ಬೆಂಗಳೂರು: ಸಿದ್ದರಾಮಯ್ಯ ಹಾಗೂ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್. ವಿಶ್ವನಾಥ್ ನಡುವೆ ವಾಕ್ಸಮರ ತಾರಕಕ್ಕೇರಿದೆ.
ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ಗೆಕರೆ ತಂದು ಮುಖ್ಯಮಂತ್ರಿ ಆಗುವಂತೆ ಮಾಡಿದ್ದು ನಾನು, ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿ ಎಂದು ಕೆಲವರು ಚೇಲಾಗಿರಿ ಪ್ರದರ್ಶಿಸುತ್ತಿದ್ದಾರೆ ಎಂದು ಭಾನುವಾರ ಎಚ್.ವಿಶ್ವನಾಥ್ ಹೇಳಿಕೆ ನೀಡಿದ್ದರು.
ಇದೀಗ ವಿಶ್ವನಾಥ್ ಹೇಳಿಕೆಗೆ ಟ್ವಿಟರ್‌ನಲ್ಲಿ ಸರಣಿ ಟ್ವೀಟ್‌ಗಳನ್ನು ಮಾಡುವ ಮೂಲಕ ಸಿದ್ದರಾಮಯ್ಯ ಟಾಂಗ್ ನೀಡಿದ್ದಾರೆ.
‘ಸಮ್ಮಿಶ್ರ ಸರ್ಕಾರದಲ್ಲಿ ಪಾಲಿಸಬೇಕಾದ ಮೈತ್ರಿ ಧರ್ಮ ನನ್ನ ಬಾಯಿ ಕಟ್ಟಿ ಹಾಕಿದೆ. ಇದರಿಂದಾಗಿ ಹೆಚ್.ವಿಶ್ವನಾಥ್ ಅವರ ಬೇಜವಾಬ್ದಾರಿಯುತ ಹೇಳಿಕೆಗಳಿಗೆ ವಿವರವಾಗಿ ಪ್ರತಿಕ್ರಿಯಿಸಲಾರೆ. ವಿಶ್ವನಾಥ್ ಇಂತಹ ಕಿಡಿಗೇಡಿತನದ ಹೇಳಿಕೆಗಳಿಗೆ ಕುಖ್ಯಾತರು.ಮೊದಲು ಜಿ.ಟಿ ದೇವೇಗೌಡ ಆಯ್ತು, ಈಗ ವಿಶ್ವನಾಥ್... ಮುಂದೆ ಯಾರು ನನ್ನ ವಿರುದ್ಧ ಮಾತನಾಡ್ತಾರೋ ಗೊತ್ತಿಲ್ಲ’ ಎಂದು ಹೇಳಿದ್ದಾರೆ.
‘ಜೆಡಿಎಸ್ ನಾಯಕರು ನನ್ನನ್ನ ಗುರಿಯಾಗಿಸಿಕೊಂಡು ಬೇಜವಾಬ್ದಾರಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇದರ ಬಗ್ಗೆ ಜೆಡಿಎಸ್ ವರಿಷ್ಠರು ಗಮನಹರಿಸುವುದು ಒಳಿತು' ಎಂದು ಸರಣಿ ಟ್ವೀಟ್ ಮೂಲಕ ಹೇಳಿಕೆಗಳಿಗೆ ಕಡಿವಾಣ ಹಾಕುವಂತೆ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಸಿದ್ದರಾಮಯ್ಯ ಹೇಳಿಕೆಗೆವಿಶ್ವನಾಥ್ ತಿರುಗೇಟು
‘ನನ್ನ ಹೇಳಿಕೆ ಬಹಳ ಜವಾಬ್ದಾರಿಯುತವಾಗಿದೆ. ಕಿಡಿಗೇಡಿತನ, ಕುಖ್ಯಾತಿ, ಎಲ್ಲರನ್ನೂ ಏಕವಚನದಲ್ಲೇ ಸಂಭೋದಿಸುವುದು, ಸುಳ್ಳು ಹೇಳುವುದು ನನ್ನ ರಕ್ತದಲ್ಲಿಯೇ ಬಂದಿಲ್ಲ’ ಎಂದು ಟ್ವಿಟರ್‌ನಲ್ಲಿ ತಿರುಗೇಟು ನೀಡಿದ್ದಾರೆ.
‘ಮೈತ್ರಿ ಧರ್ಮಕ್ಕೆ ಧಕ್ಕೆ ಬರುವ 'ನಾನೇ ಮುಖ್ಯಮಂತ್ರಿ' ಎನ್ನುವ ವಿಷಯ ಪ್ರಸ್ತಾವನೆ ಮೊದಲು ನಿಮ್ಮಿಂದಲೇ ಆಗಿದ್ದು. ಸಮನ್ವಯ ಸಮಿತಿಗೆ ನನ್ನನ್ನ ಆಹ್ವಾನಿಸಿ ಬಂದು ಉತ್ತರಿಸುತ್ತೇನೆ.ನಿಮಗೆ ನಮ್ಮ ಕುಲದೈವ ಬೀರೇಶ್ವರ ಒಳ್ಳೆಯ ಬುದ್ದಿ ನೀಡಲಿ’ ಎಂದುಹೇಳಿದ್ದಾರೆ.
ಮೈತ್ರಿ ಕಷ್ಟ ಆದ್ರೆ ತಮ್ಮ ದಾರಿ ನೋಡಿಕೊಳ್ಳಲಿ:ಕುಪೇಂದ್ರ ರೆಡ್ಡಿ ಹೇಳಿಕೆ
‘ಕಷ್ಟ ಆದರೆ ಅವರ ದಾರಿ ಅವರು ನೋಡಿಕೊಳ್ಳಲಿ. ನಮಗೆ ಎರಡೂ ಪಕ್ಷಗಳಿಗಿಂತ ಕಡಿಮೆ ಸೀಟು ಬಂದಿದ್ದು ನಿಜ. ಆದರೆ, ಮುಖ್ಯಮಂತ್ರಿ ಮಾಡಿ ಎಂದು ನಾವು ಯಾರ ಮನೆ ಬಾಗಿಲಿಗೂ ಹೋಗಿರಲಿಲ್ಲ. ಅವರಾಗಿಯೇ ಮುಖ್ಯಮಂತ್ರಿ ಮಾಡ್ತೀವಿ ಅಂತಾ ಬಂದಿದ್ದರು.
ಗುಲಾಂ ನಬಿ ಅಜಾದ್ ಜೊತೆ ನಡೆದ ಮಾತುಕತೆ ವೇಳೆ ನಾನೂ ಇದ್ದೆ. ಈಗ ಮುಖ್ಯಮಂತ್ರಿ ವಿರುದ್ಧ ಹಾದಿಬೀದಿಯಲ್ಲಿ ಮಾತಾಡೋದು ಸರಿಯಲ್ಲ.. ಮೈತ್ರಿ ಕಷ್ಟ ಆದ್ರೆ ತಮ್ಮ ದಾರಿ ನೋಡಿಕೊಳ್ಳಲಿ. ಅದನ್ನು ಬಿಟ್ಟು ಮುಖ್ಯಮಂತ್ರಿಗೆ ತೊಂದರೆ ಕೊಡೋದು ಬೇಡ’ ಎಂದುಜೆಡಿಎಸ್ ಮುಖಂಡ, ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಹೇಳಿದರು.
*
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.