ADVERTISEMENT

ಮತ್ತೆ ಗರಿಗೆದರಿದ ಉಕ್ಕಿನ ಸೇತುವೆ ವಿವಾದ; ಜನರಿಂದ ಜನಪ್ರತಿನಿಧಿಗಳ ತರಾಟೆ

ಹೋರಾಟಕ್ಕೆ ಸಿದ್ಧವಾಗುತ್ತಿವೆ ಸ್ವಯಂ ಸೇವಾ ಸಂಘಟನೆಗಳು

​ಪ್ರಜಾವಾಣಿ ವಾರ್ತೆ
Published 2 ಜನವರಿ 2019, 4:03 IST
Last Updated 2 ಜನವರಿ 2019, 4:03 IST
.
.   

ಬೆಂಗಳೂರು: ಉಕ್ಕಿನ ಮೇಲ್ಸೇತುವೆ ನಿರ್ಮಾಣದ ಮಾತು ಜನಪ್ರತಿನಿಧಿಗಳಿಂದ ಈಗ ಮತ್ತೆ ಕೇಳಿಬರುತ್ತಿದೆ. ಹಾಗಾಗಿ ಆ ಸೇತುವೆ ನಿರ್ಮಾಣದ ವಿರುದ್ಧದ ಧ್ವನಿಗಳು ಮತ್ತೆ ಮೊಳಗುತ್ತಿವೆ.

‘ನಗರದ ಸಂಚಾರ ವ್ಯವಸ್ಥೆಯನ್ನು ಸುಧಾರಿಸುವ ಸರಿಯಾದ ದೂರದೃಷ್ಟಿ ಜನನಾಯಕರಿಗೆ ಇಲ್ಲ. ಆ ಯೋಜನೆಯ ವಿರುದ್ಧ ನಾವು ರಸ್ತೆ ಮೇಲೆ ಮಾತ್ರವಲ್ಲ, ಕಾನೂನಿನ ಅಂಗಳದಲ್ಲಿಯೂ ಹೋರಾಟ ಮಾಡಿದ್ದೇವೆ. ನಮಗೆ ನೆನಪಿನ ಶಕ್ತಿ ಕಡಿಮೆ ಇದೆ ಎಂದು ಜನಪ್ರತಿನಿಧಿಗಳು ಭಾವಿಸಿದಂತಿದೆ. ಅವರು ನಮ್ಮ ಮುಂದಿನ ಪೀಳಿಗೆಯ ಭವಿಷ್ಯದೊಂದಿಗೆ ಆಟವಾಡುತ್ತಿದ್ದಾರೆ’ ಎಂದರು ಸಿಟಿಜನ್ಸ್‌ ಫಾರ್‌ ಬೆಂಗಳೂರು (ಸಿಎಫ್‌ಬಿ) ಸಮೂಹದ ಸಹ ಸ್ಥಾಪಕ ಶ್ರೀನಿವಾಸ್ ಅಲವಿಲ್ಲಿ.

‘ಉಪನಗರ ರೈಲು ಸೇವೆ ಕಲ್ಪಿಸಿ, ಬಿಎಂಟಿಸಿ ಬಸ್‌ಗಳ ಸಂಖ್ಯೆ ಹೆಚ್ಚಿಸಿ, ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸಿ ಎಂದು ನಾವು ಒತ್ತಾಯಿಸುತ್ತಲೇ ಬಂದಿದ್ದೇವೆ. ಇವುಗಳತ್ತ ಸರ್ಕಾರ ಗಮನ ಹರಿಸುತ್ತಿಲ್ಲ’ ಎಂದು ಅವರು ಹರಿಹಾಯ್ದರು.

ADVERTISEMENT

‘ಉಪಮುಖ್ಯಮಂತ್ರಿಯ ಹೇಳಿಕೆ ಹಳೆಯ ಬಾಟಲಿಯಲ್ಲಿ ಹೊಸ ಮದ್ಯವನ್ನು ನೀಡಿದಂತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು ಸಿಎಫ್‌ಬಿಯ ಸಹ ಸ್ಥಾಪಕಿ ತಾರಾ ಕೃಷ್ಣಸ್ವಾಮಿ. ‘ಈ ಸೇತುವೆಯಿಂದ ಆ ಭಾಗದ ಹೊರವಲಯಕ್ಕೆ ಸಂಚರಿಸುವ ಶೇ 0.72ರಷ್ಟು ವಾಹನ ಸವಾರರಿಗೆ ಮಾತ್ರ ಅನುಕೂಲ ಆಗಲಿದೆ. ಬಹುತೇಕರಿಗೆ ಅನನುಕೂಲವನ್ನೇ ಉಂಟು ಮಾಡುವ ಈ ಯೋಜನೆ ಕುರಿತು ಸರ್ಕಾರ ಮುಂದಿನ ಹೆಜ್ಜೆ ಇಡುವ ಮುನ್ನ ಸಾರ್ವಜನಿಕರ ಅಭಿಮತವನ್ನು ಪಡೆಯಲೇಬೇಕು’ ಎಂದು ಅವರು ಒತ್ತಾಯಿಸಿದರು.

‘ಸಿಗ್ನಲ್‌ ಮುಕ್ತ ಸಂಚಾರ ವ್ಯವಸ್ಥೆಯಲ್ಲಿ ಓಡಾಡುವ ಜಿ.ಪರಮೇಶ್ವರ ಅವರಿಗೆ ವಾಹನ ಸವಾರರ ಸಮಸ್ಯೆ ಹೇಗೆ ತಿಳಿಯುತ್ತದೆ? ಅವರು ಮೊದಲು ಸಿಗ್ನಲ್‌ ಮುಕ್ತ ಸಂಚಾರ ಸೌಲಭ್ಯವನ್ನು ಬಿಟ್ಟು ನಗರ ಸಂಚಾರ ಮಾಡಲಿ’ ಎಂದು ಅವರು ಆಗ್ರಹಿಸಿದರು.

ಈ ಯೋಜನೆ ರಾಜಕೀಯ ದಾಳವಾಗಿ ಬಳಕೆಯಾಗುತ್ತಿದೆ ಎಂಬ ಮಾತು ಸಹ ಸಾರ್ವಜನಿಕರಿಂದ ಕೇಳಿಬರುತ್ತಿದೆ.

‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಯೋಜನೆಯನ್ನು ಕೈಬಿಡಲಾಗಿತ್ತು. ಈಗ, ಪರಮೇಶ್ವರ ಅವರು ಮೇಲ್ಸೇತುವೆ ಪರವಾಗಿ ಮಾತನಾಡುತ್ತಿದ್ದಾರೆ. ಈ ಇಬ್ಬರು ನಾಯಕರು ಒಂದೇ ದೋಣಿಯಲ್ಲಿ ಹೋಗುತ್ತಿಲ್ಲ ಎಂಬ ಗುಮಾನಿ ಜನರಿಗೆ ಬರುತ್ತಿದೆ’ ಎಂದು ಶ್ರೀನಿವಾಸ್ ವಿಶ್ಲೇಷಿಸಿದರು.

‘ಜನರ ವಿರೋಧವಿದೆ ಎಂದರೆ ಯೋಜನೆಯನ್ನು ಅನುಷ್ಠಾನ ಮಾಡಬಾರದು. ಇದೊಂದು ಹಣ ಮಾಡುವ ಯೋಜನೆ’ ಎಂದು ಈ ಹಿಂದೆ ಎಚ್‌.ಡಿ.ಕುಮಾರಸ್ವಾಮಿ ಸಹ ಹೇಳಿಕೆ ನೀಡಿದ್ದರು. ಈಗ ಜೆಡಿಎಸ್‌ನ ವಕ್ತಾರರು ಮೌನ ವಹಿಸಿರುವುದಕ್ಕೆ ಜನರಿಂದ ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

‘ಯೋಜನಾ ವಿರೋಧಿ ಪ್ರತಿಭಟನೆ ವೇಳೆ ರಸ್ತೆಗೆ ಬಂದಿದ್ದ ಜೆಡಿಎಸ್‌ನ ರಾಷ್ಟ್ರೀಯ ವಕ್ತಾರರು ಈಗ ಕಾಣೆಯಾಗಿದ್ದಾರೆ’ ಎಂದು ಸಾಮಾಜಿಕ ಕಾರ್ಯಕರ್ತೆ ಪ್ರಿಯಾ ಚೆಟ್ಟಿ ರಾಜಗೋಪಾಲ್ ವ್ಯಂಗ್ಯವಾಡಿದರು.

ಈ ಬೃಹತ್‌ ಯೋಜನೆಯ ಕುರಿತು ಸಾಮಾಜಿಕ ಮಾಧ್ಯಮದಲ್ಲೂ ಚರ್ಚೆ ಶುರುವಾಗಿದೆ. ‘ಚಾಲುಕ್ಯ ವೃತ್ತದಿಂದ ಎಸ್ಟೀಮ್‌ ಮಾಲ್‌ ವರೆಗೆ ಮೇಲ್ಸೇತುವೆ ಕಟ್ಟುವುದರಿಂದ ಹೆಬ್ಬಾಳ ಮೇಲ್ಸೇತುವೆ ಮೇಲಿನ ಸಂಚಾರ ದಟ್ಟಣೆ ಕಂಡಿತ ಕಡಿಮೆ ಆಗಲಿದೆ’ ಎನ್ನುವುದು ಯಲಹಂಕದ ಸುರೇಶ್‌ ಕಾಮತ್‌ ಅಭಿಪ್ರಾಯ.

‘ಮೇಲ್ಸೇತುವೆಯಿಂದ ಹಸಿರು ಪರಿಸರ ನಾಶವಾಗುವುದಾದರೆ, ಅನುಷ್ಠಾನಗೊಳಿಸಬಾರದು’ ಎನ್ನುವುದು ಜೀವನ್‌ ಬಿಮಾ ನಗರದ ಸ್ವಾತಿ ಪ್ರಕಾಶ್ ಅನಿಸಿಕೆ.

ಈ ಕುರಿತು ಪ್ರತಿಕ್ರಿಯಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಕೇಶ್‌ ಸಿಂಗ್‌ ನಿರಾಕರಿಸಿದರು. ‘ಯೋಜನೆಯ ಕುರಿತು ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಆಂತರಿಕ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಒಂದೆರಡು ದಿನಗಳಲ್ಲಿ ಪ್ರತಿಕ್ರಿಯೆ ನೀಡುತ್ತೇವೆ’ ಎಂದು ಅವರು ತಿಳಿಸಿದರು. ಯೋಜನೆ ಕುರಿತು ಪ್ರತಿಕ್ರಿಯೆ ಪಡೆಯಲು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್ ಸಂಪರ್ಕಕ್ಕೆ ಸಿಗಲಿಲ್ಲ.

ಹೈಕೋರ್ಟ್‌ನಲ್ಲೂ ಹೆಜ್ಜೆ ಹಿಂದಿಟ್ಟಿದ್ದ ಹಿಂದಿನ ಸರ್ಕಾರ

ಮೇಲ್ಸೇತುವೆ ನಿರ್ಮಾಣ ಯೋಜನೆ ಜಾರಿಯನ್ನು ಪ್ರಶ್ನಿಸಿ ಸ್ವಯಂ ಸೇವಾ ಸಂಸ್ಥೆಗಳು ಚೆನ್ನೈನ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಹಾಗೂ ಹೈಕೋರ್ಟ್‌ ಮೊರೆ ಹೋಗಿದ್ದವು.

ಎನ್‌ಜಿಟಿ ಮತ್ತು ಹೈಕೋರ್ಟ್‌ ಈ ಯೋಜನೆ ಜಾರಿಗೆ ಮಧ್ಯಂತರ ತಡೆ ನೀಡಿದ್ದವು. ಅಂತಿಮವಾಗಿ ರಾಜ್ಯ ಸರ್ಕಾರ ಟೆಂಡರ್‌ ವಾಪಸು ಪಡೆದಿರುವುದಾಗಿ ಹೈಕೋರ್ಟ್‌ಗೆ ತಿಳಿಸಿತ್ತು. ಇದರಿಂದಾಗಿ ಈ ಕುರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ಇತ್ಯರ್ಥಗೊಂಡಿತ್ತು.

‘ಪರಿಸರ ಇಲಾಖೆಯ ಅನುಮತಿ ಪಡೆದುಕೊಳ್ಳದೇ ಸರ್ಕಾರ ಈ ಕಾಮಗಾರಿಗೆ ಮುಂದಾಗಿದೆ. ಈ ಉಕ್ಕಿನ ಸೇತುವೆಯಿಂದ ವಾಯುಮಾಲಿನ್ಯ ಹಾಗೂ ಶಬ್ದ ಮಾಲಿನ್ಯ ಉಂಟಾಗಲಿದೆ. ಆದ್ದರಿಂದ ಯೋಜನೆಯಿಂದ ಹಿಂದೆ ಸರಿಯುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಆಗ ಅರ್ಜಿದಾರರು ಕೋರಿದ್ದರು.

ಜನರನ್ನು ಹಗುರವಾಗಿ ಪರಿಗಣಿಸಬೇಡಿ’

‘ಮೇಲ್ಸೇತುವೆ ಯೋಜನೆಯನ್ನು ಮರು ಪರಿಶೀಲಿಸುವುದಾಗಿ ಪರಮೇಶ್ವರ ಅವರು ಹೇಳಿರುವುದು ನಗರದ ಪ್ರಮುಖ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನವಲ್ಲದೆ ಬೇರೇನೂ ಅಲ್ಲ’ ಎಂದು ನಮ್ಮ ಬೆಂಗಳೂರು ಪ್ರತಿಷ್ಠಾನದ ನಿರ್ದೇಶಕ ಎನ್‌. ಆರ್‌. ಸುರೇಶ್‌ ಹೇಳಿದ್ದಾರೆ.

‘ಈ ಯೋಜನೆಯನ್ನು ಕೈಬಿಡುವಂತೆ ಈ ಹಿಂದಿನ ಸರ್ಕಾರಕ್ಕೆ ಜನತೆ ಸಾಕಷ್ಟು ಒತ್ತಡ ಹೇರಿದ್ದರು. ಅ. 2016ರಲ್ಲಿ ಉದ್ದೇಶಿತ ಯೋಜನೆಯ ಪ್ರದೇಶದಲ್ಲಿ 8 ಸಾವಿರಕ್ಕೂ ಅಧಿಕ ಜನರು ಸೇರಿ ಪ್ರತಿಭಟನೆ ಮಾಡಿದ್ದರು’ ಎಂದು ನೆನಪಿಸಿದ್ದಾರೆ.

‘ಮೆಟ್ರೊ, ಉಪನಗರ ರೈಲು ಅನುಷ್ಠಾನಕ್ಕೆ ಬಂದಲ್ಲಿ ವಿಮಾನ ನಿಲ್ದಾಣ ಸಂಪರ್ಕ ಸುಲಭವಾಗಲಿದೆ. ಇಂತಹ ಪರ್ಯಾಯ ಮಾರ್ಗಗಳತ್ತ ಯೋಚಿಸಬೇಕು. ಸರ್ಕಾರ ಈ ವಿಷಯದಲ್ಲಿ ಜನರನ್ನು ಹಗುರವಾಗಿ ತೆಗೆದುಕೊಳ್ಳುವಂತಿಲ್ಲ’ ಎಂದು ಅವರು ಹೇಳಿದ್ದಾರೆ.

ನೀವೂ ಬರೆಯಿರಿ

ಜನರಿಗೆ ಬೇಡವಾಗಿದ್ದ ಬಹುಕೋಟಿ ವೆಚ್ಚದ ಉಕ್ಕಿನ ಸೇತುವೆಯನ್ನು ನಿರ್ಮಿಸಲು ರಾಜ್ಯ ಸರ್ಕಾರ ಮತ್ತೆ ಹಟ ಹಿಡಿದು ಹೊರಟಿದೆ. ಈ ಸೇತುವೆಯಿಂದ ನೂರಾರು ಮರಗಳು ಅಸ್ತಿತ್ವ ಕಳೆದುಕೊಳ್ಳಲಿವೆ. ಬಾಲಬ್ರೂಯಿ, ಕಾರ್ಲ್‌ಟನ್‌ ಹೌಸ್‌, ಬೆಂಗಳೂರು ಗಾಲ್ಫ್‌ ಕ್ಲಬ್‌, ನೆಹರೂ ತಾರಾಲಯದಂತಹ ಮಹತ್ವದ ಕಟ್ಟಡಗಳು ಜಾಗ ಕಳೆದುಕೊಳ್ಳಲಿವೆ. ಈ ಯೋಜನೆ ನಗರಕ್ಕೆ ಬೇಕೇ? ಓದುಗರು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಬಹುದು (ನಿಮ್ಮ ವಿಳಾಸ ಹಾಗೂ ಭಾವಚಿತ್ರ ಜತೆಗಿರಲಿ).

ವಾಟ್ಸ್‌ ಆ್ಯಪ್‌ ಸಂಖ್ಯೆ: 95133 22930

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.