ADVERTISEMENT

ಯೇಸು ಪ್ರತಿಮೆ ಕಾಮಗಾರಿಗೆ ಅಲ್ಪವಿರಾಮ

ವಿವಾದ ತಣ್ಣಗಾಗುವವರೆಗೆ ಕಾಯಲು ನಿರ್ಧಾರ: ಎಂದಿನಂತೆ ದೇಣಿಗೆ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 15 ಜನವರಿ 2020, 19:24 IST
Last Updated 15 ಜನವರಿ 2020, 19:24 IST

ರಾಮನಗರ: ಸದ್ಯದ ವಿವಾದಗಳು ತಣ್ಣಗಾಗುವವರೆಗೂ ಯೇಸು ಪ್ರತಿಮೆ ನಿರ್ಮಾಣ ಕಾರ್ಯವನ್ನು ಮುಂದೂಡಲು ಹಾರೋಬೆಲೆ ಕಪಾಲ ಬೆಟ್ಟ ಅಭಿವೃದ್ಧಿ ಟ್ರಸ್ಟ್‌ ನಿರ್ಧರಿಸಿದೆ. ಆದರೆ ದೇಣಿಗೆ ಸಂಗ್ರಹ ಕಾರ್ಯ ಎಂದಿನಂತೆ ನಡೆಯಲಿದೆ.

ಕಳೆದ ಡಿಸೆಂಬರ್‌ 25ರಂದು ಶಾಸಕ ಡಿ.ಕೆ. ಶಿವಕುಮಾರ್ ಯೇಸು ಪ್ರತಿಮೆ ನಿರ್ಮಾಣ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದರು. ಮರುದಿನವೇ ಹಿಂದೂ ಪರ ಸಂಘಟನೆಗಳಿಂದ ಆಕ್ಷೇಪ ವ್ಯಕ್ತವಾಗಿದ್ದು, ಕಾಮಗಾರಿ ಸ್ಥಗಿತಗೊಂಡಿತ್ತು. ಸದ್ಯ ಸ್ಥಳದಲ್ಲಿ ಸಿ.ಸಿ.ಟಿ.ವಿ
ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಉಭಯ ಧರ್ಮೀಯರ ಭೇಟಿಯಿಂದ ಇದೊಂದು ಪ್ರವಾಸಿ ತಾಣವಾಗಿ ಮಾರ್ಪಾಡಾಗುತ್ತಿದೆ.

ಪ್ರತಿಮೆ ನಿರ್ಮಾಣಕ್ಕಾಗಿ ಟ್ರಸ್ಟ್‌ ನಾಲ್ಕು ವರ್ಷದಿಂದ ದೇಣಿಗೆ ಸಂಗ್ರಹ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ‘ಈಚಿನ ವಿವಾದಗಳಿಂದ ದೇಣಿಗೆ ಸಂಗ್ರಹ ಹೆಚ್ಚು ಇಲ್ಲವೇ ಕಡಿಮೆಯೂ ಆಗಿಲ್ಲ. ವಿವಾದಗಳಿಂದಾಗಿ ನಾವು ಯೋಜನೆಯಿಂದ ವಿಮುಖವಾಗಿಯೂ ಇಲ್ಲ. ಈಗಲೂ ಜನರಲ್ಲಿಗೆ ತೆರಳಿ ದೇಣಿಗೆ ಕೇಳುತ್ತಲೇ ಇದ್ದೇವೆ’ ಎನ್ನುತ್ತಾರೆ ಹಾರೋಬೆಲೆ ಗ್ರಾಮದ ಕ್ರೈಸ್ತ ಮುಖಂಡ ಚಿನ್ನುರಾಜ್‌.

ADVERTISEMENT

‘ಹಾರೋಬೆಲೆಯಲ್ಲಿ 650 ಕುಟುಂಬಗಳು ಇವೆ. ಇವರಲ್ಲಿ ಶೇ 50ರಷ್ಟು ಮಂದಿ ಭೂರಹಿತ ಕಾರ್ಮಿಕರಿದ್ದಾರೆ. ಎಲ್ಲರೂ ಕೈಲಾದಷ್ಟು ದೇಣಿಗೆ ನೀಡುತ್ತಿದ್ದಾರೆ. ಮೂರು ವರ್ಷಗಳಲ್ಲಿ ಸಂಗ್ರಹವಾದ ದೇಣಿಗೆಯ ಆಡಿಟ್‌ ಮಾಡಿಸಿದ್ದೇವೆ. ಹಣ ಕೊಡಲು ಆಗದವರು ಉಚಿತವಾಗಿ ಕೂಲಿಗೆ ಬರುವ ಭರವಸೆ ನೀಡಿದ್ದಾರೆ. ಕೆಲವರು ಈಗಾಗಲೇ ಕಲ್ಲು ತಂದು ಕೊಟ್ಟಿದ್ದಾರೆ’ ಎಂದು ಅವರು ಹೇಳುತ್ತಾರೆ.

ಹಿಂದೂಗಳಿಂದಲೂ ದೇಣಿಗೆ: ‘ಪಕ್ಕದ ಊರುಗಳ ದೇವಸ್ಥಾನಗಳು ನಿರ್ಮಾಣವಾದಾಗ ಇಲ್ಲಿನವರೂ ಕೈಲಾದಷ್ಟು ಕಾಣಿಕೆ ನೀಡಿದ್ದೇವೆ. ಪ್ರತಿಮೆ ನಿರ್ಮಾಣಕ್ಕೆ ಅಕ್ಕಪಕ್ಕದ ಊರುಗಳ ಹಿಂದೂಗಳಲ್ಲೂ ದೇಣಿಗೆ ಕೋರುತ್ತೇವೆ. ಈಗಾಗಲೇ ಹಲವು ಮಂದಿ ವಿವಿಧ ರೂಪದಲ್ಲಿ ನೆರವನ್ನೂ ನೀಡಿದ್ದಾರೆ’ ಎನ್ನುತ್ತಾರೆ ಚಿನ್ನುರಾಜ್‌.

ಕಪಾಲವೋ, ಮುನೇಶ್ವರನೋ: ಯೇಸು ಪ್ರತಿಮೆ ನಿರ್ಮಾಣ ಆಗುತ್ತಿರುವ ಬೆಟ್ಟದ ಅಸಲಿ ಹೆಸರಿನ ಬಗ್ಗೆ ಚರ್ಚೆ ನಡೆದೇ ಇದೆ. ಆದರೆ ಸರ್ಕಾರಿ ದಾಖಲೆಗಳಲ್ಲಿ ಮಾತ್ರ ಈ ಬೆಟ್ಟಕ್ಕೆ ಹೆಸರಿಲ್ಲ. ಗೋಮಾಳ ಎಂದೇ ದಾಖಲಾಗಿದೆ. ನಲ್ಲಹಳ್ಳಿ ಸರ್ವೇ ವ್ಯಾಪ್ತಿಯ 265 ಎಕರೆ ಗೋಮಾಳದಲ್ಲೇ ಟ್ರಸ್ಟ್‌ಗೆ ನೀಡಿರುವ ಜಾಗವೂ ಸೇರಿಕೊಂಡಿದೆ.

‘ಯೇಸುವನ್ನು ಶಿಲುಬೆಗೆ ಏರಿಸಿದ ಅತಿ ಎತ್ತರದ ಪ್ರದೇಶವನ್ನು ಕಾಲವಾರಿ ಬೆಟ್ಟ ಎಂದು ಕರೆಯುತ್ತೇವೆ. ಇದನ್ನೇ ಕನ್ನಡದಲ್ಲಿ ಕಪಾಲ ಬೆಟ್ಟ ಎಂದು ಕರೆಯುತ್ತಿದ್ದೇವೆ’ ಎನ್ನುತ್ತಾರೆ ಹಾರೋಬೆಲೆಯ ಕ್ರೈಸ್ತರು.

‘ಹಿಂದೆ ಇದೇ ಬೆಟ್ಟದಲ್ಲಿ ಮುನೇಶ್ವರನ ಕಲ್ಲುಗಳಿಗೆ ಪೂಜೆ ಸಲ್ಲಿಸುತ್ತಿದ್ದೆವು. ಇಂದು ಅದೇ ಜಾಗದಲ್ಲಿ ಯೇಸು ಪ್ರತಿಮೆ ಕಲ್ಲುಗಳನ್ನು ಜೋಡಿಸುತ್ತಿದ್ದು, ಬೆಟ್ಟದ ಹೆಸರು ಬದಲಾಗಿದೆ’ ಎನ್ನುತ್ತಾರೆ ಹಿರಿಯರಾದ ಚಿಕ್ಕಮರೀಗೌಡ.

‘ಕನಕಪುರ ಸುತ್ತಮುತ್ತಲಿನ ಪ್ರದೇಶಗಳು ಜಡೆಮುನೇಶ್ವರನ ಕ್ಷೇತ್ರ. ಇಲ್ಲಿನ ಸಾಕಷ್ಟು ಹಳ್ಳಿಗಳು, ಗುಡ್ಡಗಳ ಸುತ್ತಮುತ್ತ ಮುನೇಶ್ವರನ ಆರಾಧನೆ ಸಾಮಾನ್ಯ. ಹೀಗಾಗಿ ಈ ಬೆಟ್ಟಗಳನ್ನು ಈ ದೇವರ ಹೆಸರಿನಲ್ಲೇ ಗುರುತಿಸುತ್ತಾ ಬರಲಾಗಿದೆ’ ಎನ್ನುತ್ತಾರೆ ರಾಮನಗರದ ಹಿರಿಯ ಸಂಶೋಧಕ ಎಂ.ಜಿ. ನಾಗರಾಜು.

ತಮ್ಮ ಪಾತ್ರ ತಳ್ಳಿ ಹಾಕಿದ ಡಿಕೆಶಿ

ದಾವಣಗೆರೆ: ‘ನಮ್ಮ ತಾಲ್ಲೂಕಿನಲ್ಲಿ ಯಾರೋ ಏನೋ ಮಾಡ್ತಾ ಇದ್ದಾರೆ. ನಾನು ಕ್ಷೇತ್ರದ ಶಾಸಕನಾಗಿ ನನ್ನ ಕೆಲಸ ಮಾಡುತ್ತಿದ್ದೇನೆ ಅಷ್ಟೇ’ ಎಂದು ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಪರೋಕ್ಷವಾಗಿ ಯೇಸು ಪ್ರತಿಮೆ ನಿರ್ಮಾಣದಲ್ಲಿನ ತಮ್ಮ ಪಾತ್ರ ಇದೆ ಎನ್ನುವುದನ್ನು ಬುಧವಾರ ತಳ್ಳಿಹಾಕಿದರು.

ಬಿಜೆಪಿಯವರು ಒಂದು ಕಡೆ ಚರ್ಚ್‌ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮತ್ತೊಂದು ಕಡೆ ಯಡಿಯೂರಪ್ಪ ಚರ್ಚ್‌ಗೆ ಭೇಟಿ ನೀಡುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ, ‘ಅವರವರ ನೀತಿ, ಧರ್ಮ, ಪಕ್ಷ ಹಾಗೂ ಅವರ ವೋಟಿನ ವಿಚಾರ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ, ನಾವು ಯಾಕೆ ತಲೆ ಕೆಡೆಸಿಕೊಳ್ಳಬೇಕು. ನಮಗೆ ಎಲ್ಲಾ ಜನರೂ ಬೇಕು. ನಾನು ಯಾವತ್ತೂ ವೋಟ್ ಬ್ಯಾಂಕ್ ರಾಜಕಾರಣ ಮಾಡುವುದಿಲ್ಲ’ ಎಂದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ವಿಚಾರಕ್ಕೆ ಸಂಬಂಧಪಟ್ಟಂತೆ, ‘ನಾನು ಯಾವುದೇ ಸ್ಥಾನದ ಅಕಾಂಕ್ಷಿ ಅಲ್ಲ. ನನ್ನ ಹೆಸರು ಎಲ್ಲೂ ಪ್ರಸ್ತಾಪವಾಗಿಲ್ಲ’ ಎಂದು ಹೇಳಿದರು. ‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.