ADVERTISEMENT

ಸಮೀಕ್ಷೆ ರಾಜ್ಯದ ಇನ್‌ಕ್ಯುಬೇಟರ್‌ಗಳಿಗೆ ಅಗ್ರಸ್ಥಾನ: ಅಶ್ವತ್ಥನಾರಾಯಣ

​ಪ್ರಜಾವಾಣಿ ವಾರ್ತೆ
Published 4 ಜೂನ್ 2022, 16:13 IST
Last Updated 4 ಜೂನ್ 2022, 16:13 IST
ಅಶ್ವತ್ಥನಾರಾಯಣ
ಅಶ್ವತ್ಥನಾರಾಯಣ   

ಬೆಂಗಳೂರು: ರಾಜ್ಯ ಸರ್ಕಾರದ ಬೆಂಬಲದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಯೋ ಇನ್ನೋವೇಷನ್‌ ಸೆಂಟರ್‌ (ಬಿಐಸಿ) ಮತ್ತು ಸೆಂಟರ್‌ ಫಾರ್‌ ಸೆಲ್ಯುಲರ್‌ ಅಂಡ್‌ ಮಾಲಿಕ್ಯೂಲರ್‌ ಪ್ಲಾಟ್‌ಫಾರ್ಮ್ಸ್‌ (ಸಿ– ಕ್ಯಾಂಪ್‌) ಬಯೋ ಸ್ಪೆಕ್ಟ್ರಂ ನಿಯತಕಾಲಿಕೆ ನಡೆಸಿರುವ ವಾರ್ಷಿಕ ಸಮೀಕ್ಷೆಯಲ್ಲಿ ಸಾರ್ವಜನಿಕ ವಲಯದ ‘ಇನ್‌ಕ್ಯುಬೇಟರ್‌’ಗಳ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಗಳಿಸಿವೆ ಎಂದು ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಅವರು, ‘ಬಿಐಸಿ ಮತ್ತು ಸಿ– ಕ್ಯಾಂಪ್‌ಗಳನ್ನು ರಾಜ್ಯದ ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆಯ ಸಹಯೋಗದಲ್ಲಿ ಆರಂಭಿಸಲಾಗಿದೆ. ಕರ್ನಾಟಕ ಆವಿಷ್ಕಾರ ಮತ್ತು ತಂತ್ರಜ್ಞಾನ ಸೊಸೈಟಿ (ಕಿಟ್ಸ್‌) ಮೂಲಕ ಈ ಎರಡೂ ಇನ್‌ಕ್ಯುಬೇಟರ್‌ಗಳಿಗೆ ಬೆಂಬಲ ನೀಡಲಾಗುತ್ತಿದೆ. ಸಮೀಕ್ಷೆಯಲ್ಲಿ ಈ ಎರಡೂ ಕೇಂದ್ರಗಳು ಅಗ್ರಸ್ಥಾನ ಗಳಿಸಿರುವುದು ಸಂತೋಷದ ಸಂಗತಿ’ ಎಂದಿದ್ದಾರೆ.

ಕಿಟ್ಸ್ ಬೆಂಬಲ ಹೊಂದಿರುವ ‘ಮಣಿಪಾಲ್ ಬಯೋ ಇನ್‌ಕ್ಯುಬೇಟರ್’ ಸಂಸ್ಥೆಯು ಖಾಸಗಿ ವಲಯದಡಿಯಲ್ಲಿ ಐದನೇ ಸ್ಥಾನ ಗಳಿಸಿದೆ. ಈ ವರ್ಷದ ರಾಷ್ಟ್ರೀಯ ಬಯೋ ಸ್ಪೆಕ್ಟ್ರಂ ಸಮೀಕ್ಷೆಯಲ್ಲಿ 40 ಇನ್‌ಕ್ಯುಬೇಟರ್‌ಗಳನ್ನು ಅಂತಿಮ ಸುತ್ತಿನಲ್ಲಿ ಪರಿಗಣಿಸಲಾಗಿತ್ತು. ಅವುಗಳ ಪೈಕಿ ಅಗ್ರಸ್ಥಾನ ರಾಜ್ಯದ ಇನ್‌ಕ್ಯುಬೇಟರ್‌ಗಳಿಗೆ ದೊರಕಿರುವುದು ಇಲ್ಲಿ ನವೋದ್ಯಮಗಳಿಗೆ ಪೂರಕವಾದ ವಾತಾವರಣ ಇರುವುದಕ್ಕೆ ಸಾಕ್ಷಿ ಎಂದು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.