ADVERTISEMENT

‘ನಂಜುಂಡಪ್ಪ ವರದಿ’ ಅನುಷ್ಠಾನಕ್ಕೆ ರಾಜ್ಯ ಸರ್ಕಾರದಿಂದ ಹೊಸ ಯೋಜನೆ ‘ಸಮತೋಲನ’

‘ನಂಜುಂಡಪ್ಪ ವರದಿ’ ಅನುಷ್ಠಾನಕ್ಕೆ ರಾಜ್ಯ ಸರ್ಕಾರದಿಂದ ಹೊಸ ಯೋಜನೆ

ರಾಜೇಶ್ ರೈ ಚಟ್ಲ
Published 28 ಸೆಪ್ಟೆಂಬರ್ 2021, 18:26 IST
Last Updated 28 ಸೆಪ್ಟೆಂಬರ್ 2021, 18:26 IST
ವಿಧಾನಸೌಧ
ವಿಧಾನಸೌಧ   

ಬೆಂಗಳೂರು: ರಾಜ್ಯದ ಹಿಂದುಳಿದ ತಾಲ್ಲೂಕುಗಳ ಅಭಿವೃದ್ಧಿಗಾಗಿ ಡಾ.ಡಿ.ಎಂ. ನಂಜುಂಡಪ್ಪ ಸಮಿತಿ ವರದಿಯ ಶಿಫಾರಸ್ಸಿನಂತೆ ಜಾರಿಯಲ್ಲಿರುವ ‘ವಿಶೇಷ ಅಭಿವೃದ್ಧಿ ಯೋಜನೆ’ಯನ್ನು ಬದಲಿಸಿ, ನೀತಿ ಆಯೋಗ ಸೂಚಿಸಿರುವ 49 ಸೂಚಕಗಳನ್ನು ಅಳವಡಿಸಿ ‘ಪ್ರಾದೇಶಿಕ ಸಮತೋಲನ ಯೋಜನೆ’ ಎಂಬ ಹೆಸರಿನಲ್ಲಿ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ನಂಜುಂಡಪ್ಪ ವರದಿಯಲ್ಲಿ 114 ತಾಲ್ಲೂಕುಗಳು ಹಿಂದುಳಿದ ಪಟ್ಟಿಯಲ್ಲಿದ್ದವು. ತಾಲ್ಲೂಕುಗಳ ಪುನರ್‌ರಚನೆ ವೇಳೆ ಈ ವ್ಯಾಪ್ತಿಯಲ್ಲಿ 39 ಹೊಸ ತಾಲ್ಲೂಕುಗಳು ರಚನೆಯಾದವು. ಹೀಗಾಗಿ ಒಟ್ಟು 153 ತಾಲ್ಲೂಕುಗಳಲ್ಲಿ ನೀತಿ ಆಯೋಗದ ಸೂಚಕಗಳಿಗೆ ಅನುಗುಣವಾಗಿ ಐದು ವಲಯಗಳಿಗೆ ಆದ್ಯತೆ ನೀಡಿ ₹ 3 ಸಾವಿರ ಕೋಟಿ ಅನುದಾನವನ್ನು ತಾಲ್ಲೂಕು ವಾರು 2022–23ನೇ ಸಾಲಿನಿಂದ ಹಂಚಿಕೆ ಮಾಡಲು ಸರ್ಕಾರ ಉದ್ದೇಶಿಸಿದೆ.

ಒಟ್ಟು ಅನುದಾನದಲ್ಲಿ (₹ 3 ಸಾವಿರ ಕೋಟಿ) ಬೃಹತ್‌ ನೀರಾವರಿಯೂ ಸೇರಿದಂತೆ ಮೂಲ
ಸೌಕರ್ಯ ಅಭಿ ವೃದ್ಧಿಗೆಈವರೆಗೆ ಹೆಚ್ಚು ಅನುದಾನ ಮೀಸಲಾಡಲಾಗುತ್ತಿತ್ತು. 2020–21ರಲ್ಲಿ ₹ 2,559 ಕೋಟಿಯನ್ನು ಈ ಉದ್ದೇಶಕ್ಕೆ ಮೀಸಲಿಡಲಾಗಿತ್ತು. ಆದರೆ, ಪ್ರಸ್ತಾಪಿತ ಯೋಜನೆಯಡಿ ಮೂಲಸೌಕರ್ಯ ಅಭಿವೃದ್ಧಿಗೆ ₹ 150 ಕೋಟಿ ಮಾತ್ರ ನಿಗದಿಪಡಿಸಲಾಗಿದೆ.

ADVERTISEMENT

ಹೊಸ ಯೋಜನೆಗೆ ಆರ್ಥಿಕ ಇಲಾಖೆ ಸಹಮತಿ ನೀಡಿದೆ. ಸಚಿವ ಸಂಪುಟ ಸಭೆಯ ಅನುಮೋದನೆಯ ಬಳಿಕ ಈ ಯೋಜನೆ ಜಾರಿಗೆ ಬರಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಕಲಬುರ್ಗಿಯಲ್ಲಿ ಇತ್ತೀಚೆಗೆ (ಸೆ. 17) ನಡೆದ ‘ಕಲ್ಯಾಣ ಕರ್ನಾಟಕ ಉತ್ಸವ’ದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ನೀತಿ ಆಯೋಗ, ವಿಶ್ವಸಂಸ್ಥೆಯ ವರದಿ ಮತ್ತು ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಆಧಾರ ವಾಗಿ ಇಟ್ಟುಕೊಂಡು ನಂಜುಂಡಪ್ಪ ವರದಿ ಪರಿಷ್ಕರಿಸಲಾಗುವುದು. ಮುಂದಿನ ಐದು ವರ್ಷಗಳ ಅಭಿವೃದ್ಧಿಗೆ ಹೊಸ ಮಾನದಂಡ ನಿಗದಿ ಪಡಿಸಲಾಗುವುದು’ ಎಂದು ಹೇಳಿದ್ದರು. ಹೊಸ ಯೋಜನೆಯ ಸಮಗ್ರ ಮಾಹಿತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಏನಿದು ಹೊಸ ಯೋಜನೆ: ನಂಜುಂಡಪ್ಪ ಸಮಿತಿ ವರದಿಯಂತೆ ವಿಶೇಷ ಅಭಿವೃದ್ಧಿ ಯೋಜನೆಯಡಿ 2007–08ರಿಂದ 2020–21ರವರೆಗೆ 114 ಹಿಂದುಳಿದ ತಾಲ್ಲೂಕುಗಳಿಗೆ ನೀಡಲಾದ ಒಟ್ಟು ಅನುದಾನದಲ್ಲಿ ಶೇ 60ರಷ್ಟು ಐದು ಇಲಾಖೆಗಳಿಗೆ (ಜಲಸಂಪನ್ಮೂಲ ಶೇ 19,ಗ್ರಾಮೀಣಾಭಿವೃದ್ಧಿ ಶೇ 17, ವಸತಿ ಶೇ 11, ಲೋಕೋಪಯೋಗಿ ಶೇ 7, ಇಂಧನ ಶೇ 6) ಹಂಚಿಕೆ ಆಗಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಶೇ 12.5, ಶಿಕ್ಷಣಕ್ಕೆ ಶೇ 5.8, ಆರೋಗ್ಯಕ್ಕೆ ಶೇ 5, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ಶೇ 1.6, ಕೃಷಿಗೆ ಶೇ 6.5. ಉದ್ದಿಮೆ ಮತ್ತು ವ್ಯಾಪಾರಕ್ಕೆ ಕೇವಲ ಶೇ 0.89 ಅನುದಾನ ನೀಡಲಾಗಿದೆ.

ಈಗ ಕೇಂದ್ರ ಸರ್ಕಾರದಿಂದ ನೀತಿ ಆಯೋಗವು 117 ಮಹತ್ವಾಕಾಂಕ್ಷಿ ಜಿಲ್ಲೆಗಳ ಅಭಿವೃದ್ಧಿಗಾಗಿ ರೂಪಿಸಿದ 49 ಸೂಚಕಗಳಂತೆ ಪ್ರಾದೇಶಿಕ ಸಮ ತೋಲನ ಸಾಧಿಸಲು ಪ್ರಸ್ತಾಪಿಸಲಾಗಿದೆ. ನೀತಿ ಆಯೋಗ ನಿಗದಿಪಡಿಸಿದ 49 ಸೂಚಕಗಳನ್ನು ಐದು ವಲಯಗಳಲ್ಲಿ ಅಂದರೆ, ಆರೋಗ್ಯ ಮತ್ತು ಪೌಷ್ಟಿಕತೆ (ಶೇ 30, ಶಿಕ್ಷಣ (ಶೇ 30), ಕೃಷಿ ಮತ್ತು ಜಲ ಸಂಪನ್ಮೂಲ (ಶೇ 20). ಆರ್ಥಿಕ ಸೇರ್ಪಡೆ (ಶೇ 10), ಕೌಶಲಾಭಿವೃದ್ಧಿ (ಶೇ 5), ಮೂಲಸೌಕರ್ಯಕ್ಕೆ (ಶೇ 5) ಆದ್ಯತೆ ನೀಡಿ ನಿಗದಿಪಡಿಸಲಾಗಿದೆ.

ನಂಜುಂಡಪ್ಪ ವರದಿಯಡಿ ವಿಶೇಷ ಅಭಿವೃದ್ಧಿ ಯೋಜನೆಯಲ್ಲಿ ಮೂಲಸೌಕರ್ಯ ಮತ್ತು ಬೃಹತ್‌ ನೀರಾವರಿ ವಲಯಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಆದರೆ,ಹೊಸ ಯೋಜನೆಯಲ್ಲಿ ನೀತಿ ಆಯೋಗದ ಮಾನದಂಡಗಳ ಅನುಸಾರ ಮಾನವ ಸಂಪನ್ಮೂಲಗಳ ಅಭಿವೃದ್ಧಿ , ಕೃಷಿ ಮತ್ತು ಸಣ್ಣ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ನಂಜುಂಡಪ್ಪ ವರದಿಯಲ್ಲಿ ಅಭಿವೃದ್ಧಿಯ 35 ಸೂಚಕಗಳ ಪೈಕಿ, ಕೇವಲ 19 ಸೂಚಕಗಳು ಮಾತ್ರ ನೀತಿ ಆಯೋಗದಲ್ಲಿದೆ.

ಪ್ರಶಸ್ತಿ: ಹಿಂದುಳಿದ ತಾಲ್ಲೂಕುಗಳ ₹ 3 ಸಾವಿರ ಕೋಟಿ ಅನುದಾನವನ್ನು ಹಂಚಿಕೆ ಮಾಡಿ, ಮುಂದಿನ 5 ವರ್ಷಗಳಲ್ಲಿ ಮಹತ್ವಾಕಾಂಕ್ಷಿ ತಾಲ್ಲೂಕುಗಳ ಅಭಿವೃದ್ಧಿ ಸೂಚಕಗಳನ್ನು ಸುಧಾರಿಸಿ, ರಾಜ್ಯದ ಸರಾಸರಿ ಮಟ್ಟಕ್ಕೆ ತರಲು ಉದ್ದೇಶಿಸಲಾಗಿದೆ. ಅಲ್ಲದೆ, ನೀತಿ ಆಯೋಗದ ಮಾದರಿಯಲ್ಲಿ ತಾಲ್ಲೂಕುಗಳ ಪ್ರತಿ ತ್ರೈಮಾಸಿಕ ಪ್ರಗತಿ ಪರಿಶೀಲಿಸಿ, ಸಾಧನೆಯಲ್ಲಿ ಸುಧಾರಣೆಗೊಂಡು ಪ್ರಥಮ ಶ್ರೇಣಿ ಗಳಿಸುವ ಮೂರು ತಾಲ್ಲೂಕುಗಳಿಗೆ ಪ್ರಶಸ್ತಿ ಪತ್ರ ನೀಡಿ ಉತ್ತೇಜಿಸಲು ಕೂಡಾ ಸರ್ಕಾರ ನಿರ್ಧರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.