ಬೆಂಗಳೂರು: ‘ರಾಜ್ಯ ರಸ್ತೆ ಸಾರಿಗೆ ನಿಗಮವನ್ನು ಖಾಸಗೀಕರಣ ಮಾಡುವ ಉದ್ದೇಶವೇನಾದರೂ ರಾಜ್ಯ ಸರ್ಕಾರಕ್ಕಿದೆಯೇ? ಇದ್ದರೆ ಆ ಆಲೋಚನೆ ಕೈಬಿಡಿ’ ಎಂದು ಮಾಜಿ ಸಾರಿಗೆ ಸಚಿವರೂ ಆಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮತ್ತು ಕಾಂಗ್ರೆಸ್ ಮುಖಂಡ ಎಚ್.ಎಂ. ರೇವಣ್ಣ ಸಲಹೆ ನೀಡಿದರು.
ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾರಿಗೆ ಇಲಾಖೆಯ ನೌಕರರ ಬೇಡಿಕೆಗಳ ಪೈಕಿ ಯಾವುದು ಆಗುತ್ತದೆ, ಯಾವುದು ಆಗಲ್ಲವೆಂದು ಮೊದಲೇ ಸ್ಪಷ್ಟವಾಗಿ ಹೇಳಬೇಕಿತ್ತು. ನೋಡೋಣ, ಮಾಡೋಣ ಎಂದು ಹೇಳಿದ್ದರಿಂದ ಇಂದು ಹೀಗಾಗಿದೆ’ ಎಂದರು.
‘ಎಲ್ಲ ಬೇಡಿಕೆಗಳನ್ನು ಈಡೇರಿಸಲು ಆಗುವುದಿಲ್ಲ ನಿಜ. ಆದರೆ, ಸರ್ಕಾರ ಪ್ರತಿಷ್ಠೆ ಬಿಟ್ಟು ಮುಷ್ಕರನಿರತರ ಜೊತೆ ಮಾತುಕತೆ ನಡೆಸಲಿ. ಕೆಎಸ್‌ಆರ್‌ಟಿಸಿಯನ್ನು ಮುಳುಗುತ್ತಿರುವ ಹಡಗು ಎಂದು ಸಚಿವರು ಹೇಳಿರುವುದು ಸರಿಯಲ್ಲ’ ಎಂದು ರಾಮಲಿಂಗಾರೆಡ್ಡಿ ಹೇಳಿದರು.
‘ನಾನು ಮತ್ತು ರೇವಣ್ಣ ಇಬ್ಬರೂ ಸಾರಿಗೆ ಸಚಿವರಾಗಿದ್ದೆವು. ನಾನು ಸಾರಿಗೆ ಸಚಿವನಾಗಿದ್ದಾಗ ವೇತನ ಬಡ್ತಿ ವಿಚಾರವಾಗಿ ಪ್ರತಿಭಟನೆ ನಡೆದಿತ್ತು.ಶೇ 15ರಷ್ಟು ಏರಿಕೆ ಕೇಳಿದಾಗ, ಶೇ 8ರಷ್ಟು ಕೊಡುವುದಾಗಿ ಹೇಳಿದೆವು. ಮಾತುಕತೆ ನಡೆಸಿ ಶೇ 12.5 ಮಾಡಿದ್ದೆವು’ ಎಂದರು.
‘ಖಾಸಗಿವರು ಲಾಭ ಇದ್ದರೆ ಮಾತ್ರ ಬಸ್ ಓಡಿಸುತ್ತಾರೆ. ಆದರೆ, ಸಾರಿಗೆ ಇಲಾಖೆ ಹಾಗಲ್ಲ. ಇಲ್ಲಿ ಶೇ 40ರಷ್ಟು ಬಸ್‌ಗಳಿಂದ ನಷ್ಟ ಆಗುತ್ತದೆ. ಆದರೂ ಜನರ ಅನುಕೂಲಕ್ಕಾಗಿ ನಡೆಸಬೇಕಾಗುತ್ತದೆ. ಸಾರಿಗೆ ಇಲಾಖೆಯಲ್ಲಿ ಶೇ 80ರಷ್ಟು ನೋ ಲಾಸ್ ಅಥವಾ ನೋ ಪ್ರಾಫಿಟ್’ ಎಂದರು.
ರೇವಣ್ಣ ಮಾತನಾಡಿ, ‘ಕಳೆದ ಬಾರಿ ಸಾರಿಗೆ ನೌಕರರು ಮುಷ್ಕರ ನಡೆಸಿದಾಗಲೇ ಸಮಸ್ಯೆ ಬಗೆಹರಿಸಬಹು
ದಿತ್ತು. ಆದರೆ, ಹಟಮಾರಿ ಮುಖ್ಯಮಂತ್ರಿ ಹಾಗೂ ಅನನುಭವಿ ಸಚಿವರಿಂದ ಇಂಥ ಸ್ಥಿತಿ ನಿರ್ಮಾಣ ಆಗಿದೆ.ಕೆಎಸ್‌ಆರ್‌ಟಿಸಿ ಇರಬಾರದು ಎನ್ನುವುದು ಬಿಜೆಪಿಯವರ ಒಳಚಿಂತನೆ’ ಎಂದರು.
‘ಈಶ್ವರಪ್ಪನವರ ಇಲಾಖೆಯ ಹಣ ಹಂಚುವ ಮುಖ್ಯಮಂತ್ರಿಗೆ, ಸಾರಿಗೆ ನೌಕರರ ಸಮಸ್ಯೆ ಬಗೆಹರಿಸಲು ಆಗುದಿಲ್ಲವೇ’ ಎಂದು ಪ್ರಶ್ನಿಸಿದ ರೇವಣ್ಣ, ‘ಸಾರಿಗೆ ಸಚಿವರಿಗೆ ಇಲಾಖೆ ನಡೆಸುವ ಸಾಮರ್ಥ್ಯ ಇಲ್ಲ. ಹಿಂದೆ ಸಾರಿಗೆಸಚಿವರಾಗಿದ್ದವರನ್ನು ಕರೆದು ಮಾತನಾಡಲಿ. ಸರ್ವಪಕ್ಷ ಸಭೆ ಕರೆಯಲಿ’ ಎಂದರು.
45 ಸಿಬ್ಬಂದಿ ವಜಾ, 173 ಮಂದಿ ವರ್ಗ
ಕಲಬುರ್ಗಿ: ‘ಈವರೆಗೆ ಕರ್ತವ್ಯಕ್ಕೆ ಹಾಜರಾಗದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ 45 ಸಿಬ್ಬಂದಿ ವಜಾಗೊಳಿಸಲಾಗಿದೆ. 173 ಮಂದಿಯನ್ನು ವಿವಿಧೆಡೆ ವರ್ಗ ಮಾಡಲಾಗಿದೆ’ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಕೂರ್ಮಾರಾವ್ ತಿಳಿಸಿದ್ದಾರೆ.
ಶನಿವಾರದಿಂದಲೇ ಕರ್ತವ್ಯಕ್ಕೆ ಹಾಜರಾದ 7,335 ಸಿಬ್ಬಂದಿಗೆ ಸೋಮವಾರ ಮಾರ್ಚ್ ತಿಂಗಳ ವೇತನ ನೀಡಲಾಗಿದ್ದು, ಒಟ್ಟು₹ 15 ಕೋಟಿ ಪಾವತಿಸಲಾಗಿದೆ. ಸೋಮವಾರ ಒಟ್ಟು 506 ಬಸ್‌ಗಳನ್ನು ಓಡಿಸಲಾಗಿದೆ. ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಕ್ಕೆ ಕಲಬುರ್ಗಿಯಲ್ಲಿ ಇಬ್ಬರು ಹಾಗೂ ಕೊಪ್ಪಳದಲ್ಲಿ ಇಬ್ಬರು ಸಿಬ್ಬಂದಿ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.