ADVERTISEMENT

ಸರ್ಕಾರದಿಂದ ವರ್ಗಾವಣೆ ದಂಧೆ: ಬಿ.ಎಸ್. ಯಡಿಯೂರಪ್ಪ ಆರೋಪ

​ಪ್ರಜಾವಾಣಿ ವಾರ್ತೆ
Published 20 ಜುಲೈ 2019, 19:45 IST
Last Updated 20 ಜುಲೈ 2019, 19:45 IST
ಬಿ.ಎಸ್‌.ಯಡಿಯೂರಪ್ಪ
ಬಿ.ಎಸ್‌.ಯಡಿಯೂರಪ್ಪ   

ಬೆಂಗಳೂರು:‘ಕುಮಾರಸ್ವಾಮಿ ಸರ್ಕಾರ ಅಲ್ಪಮತಕ್ಕೆ ಜಾರಿದ್ದರೂ ವರ್ಗಾವಣೆ ದಂಧೆಯಲ್ಲಿ ನಿರತವಾಗಿದೆ’ ಎಂದುವಿಧಾನಸಭೆಯ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಆರೋಪಿಸಿದರು.

ನಗರದ ಹೊರವಲಯದ ರಮಡಾ ರೆಸಾರ್ಟ್‌ನಲ್ಲಿ ಸುದ್ದಿಗಾರರ ಜತೆ ಶನಿವಾರ ಮಾತನಾಡಿದ ಅವರು, ‘ವಿಶ್ವಾಸ ಮತಯಾಚನೆಯ ಚರ್ಚೆಯ ನೆಪದಲ್ಲಿ ಸರ್ಕಾರ ಕಾಲಹರಣ ಮಾಡುತ್ತಿದೆ.ಅಲ್ಪಮತ ಇದ್ದರೂ ಸಂಪುಟ ಸಭೆಯನ್ನೂ ನಡೆಸುತ್ತಿದೆ.ಸೋಮವಾರ ಎಲ್ಲದಕ್ಕೂ ತೆರೆ ಬೀಳುವ ವಿಶ್ವಾಸ ಇದೆ’ ಎಂದರು.

‘ದೋಸ್ತಿ ನಾಯಕರು ರಾಜ್ಯಪಾಲರ ಸೂಚನೆಗೆ ಬೆಲೆ ಕೊಟ್ಟಿಲ್ಲ.ಸುಪ್ರೀಂ ಕೋರ್ಟ್‌ನಿಂದಪೂರಕ ತೀರ್ಪು ಬರಬಹುದು ಎಂಬ ಭ್ರಮೆಯಲ್ಲಿದ್ದಾರೆ.ಆದರೆ ಒಂದು ಬಾರಿ ತೀರ್ಪು ನೀಡಿದ ಮೇಲೆ ಕೋರ್ಟ್ ಮತ್ತೆ ಅದೇ ವಿಷಯದಲ್ಲಿ ತೀರ್ಪು ನೀಡುವ ಸಾಧ್ಯತೆ ಇಲ್ಲ‘ ಎಂದರು.

‘ನಮ್ಮ ಶಾಸಕರೆಲ್ಲ ಒಗ್ಗಟ್ಟಿನಿಂದ ಇದ್ದೇವೆ. ಎಲ್ಲರೂ ಎರಡು ದಿನ ರೆಸಾರ್ಟ್‌ನಲ್ಲಿ ಇರಲಿದ್ದಾರೆ’ ಎಂದರು.

ರೆಸಾರ್ಟ್‌ನಲ್ಲಿರುವ ಬಿಜೆಪಿ ಶಾಸಕರು‘ಉರಿ’ ಮತ್ತು ‘ಆ್ಯಕ್ಸಿಡೆಂಟ್‌ ಪ್ರೈಮ್‌ ಮಿನಿಸ್ಟರ್‌’ ಸಿನಿಮಾ ವೀಕ್ಷಿಸಿ ಕಾಲಕಳೆದರು.

‘ಎಚ್‌ಡಿಕೆಯಿಂದ ಸಚಿವನಾಗಿಲ್ಲ’
ಬೆಂಗಳೂರು: ‘ಕುಮಾರಸ್ವಾಮಿ ಅವರಿಂದ ನಾನು ಸಚಿವನಾಗಿಲ್ಲ. ನನ್ನನ್ನು ಸಚಿವನನ್ನಾಗಿ ಮಾಡಿದ್ದು ಯಡಿಯೂರಪ್ಪ ಅವರು’ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.

‘ವಿಧಾನಸಭೆಯಲ್ಲಿ ಶುಕ್ರವಾರ ಕುಮಾರಸ್ವಾಮಿ ಅವರು ನನ್ನ ಹೆಸರು ಎತ್ತಿ ನೀಡಿದ ಹೇಳಿಕೆಯಿಂದ ಬಹಳ ಬೇಸರವಾಗಿದೆ. ಈ ವಿಷಯದಲ್ಲಿ ನಾನು ಬಹಿರಂಗ ಚರ್ಚೆಗೆ ಸಿದ್ಧ, ಯಾವುದೇ ಕ್ಷೇತ್ರದಲ್ಲಿ ಪ್ರಮಾಣಕ್ಕೂ ಸಿದ್ಧ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.