ADVERTISEMENT

ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಡೆಯಬೇಕು: ಸಚಿವ ಡಾ.ಎಚ್‌.ಸಿ. ಮಹದೇವಪ್ಪ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2024, 14:13 IST
Last Updated 24 ನವೆಂಬರ್ 2024, 14:13 IST
ಡಾ.ಎಚ್.ಸಿ.ಮಹದೇವಪ್ಪ
ಡಾ.ಎಚ್.ಸಿ.ಮಹದೇವಪ್ಪ   

ಬೆಂಗಳೂರು: ‘ಅಂಬೇಡ್ಕರ್ ಅವರು ನೀಡಿರುವ ಸಂವಿಧಾನವು ಸಮಾನತೆಯ ಸಂಜೀವಿನಿ. ಸಂವಿಧಾನದ ಕುರಿತಂತೆ ಅಸಹನೆ ತೋರುವುದನ್ನು ಬಿಟ್ಟು ಅದರ ಆಶಯಗಳಿಗೆ ಅನುಗುಣವಾಗಿ ನಡೆಯಬೇಕು’ ಎಂದು ಪೇಜಾವರ ಶ್ರೀಗಳಿಗೆ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಮನವಿ ಮಾಡಿದ್ದಾರೆ.

ವಿಶ್ವ ಹಿಂದೂ ಪರಿಷತ್‌ ಕರ್ನಾಟಕ ಘಟಕ ಭಾನುವಾರ ಆಯೋಜಿಸಿದ್ದ ಸಂತ ಸಮಾವೇಶದಲ್ಲಿ ಮಾತನಾಡಿದ್ದ ಪೇಜಾವರ ಶ್ರೀ, ‘ನಮ್ಮನ್ನು ಗೌರವಿಸುವ ಸಂವಿಧಾನ ಬರಲಿ. 75 ವರ್ಷಗಳಾದರೂ ಕೂಡಾ ನಾವು ಸ್ವಾತಂತ್ರ್ಯ ಹೊಂದಿದ್ದೇವೆಯೇ?’ ಎಂದು ಅನುಮಾನ ವ್ಯಕ್ತಪಡಿಸಿ, ಸನಾತನ ಮಂಡಳಿ ರಚಿಸುವಂತೆ ಕರೆ ನೀಡಿದ್ದರು. ಈ‌ ಹೇಳಿಕೆಗೆ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿದ ಸಚಿವರು, ‘ಸನಾತನ ಧರ್ಮ ಎಷ್ಟರ ಮಟ್ಟಿಗೆ ಪರಿಶಿಷ್ಟರ ಬದುಕನ್ನು ಹೀಯಾಳಿಸಿ ಅವಮಾನಿಸಿದೆ ಎನ್ನುವುದಕ್ಕೆ ಪರಿಶಿಷ್ಟರ ಅನುಭವಕ್ಕಿಂತ ದೊಡ್ಡ ಉದಾಹರಣೆ ಇನ್ನೊಂದಿಲ್ಲ’ ಎಂದಿದ್ದಾರೆ.

‘ಜಾತಿ ಮತ್ತು ಧರ್ಮದ ಶ್ರೇಷ್ಠತೆಯ ಕಾರಣಕ್ಕೆ ಅಸಮಾನತೆ, ಅವಮಾನ ಮತ್ತು ದೌರ್ಜನ್ಯದ ಕೂಪವಾಗಿದ್ದ ಸನಾತನ ಧರ್ಮದ ಕೆಟ್ಟ ನಡವಳಿಕೆಗಳನ್ನು ದೂರ ಮಾಡಿ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವವನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಅಂಬೇಡ್ಕರ್ ಅವರು ಸಂವಿಧಾನ ನೀಡಿದ್ದಾರೆ. ನೀವು ಹೇಳುವ ಧರ್ಮ ಮತ್ತಿತರ ಆಚರಣೆಗಳು ಸಂವಿಧಾನದ ಪರಿಮಿತಿಯಲ್ಲೇ ಇದೆ. ಯಾರೂ ಕೂಡಾ ಸಂವಿಧಾನಕ್ಕೆ ಹೊರತಾಗಿ ಇಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದಿದ್ದಾರೆ.

ADVERTISEMENT

‘ಧರ್ಮಕ್ಕೂ ರಾಜಕೀಯಕ್ಕೂ ಸಂಬಂಧ ಬೆರೆಸಿ ಧರ್ಮವನ್ನು ರಾಜಕೀಯ ಪಕ್ಷಗಳಿಗೆ ಸೀಮಿತಗೊಳಿಸುವ ಕೆಲಸ ಮಾಡುವ ಬದಲು, ವಿಶ್ವಗುರು ಬಸವಣ್ಣ, ವಿಶ್ವ ಚೇತನ ಸ್ವಾಮಿ ವಿವೇಕಾನಂದರು ಧರ್ಮದ ಬಗ್ಗೆ ಆಡಿರುವ ಮಾತುಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಅದನ್ನು ಸಮಾಜಕ್ಕೆ ತಿಳಿಸುವುದು ನಿಜವಾದ ಧರ್ಮ ಸೇವೆ’ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.