ಬೆಳಗಾವಿ: ನಗರದ ಹೊರವಲಯದಲ್ಲಿ ತೆರಳುತ್ತಿದ್ದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯ ಮೆರವಣಿಗೆ ಮೇಲೆ, ಕಿಡಿಗೇಡಿಗಳು ಭಾನುವಾರ ಕಲ್ಲು ತೂರಾಟ ನಡೆಸಿದ್ದಾರೆ.
ಇದರಿಂದಾಗಿ ಆಜಾದ್ ನಗರ, ಮಹಾಂತೇಶ ನಗರ, ಕಣಬರಗಿ ರಸ್ತೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಾರು ಸೇರಿದಂತೆ ಹಲವು ವಾಹನಗಳು ಜಖಂಗೊಂಡಿದ್ದು, ದಾರಿಹೋಕರೊಬ್ಬರಿಗೆ ಗಾಯವಾಗಿದೆ.
‘ಕಣಬರಗಿಯಲ್ಲಿ ಪ್ರತಿಷ್ಠಾಪಿಸಲೆಂದು, ಸ್ಥಳೀಯರು ಅಶ್ವಾರೂಢ ಶಿವಾಜಿ ಪ್ರತಿಮೆಯನ್ನು ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗುತ್ತಿದ್ದರು. ಕೋಟೆ ಕೆರೆ ಬಳಿ ಬಂದಾಗ ಕೆಲವರು ಮೆರವಣಿಗೆ ಮೇಲೆ ಕಲ್ಲು ತೂರಿದ್ದಾರೆ. ಕನಕದಾಸ ವೃತ್ತ ದಾಟಿದ ನಂತರ, ಮೆರವಣಿಗೆಯಲ್ಲಿದ್ದ ಕೆಲವರು ಅಂಗಡಿಗಳು ಹಾಗೂ ಆಜಾದ್‌ನಗರದ ಮನೆಗಳತ್ತ ಕಲ್ಲು ತೂರಿದ್ದಾರೆ. ಇದರಿಂದಾಗಿ ಬಿಗುವಿನ ಪರಿಸ್ಥಿತಿ ಉಂಟಾಗಿತ್ತು. ಅಲ್ಲಿನ ಅಂಗಡಿಗಳನ್ನು ಪೊಲೀಸರು ಮುಚ್ಚಿಸಿದರು’ ಎಂದು ಸ್ಥಳೀಯರು ಮಾಹಿತಿ ನೀಡಿದರು.
ಉಜ್ವಲ್‌ನಗರದ ನಿವಾಸಿ ಶಕೀಲ್‌ಅಹಮದ್ ಹಿರೇಕುಂಬಿ (32) ಎನ್ನುವವರನ್ನು ಕೆಲವು ಕಿಡಿಗೇಡಿಗಳು ಥಳಿಸಿದ್ದು, ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ತಿಳಿದು ಬಂದಿದೆ.
‘ಡಾಲ್ಬಿ ಬಳಸಲು ಅವಕಾಶ ನೀಡದಿರುವುದಕ್ಕೆ ಅವರವರೇ ಬಡಿದಾಡಿಕೊಂಡಿದ್ದಾರೆ. ಯಾರಿಗೂ ಗಾಯವಾಗಿಲ್ಲ’ ಎಂದು ಮಾಳಮಾರುತಿ ಠಾಣೆ ಇನ್‌ಸ್ಪೆಕ್ಟರ್ ಬಿ.ಆರ್. ಗಡ್ಡೇಕರ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.