ADVERTISEMENT

ಹುಬ್ಬಳ್ಳಿ– ಅಂಕೋಲಾ ರೈಲು ಯೋಜನೆ ತಿರಸ್ಕೃತ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2020, 20:02 IST
Last Updated 9 ಮಾರ್ಚ್ 2020, 20:02 IST
   

ಬೆಂಗಳೂರು: ಪಶ್ಚಿಮಘಟ್ಟದ ಸೂಕ್ಷ್ಮ ಪರಿಸರದಲ್ಲಿ ಹಾದು ಹೋಗುವ ಹುಬ್ಬಳ್ಳಿ– ಅಂಕೋಲಾ ರೈಲು ಯೋಜನೆಯ ಪ್ರಸ್ತಾಪವನ್ನು ರಾಜ್ಯ ವನ್ಯಜೀವಿ ಮಂಡಳಿ ಸೋಮವಾರ ತಿರಸ್ಕರಿಸಿದೆ.

ಈ ಯೋಜನೆಯಿಂದ ಪಶ್ಚಿಮಘಟ್ಟಕ್ಕೆ, ವನ್ಯಜೀವಿಗಳಿಗೆ ಅಪಾಯವಿದೆ. ಭಾರಿ ಸಂಖ್ಯೆಯಲ್ಲಿ ಮರಗಳ ಹನನಕ್ಕೆ ಕಾರಣವಾಗುತ್ತದೆ ಎಂದು ಮಂಡಳಿಯ ಬಹುತೇಕ ಸದಸ್ಯರು ಅಭಿಪ್ರಾಯ‍ಪಟ್ಟಿದ್ದರಿಂದ ಈ ಪ್ರಸ್ತಾವ ಕೈಬಿಡಲಾಯಿತು ಎಂದು ಸಭೆಯಲ್ಲಿದ್ದವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಯೋಜನೆ ಜಾರಿಗೆ ಜನರಿಂದ ಬೇಡಿಕೆ ಇದೆ’ ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌ ತಿಳಿಸಿದರು. ಇದಕ್ಕೆ ದನಿಗೂಡಿಸಿದ ಮೂಲಸೌಕರ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್‌ ಮೋಹನ್‌, ‘ಉಪಶಮನ ಕ್ರಮಗಳನ್ನು ಕೈಗೊಂಡು ಈ ಯೋಜನೆ ಜಾರಿಗೊಳಿಸಬಹುದು ಎಂದು ಭಾರತೀಯ ವಿಜ್ಞಾನ ಸಂಸ್ಥೆ ಶಿಫಾರಸು ಮಾಡಿದೆ’ ಎಂದರು.

ADVERTISEMENT

‘ಇದರಿಂದ ವನ್ಯಜೀವಿಗಳು ಅಪಾಯಕ್ಕೆ ಸಿಲುಕಲಿವೆ. ಪರ್ಯಾಯ ಮಾರ್ಗಗಳಿರುವುದರಿಂದ ಈ ಯೋಜನೆ ಬೇಡ ಎಂದು ಸದಸ್ಯರಾದ ಸೌಮ್ಯಾ ರೆಡ್ಡಿ, ಸಂಜಯ್‌ ಗುಬ್ಬಿ ಮಲ್ಲೇಶಪ್ಪ, ಅರಣ್ಯ ಸಚಿವ ಆನಂದ್‌ ಸಿಂಗ್‌ ವಿವರಿಸಿದರು. ಬಳಿಕ ಪ್ರಸ್ತಾಪ ಕೈಬಿಡಲು ಮುಖ್ಯಮಂತ್ರಿ ಒಪ್ಪಿದರು.

ಮೊದಲ ಕಡಲ ವನ್ಯಜೀವಿಧಾಮ
ಕಾರವಾರದ ಮುಗುಳಿಯಿಂದ ಅಪ್ಸರಕೊಂಡ ನಡುವಿನ ತೀರವನ್ನು ಕಡಲ ವನ್ಯಜೀವಿಧಾಮ (ಮೆರೈನ್‌ ಪ್ರೊಟೆಕ್ಟೆಡ್‌ ಏರಿಯಾ) ಎಂದು ಘೋಷಿಸಲು ರಾಜ್ಯ ವನ್ಯಜೀವಿ ಮಂಡಳಿ ನಿರ್ಧರಿಸಿದೆ.

ರಾಜ್ಯದ ಚೊಚ್ಚಲ ಕಡಲ ವನ್ಯಜೀವಿಧಾಮವಿದು. ಇದರಿಂದ ಮೀನುಗಾರಿಕೆಗೆ ಯಾವುದೇ ಧಕ್ಕೆ ಇಲ್ಲ. ಈ ಪ್ರದೇಶದಲ್ಲಿರುವ ಹಂದಿ ಮೀನು (ಸ್ಪಿನ್ನರ್ ಡಾಲ್ಫಿನ್‌), ಬಾಟಲ್ ನೋಸ್ಡ್‌ ಡಾಲ್ಫಿನ್, ತಿಮಿಂಗಿಲ (ಬ್ರೈಡ್ಸ್‌ ವೇಲ್), ಹುಲಿಮೀನು (ಶಾರ್ಕ್), ಕಡಲಾಮೆ (ಆಲಿವ್‌ ಟರ್ಟಲ್‌) ಸೇರಿದಂತೆ 34 ಬಗೆಯ ಕಡಲಜೀವಿಗಳ ಸಂರಕ್ಷಣೆಗೆಮೀನುಗಾರರ ನೆರವು ಪಡೆದೇ ಕ್ರಮಕೈಗೊಳ್ಳಲಾಗುತ್ತದೆ.

*
ಉದ್ದೇಶಿತ ಹುಬ್ಬಳ್ಳಿ– ಅಂಕೋಲಾ ರೈಲು ಮಾರ್ಗದಿಂದ ಪಶ್ಚಿಮಘಟ್ಟದ ಸೂಕ್ಷ್ಮ ಪರಿಸರಕ್ಕೆ ಸರಿಪಡಿಸಲಾಗದ ಹಾನಿ ಉಂಟಾಗುತ್ತದೆ. ಹಾಗಾಗಿ ನಾನೂ ಸೇರಿದಂತೆ ಮಂಡಳಿಯ ಬಹುತೇಕ ಸದಸ್ಯರು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದೇವೆ.
-ಸೌಮ್ಯಾ ರೆಡ್ಡಿ, ಮಂಡಳಿ ಸದಸ್ಯೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.