ಬೆಂಗಳೂರು: ರಾಜ್ಯದ 17 ರಾಜ್ಯ ಹೆದ್ದಾರಿಗಳಲ್ಲಿ (1,530 ಕಿ.ಮೀ. ಉದ್ದ) ಟೋಲ್ ಸಂಗ್ರಹಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ಪೈಕಿ ಏಳು ರಸ್ತೆಗಳಲ್ಲಿ ಈಗಾಗಲೇ ಶುಲ್ಕ ಸಂಗ್ರಹ ಆರಂಭಗೊಂಡಿದೆ.
‘2015ರಲ್ಲಿ ಟೋಲ್ ಸಂಗ್ರಹಕ್ಕೆ ನಿಯಮಾವಳಿ ರಚಿಸಲಾಗಿದೆ. 2017ರಲ್ಲಿ ಟೆಂಡರ್ ಕರೆಯಲಾಗಿತ್ತು. ಮೂರು ವರ್ಷಗಳ ಅವಧಿಗೆ ಟೆಂಡರ್ ನೀಡಲಾಗಿದೆ. ಪ್ರತಿವರ್ಷ ಶೇ 10ರಷ್ಟು ದರ ಹೆಚ್ಚಳ ಆಗಲಿದೆ. ಮೂರನೇ ವರ್ಷದ ವೇಳೆಗೆ ಶೇ 30ರಷ್ಟು ಜಾಸ್ತಿ ಆಗಲಿದೆ’ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
‘2010ರಲ್ಲಿ ಬಿಜೆಪಿ ಸರ್ಕಾರ ಇದ್ದಾಗ ರಾಜ್ಯ ಹೆದ್ದಾರಿಗಳಿಗೆ ಶುಲ್ಕ ವಿಧಿಸಲು ನಿರ್ಧರಿಸಲಾಗಿತ್ತು. 17 ರಸ್ತೆಗಳಿಗೆ ಟೆಂಡರ್ ಕರೆಯಲಾಗಿತ್ತು. ಏಳು ರಸ್ತೆಗಳಿಗೆ ಶುಲ್ಕ ವಸೂಲಿಗೆ ಅನುಮತಿ ನೀಡಲಾಗಿದೆ. ಪಡುಬಿದ್ರಿ–ಕಾರ್ಕಳ, ಹೊಸಕೋಟೆ–ಚಿಂತಾಮಣಿ, ತುಮಕೂರು–ಪಾವಗಡ, ಮದಗಲ್–ಗಂಗಾವತಿ ರಸ್ತೆಗಳಿಗೆ ತಿಂಗಳುಗಳ ಹಿಂದೆ ಟೋಲ್ ನಿಗದಿ ಮಾಡಲಾಗಿತ್ತು. ಈಗ ಮತ್ತೆ ಎರಡು ರಸ್ತೆಗಳಿಂದ ಸಂಗ್ರಹ ಮಾಡಲಾಗುತ್ತಿದೆ’ ಎಂದರು.
ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ (ಕೆ–ಶಿಪ್) ಹಾಗೂ ಕೆಆರ್‌ಡಿಸಿಎಲ್ ಸಂಸ್ಥೆಗಳು ವಿಶ್ವ ಬ್ಯಾಂಕ್ ಹಾಗೂ ಎಡಿಬಿಯಿಂದ ಸಾಲ ಪಡೆದು ನಿರ್ಮಿಸಿದ 3,800 ಕಿ.ಮೀ. ಉದ್ದದ 31 ರಸ್ತೆಗಳಿಗೆ ಶುಲ್ಕ ವಿಧಿಸಲು ಪ್ರಸ್ತಾವ ಸಲ್ಲಿಸಿದ್ದವು.
2017ರ ಮಾರ್ಚ್ 17ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ 19 ರಸ್ತೆಗಳಲ್ಲಿ ಶುಲ್ಕ ಸಂಗ್ರಹಕ್ಕೆ ಒಪ್ಪಿಗೆ ನೀಡಲಾಗಿತ್ತು. ಎರಡು ರಾಜ್ಯ ಹೆದ್ದಾರಿಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ವಿಲೀನವಾಗಿವೆ. ಹೀಗಾಗಿ, 17 ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಮಾಡಲಾಗುತ್ತದೆ.
‘ರಸ್ತೆ ಶುಲ್ಕದ ಹೊರೆ ಹೆಚ್ಚು ಎಂಬ ಕಾರಣಕ್ಕೆ ಬೆಂಗಳೂರು– ಮೈಸೂರು ರಸ್ತೆ ವಿಸ್ತರಣೆ ವೇಳೆಗೆ ಸರ್ವಿಸ್ ರಸ್ತೆಯನ್ನೂ ನಿರ್ಮಿಸಲಾಗುತ್ತಿದೆ. ಸರ್ವೀಸ್ ರಸ್ತೆಯಲ್ಲಿ ಸಂಚರಿಸುವ ಸ್ಥಳೀಯರಿಗೆ ಟೋಲ್ ವಿಧಿಸುವುದಿಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.
ರಸ್ತೆ ಶುಲ್ಕ ಎಷ್ಟು
ಕಾರು: ಪ್ರತಿ ಕಿ.ಮೀ.ಗೆ 60 ಪೈಸೆ.
ಲಘುವಾಹನ: ಪ್ರತಿ ಕಿ.ಮೀ.ಗೆ 99 ಪೈಸೆ
ಬಸ್/ವಾಣಿಜ್ಯ ವಾಹನ (ಎರಡು ಆಕ್ಸೆಲ್): ಪ್ರತಿ ಕಿ.ಮೀ.ಗೆ ₹2
ಮೂರು ಆಕ್ಸೆಲ್ ವಾಹನ: ಪ್ರತಿ ಕಿ.ಮೀ.ಗೆ ₹2.12
*ಮಲ್ಟಿ ಆಕ್ಸೆಲ್ ವಾಹನ: ಪ್ರತಿ ಕಿ.ಮೀ.ಗೆ ₹3.26
*ಏಳು ಅಥವಾ ಹೆಚ್ಚಿನ ಆಕ್ಸೆಲ್ ವಾಹನಗಳು: ಪ್ರತಿ ಕಿ.ಮೀ.ಗೆ ₹3.92
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.