ADVERTISEMENT

ತೆಂಗಿನ ನಾರಿನಿಂದ ರಬ್ಬರ್ ಮ್ಯಾಟ್‌ ಉದ್ಯಮ: ಶ್ರೀನಿವಾಸ್‌

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2018, 14:39 IST
Last Updated 7 ಸೆಪ್ಟೆಂಬರ್ 2018, 14:39 IST
   

ಬೆಂಗಳೂರು: ರಾಜ್ಯದಲ್ಲಿ ತೆಂಗಿನ ನಾರಿನಿಂದ ರಬ್ಬರ್‌ ಮ್ಯಾಟ್‌ಗಳನ್ನು ತಯಾರಿಸುವ ಉದ್ಯಮ ಆರಂಭಿಸಲಾಗುವುದು ಎಂದು ಸಣ್ಣ ಕೈಗಾರಿಕೆಗಳ ಸಚಿವ ಎಸ್‌.ಆರ್‌. ಶ್ರೀನಿವಾಸ್‌ ತಿಳಿಸಿದರು.

ಅಲ್ಲದೆ, ತೆಂಗು ಬೆಳೆಯುವ 36 ತಾಲ್ಲೂಕುಗಳಲ್ಲಿ ಜಿಯೋ ಟೆಕ್ಸ್‌ಟೈಲ್‌ ಘಟಕಗಳನ್ನೂ ಆರಂಭಿಸುವ ಚಿಂತನೆ ಇದೆ ಎಂದು ಅವರು ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಸಹಕಾರ ಸಂಘಗಳ ನೆರವಿನಿಂದ ನಾರು ತೆಗೆಯುವ ಉದ್ಯಮಗಳಿಗೆ ಪ್ರೋತ್ಸಾಹ ನೀಡಲಾಗುತ್ತದೆ. ನಾರು ತೆಗೆಯುವ ಕಾರ್ಯಕ್ಕೆ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಉದ್ಯೋಗ ಸೃಷ್ಟಿಸಬಹುದು. ಇವೆಲ್ಲದ್ದಕ್ಕೂ ಸುಮಾರು ₹ 60 ಕೋಟಿ ನಿಗದಿ ಮಾಡಲಾಗಿದೆ ಎಂದರು.

ADVERTISEMENT

ರಾಜ್ಯದಲ್ಲಿ ಕೇರಳ ಮಾದರಿಯಲ್ಲಿ ಸಣ್ಣ ಕೈಗಾರಿಕೆಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಈ ಉದ್ದೇಶದಿಂದ ಇದೇ 16,17 ಮತ್ತು 18 ರಂದು ಕೇರಳಕ್ಕೆ ತೆರಳಿ, ಅಲ್ಲಿನ ಸಣ್ಣ ಕೈಗಾರಿಕೆಗಳ ಬಗ್ಗೆ ಅಧ್ಯಯನ ನಡೆಸಲಾಗುವುದು. ಅಧ್ಯಯನ ವರದಿಯನ್ನು ಮುಖ್ಯಮಂತ್ರಿಯವರಿಗೆ ಸಲ್ಲಿಸಲಾಗುವುದು ಎಂದು ಶ್ರೀನಿವಾಸ್‌ ತಿಳಿಸಿದರು.

ಕೇರಳ ಮಾದರಿಯಲ್ಲಿ ರಾಜ್ಯದಲ್ಲಿ ಕೈಗಾರಿಕೆಗಳನ್ನು ಆರಂಭಿಸಿದರೆ ಸುಮಾರು 45 ಲಕ್ಷ ಉದ್ಯೋಗಳನ್ನು ಸೃಷ್ಟಿಸಬಹುದು. ಗ್ರಾಮ ಮಟ್ಟದಲ್ಲಿ ತೆಂಗಿನ ನಾರಿನ ಉದ್ಯಮ ಆರಂಭಿಸುವುದಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ರಾಜ್ಯದಲ್ಲಿ ಅಧಿಕ ಪ್ರಮಾಣದಲ್ಲಿ ತೆಂಗಿನ ನಾರು ಉತ್ಪಾದನೆ ಆಗುತ್ತದೆ. ಇದನ್ನು ಸರಿಯಾಗಿ ಬಳಸಿಕೊಂಡರೆ ಹೆಚ್ಚಿನ ಆದಾಯ ಬರುತ್ತದೆ ಎಂದು ಅವರು ವಿವರಿಸಿದರು.

ಮಂಗಳೂರು, ಹಾಸನ, ಬಳ್ಳಾರಿ, ಬೆಳಗಾವಿ, ಕೊಪ್ಪಳ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸಣ್ಣ ಕೈಗಾರಿಕೆಗಳನ್ನು ಆರಂಭಿಸಲು ಪ್ರೋತ್ಸಾಹ ನೀಡಲಾಗುವುದು. ಕೈಗಾರಿಕಾ ಘಟಕಗಳ ಸ್ಥಾಪನೆಗೆ ಭೂಮಿ ಅಗತ್ಯವಿದೆ. ಇದಕ್ಕಾಗಿ ಭೂಮಿ ಗುರುತಿಸುವ ಕಾರ್ಯ ಆರಂಭಿಸಲಾಗಿದೆ ಎಂದರು.

ಕೆಲವು ಜಿಲ್ಲೆಗಳಲ್ಲಿ ಭೂಮಿಯ ಬೆಲೆ ಹೆಚ್ಚಾಗಿರುವುದರಿಂದ ಕೈಗಾರಿಕೆ ಆರಂಭಿಸಲು ಉದ್ಯಮಿಗಳು ಮುಂದಕ್ಕೆ ಬರುತ್ತಿಲ್ಲ. ಇದಕ್ಕಾಗಿ ಹೊಸ ಬೆಲೆ ನಿಗದಿ ಮಾಡುವ ಚಿಂತನೆ ಇದೆ. ಈ ಬಗ್ಗೆ ಕೈಗಾರಿಕಾ ಅಭಿವೃದ್ಧಿ ಮಂಡಳಿಯಲ್ಲಿ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಶ್ರೀನಿವಾಸ್‌ ತಿಳಿಸಿದರು.

ಕಳೆದ 25 ವರ್ಷಗಳಿಂದ ನಗರದಲ್ಲಿ ಸಣ್ಣ ಕೈಗಾರಿಕಾ ವಲಯದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಮಾಡಿಲ್ಲ. ಇದಕ್ಕೆ ಬಿಬಿಎಂಪಿಯಿಂದ ಸಹಕಾರ ಸಿಗುತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿಯವರ ಜೊತೆ ಚರ್ಚಿಸಲಾಗುವುದು. ರಸ್ತೆ, ಚರಂಡಿ ಮತ್ತು ಇತರ ಸೌಕರ್ಯಗಳನ್ನು ನೀಡಲು ಈ ವರ್ಷ ₹150 ಕೋಟಿ ಮೀಸಲಿಡಲಾಗಿದೆ ಎಂದೂ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.