ಬೆಂಗಳೂರು: ‘ನ್ಯಾಯಾಲಯಗಳು ಕೂಡಾ ಕೇಂದ್ರ ಸರ್ಕಾರದ ಮಾತುಗಳನ್ನು ಕೇಳುವ ಸ್ಥಿತಿ ತಲುಪಿವೆ ಎಂದು ಸಾರ್ವಜನಿಕ ಸಭೆಯಲ್ಲಿ ಆರೋಪ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲು ಅನುಮತಿ ನೀಡಬೇಕು’ ಎಂದು ಕೋರಿ ವಕೀಲ ವಸಂತ ಕುಮಾರ್ ಅಡ್ವೊಕೇಟ್ ಜನರಲ್ ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತಾದ ಮನವಿಯನ್ನು ಅವರ ಪರ ವಕೀಲೆ ಎಸ್.ಎಂ.ಅನಿತಾ ಪಾಟೀಲ್ ಶುಕ್ರವಾರ ಅಡ್ವೊಕೇಟ್ ಜನರಲ್ ಅವರಿಗೆ ಸಲ್ಲಿಸಿದ್ದಾರೆ. ‘ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆಯಲ್ಲಿ ಇದೇ 13ರಂದು ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಯತೀಂದ್ರ ಸಿದ್ದರಾಮಯ್ಯ, ‘ಕೇಂದ್ರ ಸರ್ಕಾರವು ತನಿಖಾ ಜಾರಿ ನಿರ್ದೇಶನಾಲಯ (ಇ.ಡಿ), ಸಿಬಿಐ, ಆದಾಯ ತೆರಿಗೆಯಂತಹ (ಐ.ಟಿ) ತನಿಖಾ ಸಂಸ್ಥೆಗಳನ್ನು ತನ್ನ ಕೈಗೊಂಬೆಯನ್ನಾಗಿ ಮಾಡಿಕೊಂಡಿದೆ. ಕೋರ್ಟ್‌ಗಳು ಕೂಡಾ ಕೇಂದ್ರ ಸರ್ಕಾರದ ಮಾತನ್ನು ಕೇಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪ ಮಾಡಿದ್ದಾರೆ. ಈ ಹೇಳಿಕೆ ನ್ಯಾಯಾಂಗದ ಸ್ವತಂತ್ರತೆಯನ್ನು ಪ್ರಶ್ನಿಸುವಂತಿದೆ. ಆದ್ದರಿಂದ, ಯತೀಂದ್ರ ಅವರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಲು ಅನುಮತಿ ನೀಡಬೇಕು’ ಎಂದು ಮನವಿಯಲ್ಲಿ ವಿವರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.