ADVERTISEMENT

ಪಠ್ಯ ಪುಸ್ತಕ ವಿತರಿಸದೇ ಗೊಂದಲ: ಅಶೋಕ ಟೀಕೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2024, 15:49 IST
Last Updated 13 ಜೂನ್ 2024, 15:49 IST
ಆರ್. ಅಶೋಕ 
ಆರ್. ಅಶೋಕ    

ಬೆಂಗಳೂರು: ಶಿಕ್ಷಣ ಇಲಾಖೆ ಪಠ್ಯಪುಸ್ತಕಗಳನ್ನು ಸರಿಯಾದ ಸಮಯಕ್ಕೆ ವಿತರಿಸದೇ ಪೋಷಕರು ಮತ್ತು ವಿದ್ಯಾರ್ಥಿಗಳನ್ನು ಗೊಂದಲದಲ್ಲಿಟ್ಟಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್‌.ಅಶೋಕ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆಗಳಿಗೆ ಮಕ್ಕಳು ಬರುವುದೇ ಕಡಿಮೆ ಆಗಿರುವಾಗ ಪಠ್ಯಪುಸ್ತಕ ಕೊರತೆ ಉಂಟಾಗಿದೆ ಎಂದರು.

ಸರ್ಕಾರಿ ಖಜಾನೆ ಖಾಲಿ ಆಗಿದ್ದು, ಕಸಕ್ಕೂ ತೆರಿಗೆ ಹಾಕಲು ಮುಂದಾಗಿದ್ದಾರೆ. ಕರ್ನಾಟಕ ಮಾಡೆಲ್‌ ಏನೆಂದು ತಿಳಿಯಲು ಆರ್ಥಿಕ ಇಲಾಖೆಯ ಒಂದು ವರ್ಷದ ಪ್ರಗತಿ ಕಾರ್ಡ್‌ ಬಿಡುಗಡೆಗೊಳಿಸಲಿ ಎಂದು ಅವರು ಆಗ್ರಹಿಸಿದರು.

ADVERTISEMENT

ತಮ್ಮ ಕ್ಷೇತ್ರದ ಹಲವು ರೈತರಿಗೆ ಬರಪರಿಹಾರ ನೀಡಿಲ್ಲವೆಂದು ನವಲಗುಂದ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎನ್‌.ಎಚ್‌.ಕೋನರಡ್ಡಿ ಅವರೇ ಹೇಳಿದ್ದಾರೆ. ವಿರೋಧಪಕ್ಷಗಳು ಸರ್ಕಾರದ ವಿರುದ್ಧ ಟೀಕೆ ಮಾಡಿದರೆ ಅಜ್ಞಾನ ಪ್ರದರ್ಶನ ಎಂದು ಮುಖ್ಯಮಂತ್ರಿ ಹೇಳುತ್ತಾರೆ. ಈ ಸರ್ಕಾರದ ಬಂಡವಾಳವನ್ನು ಕಾಂಗ್ರೆಸ್ ಶಾಸಕರೇ ಬಯಲು ಮಾಡುತ್ತಿದ್ದಾರೆ ಎಂದರು.

ಕೇಂದ್ರ ಸರ್ಕಾರ ₹3,454 ಕೋಟಿ ಬರಪರಿಹಾರವನ್ನು ನೀಡಿದೆ. ಅದನ್ನು ವಿತರಣೆ ಮಾಡಿ ಎಂದರೂ ಮುಖ್ಯಮಂತ್ರಿ ಕೈಯಲ್ಲಿ ಆಗುತ್ತಿಲ್ಲ. ಬರ ಪರಿಹಾರ ರೈತರ ಕೈಸೇರುವಂತೆ ನೋಡಿಕೊಳ್ಳಲು ಆಗದಿದ್ದರೆ  ರಾಜೀನಾಮೆ ಕೊಡಲಿ. ರೈತರ ಬದುಕಿನ ಜೊತೆ ಚಲ್ಲಾಟ ಆಡುವುದು ಬೇಡ ಎಂದು ಅಶೋಕ ಆಗ್ರಹಿಸಿದರು.

‘ವಿರೋಧಪಕ್ಷದ ನಾಯಕನಿಗೆ ನಿಯಮಗಳ ಪ್ರಕಾರ ಸರ್ಕಾರಿ ನಿವಾಸ ನೀಡಬೇಕು. ಸರ್ಕಾರ ತಡ ಮಾಡುತ್ತಿದೆ. ನಾನು ಡಿ.ಕೆ.ಶಿವಕುಮಾರ್ ಅವರ ಮನೆ ಕೇಳುತ್ತಿಲ್ಲ. ಸರ್ಕಾರ ನಿಯಮಗಳ ಪ್ರಕಾರವೇ ಆದ್ಯತೆ ಮೇರೆಗೆ ನೀಡಬೇಕು. ನಮ್ಮ ಸರ್ಕಾರ ಇದ್ದಾಗ ವಿರೋಧಪಕ್ಷಗಳ ಜತೆ ಮಾದರಿ ಎನಿಸುವಂತೆ ನಡೆದುಕೊಂಡಿದ್ದೆವು. ಅದೇ ರೀತಿ ಸಿದ್ದರಾಮಯ್ಯ ಸರ್ಕಾರವೂ ನಡೆದುಕೊಳ್ಳಬೇಕು. ಈ ಬಗ್ಗೆ ಮೂರು ಪತ್ರ ಬರೆದರೂ ಪ್ರತಿಕ್ರಿಯೆ ಬಂದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.