ADVERTISEMENT

ಮೊಸಳೆ ಕಣ್ಣೀರು ಬಿಡಿ: ಸಚಿವೆ ನಿರ್ಮಲಾಗೆ ಸಿಎಂ ಸಲಹೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2024, 16:09 IST
Last Updated 31 ಜುಲೈ 2024, 16:09 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಪರಿಶಿಷ್ಟರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಬದಲು ಕರ್ನಾಟಕದ ಮಾದರಿಯಲ್ಲಿ ರಾಷ್ಟ್ರಮಟ್ಟದಲ್ಲೂ ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆ ಜಾರಿಗೆ ಕ್ರಮ ಕೈಗೊಳ್ಳಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.

ADVERTISEMENT

ಸಚಿವೆ ನಿರ್ಮಲಾ ಅವರು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ‘ರಾಷ್ಟ್ರಮಟ್ಟದಲ್ಲಿ ಯೋಜನೆ ರೂಪಿಸದೇ ದಲಿತರ ಅಭಿವೃದ್ಧಿಗೆ ನ್ಯಾಯಬದ್ಧವಾಗಿ ಸಲ್ಲಬೇಕಾಗಿರುವ ಬಜೆಟ್ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿ ಅನ್ಯಾಯ ಮಾಡುತ್ತಿರುವ ಕೇಂದ್ರ ಸರ್ಕಾರ ನಮ್ಮ ರಾಜ್ಯ ಸರ್ಕಾರವನ್ನು ಪ್ರಶ್ನಿಸುವ ಯಾವ ನೈತಿಕ ಅಧಿಕಾರ ಇಟ್ಟುಕೊಂಡಿದೆ’ ಎಂದು ಪ್ರಶ್ನಿಸಿದರು.

‘ಈ ಬಾರಿಯ ಕೇಂದ್ರ ಬಜೆಟ್ ಗಮನಿಸಿದರೆ ಯಾರಿಗೆ ಹಲ್ವಾ ಹಂಚಿದ್ದಾರೆ ಎನ್ನುವುದು ಸ್ಪಷ್ಟವಾಗಿ ಕಾಣುತ್ತದೆ. ಇದನ್ನೇ ಲೋಕಸಭೆ ವಿರೋಧ ಪಕ್ಷದ ನಾಯಕರಾದ ರಾಹುಲ್‌ ಗಾಂಧಿ ಹೇಳಿದ್ದಾರೆ. ಶೇ 75ರಷ್ಟು ಜನರನ್ನು ಉಪವಾಸ ಬೀಳಿಸಿ, ಶೇ 25 ಮಂದಿಗೆ ಹಲ್ವಾ ತಿನ್ನಿಸಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ದಲಿತ ವಿರೋಧಿ ನೀತಿ ಬಯಲಾಗುವ ಭಯದಿಂದಲೇ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ಜಾತಿ ಗಣತಿ ವಿರೋಧಿಸುತ್ತಿವೆ’ ಎಂದು ಟೀಕಿಸಿದ್ದಾರೆ.

‘ಪ್ರಸಕ್ತ ಸಾಲಿನ ರಾಜ್ಯ ಸರ್ಕಾರದ ಬಜೆಟ್‌ ಮೊತ್ತ ₹3,71,383 ಕೋಟಿಯಾಗಿದ್ದು, ಅದರಲ್ಲಿ ₹39,121 ಕೋಟಿಯನ್ನು ಎಸ್‌ಸಿಎಸ್‌ಪಿ, ಟಿಎಸ್‌ಪಿ ಯೋಜನೆಗೆ ಮೀಸಲಿಟ್ಟಿದ್ದೇವೆ. ಕೇಂದ್ರ ಸರ್ಕಾರದ ಬಜೆಟ್ ₹48.21 ಲಕ್ಷ ಕೋಟಿಯಲ್ಲಿ ಪರಿಶಿಷ್ಟ ಜಾತಿ ಮತ್ತು  ಪಂಗಡದ ಅಭಿವೃದ್ಧಿಗಾಗಿ ನೀಡಿರುವ ಅನುದಾನ ₹2,90,401 ಕೋಟಿ ಮಾತ್ರ ಎಂದು ಮಾಹಿತಿ ನೀಡಿದ್ದಾರೆ.

ಕರ್ನಾಟಕದಲ್ಲಿ ಕಾಯ್ದೆಯನ್ನು ಜಾರಿಗೆ ತರಲು ದೊಡ್ಡಮಟ್ಟದ ಜನಾಂದೋಲನ ನಡೆದಿರಲಿಲ್ಲ. ರಾಜ್ಯದ ಕಾಂಗ್ರೆಸ್ ಪಕ್ಷ, ದಲಿತ ಸಮುದಾಯದ ಮೇಲಿನ ಪ್ರಾಮಾಣಿಕ ಕಾಳಜಿಯ ಕಾರಣಕ್ಕಾಗಿ ಸ್ವಯಂ ಇಚ್ಛೆಯಿಂದ 2013ರ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿತ್ತು. ಅಧಿಕಾರಕ್ಕೆ ಬಂದ ನಂತರ 2014-15ರಲ್ಲಿ ಕಾಯ್ದೆಯನ್ನು ಅನುಷ್ಠಾನಕ್ಕೆ ತಂದಿತ್ತು. ಕೇಂದ್ರ ಸರ್ಕಾರ ಇಂದಿಗೂ ಇಂತಹ ಪ್ರಯತ್ನ ನಡೆಸಿಲ್ಲ ಎಂದು ನೆನಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.