಧಾನಸಭೆ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ತನ್ನ ಪ್ರಾಣಾಳಿಕೆಯಲ್ಲಿ ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರಲು ಭರವಸೆ ನೀಡಿತ್ತು. ಆಯೋಗ ಶಿಫಾರಸುಗಳನ್ನು ಜಾರಿಗೆ ತರಲು ಕ್ರಮ ಕೈಗೊಳ್ಳಬೇಕು ಎಂದರು.
ಮಾಜಿ ಸಂಸದ ಚಂದ್ರಪ್ಪ, ಶಾಸಕ ಬಸವಂತಪ್ಪ, ಆದಿ ಜಾಂಬವ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.