ಮೈಸೂರು: ‘ಇಲ್ಲಿನ ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರಿಡುವಂತೆ ಕೆಲವರು ಅಭಿಪ್ರಾಯ ಹೇಳಿದ್ದಾರೆ. ಟಿಪ್ಪು ಸುಲ್ತಾನ್ ನಮ್ಮವರಲ್ಲವೇ, ಅವರೇನು ಬೇರೆ ದೇಶದವರಾ?’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಕೇಳಿದರು.
ಇಲ್ಲಿ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ‘ಹೆಸರಿಡುವುದು, ಬಿಡುವುದು ಬೇರೆ ವಿಚಾರ. ಆದರೆ, ಅವರನ್ನು ದೇಶ ದ್ರೋಹಿಯಂತೆ ಬಿಂಬಿಸುವುದು ಸರಿಯಲ್ಲ’ ಎಂದರು.
‘ಭೂ ಸುಧಾರಣೆ ಕಾಯ್ದೆ ತಂದವರು, ದೇವದಾಸಿ ಪದ್ಧತಿ ನಿರ್ಮೂಲನೆ ಮಾಡಿದ್ದು ಟಿಪ್ಪು ಅಲ್ಲವೇ? ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡಲು ನಮ್ಮ ತಕಾರರಿಲ್ಲ. ಟಿಪ್ಪು ಹೆಸರಿಡುವಂತೆ ಕೆಲವರು ಹೇಳಿದ್ದಾರೆ. ಅಭಿಪ್ರಾಯ ಹೇಳುವುದು ತಪ್ಪೇ, ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲವೇ?’ ಎಂದು ಕೇಳಿದರು.
‘ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನವಾಗಿದೆ. ಅದನ್ನು ತಿರಸ್ಕರಿಸಲು ಸಾಧ್ಯವೇ’ ಎಂದು ಪ್ರಶ್ನಿಸಿದರು.
‘ಲೋಕಸಭೆಯಲ್ಲಿ ನಡೆದಿರುವುದು ಗಂಭೀರವಾದ ರಾಷ್ಟ್ರೀಯ ಭದ್ರತಾ ವಿಚಾರ. ಆರೋಪಿಗಳಿಗೆ ಬೇರೆಯವರು ಪಾಸ್ ಕೊಡಿಸಿದ್ದರೆ ಮೈಸೂರಿನ ಗತಿ ಏನಾಗುತ್ತಿತ್ತು, ಬೇರೆ ಧರ್ಮದವರು ನೀಡಿದ್ದರೆ ಗತಿ ಏನಾಗುತ್ತಿತ್ತು?’ ಎಂದು ಅಚ್ಚರಿಯಿಂದ ಕೇಳಿದರು.
‘ಬಿಜೆಪಿ ಸಂಸದ ಪ್ರತಾಪ ಸಿಂಹ ಪಾಸ್ ಕೊಡಿಸಿದ್ದರೆಂಬ ಕಾರಣಕ್ಕೆ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.
‘ಗಡಿಪಾರಾದವರು, ಕೊಲೆ ಆರೋಪಿಗಳು ನಮ್ಮ ಜೊತೆಯೇ ಫೋಟೊ ತೆಗೆಸಿಕೊಂಡಿರುತ್ತಾರೆ. ಅದನ್ನು ನಾವು ಗಮನಿಸಲು ಆಗುತ್ತದೆಯೇ?. ಪಾಸ್ ವಿಚಾರವೂ ಅದೇ ರೀತಿಯದ್ದಷ್ಟೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.