ADVERTISEMENT

ಮಂಡ್ಯ: ಅರ್ಜಿ ಸ್ವೀಕಾರ ಸ್ಥಗಿತ; ಪರಿಹಾರಕ್ಕಾಗಿ ತಪ್ಪದ ಪರದಾಟ

ಬಡ್ಸ್‌ ಕಾಯ್ದೆಯಡಿ ರಚನೆಯಾಗದ ಸಕ್ಷಮ ಪ್ರಾಧಿಕಾರ– ಅರ್ಜಿ ಸ್ವೀಕಾರ ಸ್ಥಗಿತ; ಕಂಗೆಟ್ಟ ಸಂತ್ರಸ್ತೆಯರು

ಸಿದ್ದು ಆರ್.ಜಿ.ಹಳ್ಳಿ
Published 30 ಆಗಸ್ಟ್ 2024, 22:30 IST
Last Updated 30 ಆಗಸ್ಟ್ 2024, 22:30 IST
<div class="paragraphs"><p>ಮಂಡ್ಯ ಜಿಲ್ಲಾಡಳಿತ ವತಿಯಿಂದ ತೆರೆದಿದ್ದ ‘ದೂರು ಸ್ವೀಕಾರ ಕೇಂದ್ರ’ಕ್ಕೆ ಈಚೆಗೆ ಅರ್ಜಿ ಸಲ್ಲಿಸಲು ಬಂದಿದ್ದ ಸಂತ್ರಸ್ತರು<br>&nbsp;</p></div>

ಮಂಡ್ಯ ಜಿಲ್ಲಾಡಳಿತ ವತಿಯಿಂದ ತೆರೆದಿದ್ದ ‘ದೂರು ಸ್ವೀಕಾರ ಕೇಂದ್ರ’ಕ್ಕೆ ಈಚೆಗೆ ಅರ್ಜಿ ಸಲ್ಲಿಸಲು ಬಂದಿದ್ದ ಸಂತ್ರಸ್ತರು
 

   

ಪ್ರಜಾವಾಣಿ ಚಿತ್ರ: ಧನುಷ್‌ ಡಿ.ವಿ.

ಮಂಡ್ಯ: ರಾಜ್ಯದ ಪ್ರತಿಷ್ಠಿತ ಖಾಸಗಿ ಹಣಕಾಸು ಸಂಸ್ಥೆಗಳು ಮತ್ತು ಕಂಪನಿಗಳಿಗೆ ಸಾವಿರಾರು ರೂಪಾಯಿ ಹಣ ಹೂಡಿಕೆ ಮಾಡಿ, ವಂಚನೆಗೊಳಗಾದವರಿಂದ ದೂರು ಅರ್ಜಿ ಸ್ವೀಕರಿಸುವುದನ್ನು ಜಿಲ್ಲಾಧಿಕಾರಿ ಕಚೇರಿಗಳಲ್ಲಿ ಸ್ಥಗಿತಗೊಳಿಸಿದ್ದು, ಇದರಿಂದ ಸಂತ್ರಸ್ತೆಯರು ಕಂಗೆಟ್ಟಿದ್ದಾರೆ.  

ADVERTISEMENT

ಐದಾರು ತಿಂಗಳಿಂದ ರಾಜ್ಯದ ವಿವಿಧ ಜಿಲ್ಲಾಧಿಕಾರಿ ಕಚೇರಿಗಳಲ್ಲಿ ತೆರೆದಿದ್ದ ‘ದೂರು ಸ್ವೀಕಾರ ಕೇಂದ್ರ’ಗಳಿಗೆ ಮಹಿಳೆಯರಿಂದ ಅರ್ಜಿಗಳ ಮಹಾಪೂರವೇ ಹರಿದು ಬಂದಿತ್ತು. ‘ಸರ್ಕಾರ ಪರಿಹಾರ ಕೊಡಿಸುತ್ತದೆ’ ಎಂಬ ಸಂತ್ರಸ್ತೆಯರ ನಿರೀಕ್ಷೆ ಭಗ್ನವಾಗಿದೆ.  

‘ಅನಿಯಂತ್ರಿತ ಠೇವಣಿ’ (ಅನ್‌ರೆಗ್ಯುಲೇಟೆಡ್‌ ಡೆಪಾಸಿಟ್‌) ಯೋಜನೆಗಳ ಅಡಿ, ಅಧಿಕ ಬಡ್ಡಿ ಆಸೆಗಾಗಿ ಹಣ ಹೂಡಿದ್ದ ಮಹಿಳೆಯರು ಪರಿತಪಿಸುತ್ತಿದ್ದಾರೆ.

ರಚನೆಯಾಗದ ಸಕ್ಷಮ ಪ್ರಾಧಿಕಾರ: ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ಸಂರಕ್ಷಣಾ ಕಾಯ್ದೆ 2004 (ಕೆ.ಪಿ.ಐ.ಡಿ ಅಧಿನಿಯಮ) ಮತ್ತು 2019ರ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ 2019ರ ಅಡಿಯಲ್ಲಿ ಸರ್ಕಾರ ‘ಸಕ್ಷಮ ಪ್ರಾಧಿಕಾರ’ವನ್ನು ರಾಜ್ಯದಲ್ಲಿ ಇದುವರೆಗೆ ರಚಿಸಿಲ್ಲ. ವಿಶೇಷಾಧಿಕಾರಿಯನ್ನೂ ನೇಮಿಸಿಲ್ಲ.

‘ಅಧಿಸೂಚನೆ ಹೊರಡಿಸಿಲ್ಲವಾದ್ದರಿಂದ ಸದ್ಯಕ್ಕೆ ಅರ್ಜಿಗಳನ್ನು ಸ್ವೀಕರಿಸುತ್ತಿಲ್ಲ’ ಎಂದು ಮಂಡ್ಯ ಜಿಲ್ಲಾಡಳಿತ ತಿಳಿಸಿದೆ.

ಹಣ ವಸೂಲಿ: ‘ಪರಿಹಾರ ಕೊಡಿಸುತ್ತೇವೆ ಎಂದು ನಂಬಿಸಿ, ಅರ್ಜಿ ಹಾಕಿಸಲು ತಲಾ ₹2000–₹3000 ವಸೂಲಿ ಮಾಡಿ ಮಧ್ಯವರ್ತಿಗಳು ಕರೆ ತಂದಿದ್ದರು. ಇಲ್ಲಿ ನೋಡಿದರೆ ಅರ್ಜಿಯನ್ನೇ ಸ್ವೀಕರಿಸುತ್ತಿಲ್ಲ’ ಎಂದು ಜಿಲ್ಲಾಧಿಕಾರಿ ಕಚೇರಿ ಬಳಿ ಕುಳಿತಿದ್ದ ಮಹಿಳೆಯರು ಅಳಲು ತೋಡಿಕೊಂಡರು.

2023ರ ನವೆಂಬರ್‌ನಿಂದ ಇಲ್ಲಿಯವರೆಗೆ ಮಂಡ್ಯ ಜಿಲ್ಲೆಯೊಂದ ರಲ್ಲೇ 37,400 ಅರ್ಜಿಗಳು ಸಲ್ಲಿಕೆಯಾಗಿವೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿದ್ದು, ಅವು ಜಿಲ್ಲಾಧಿಕಾರಿ ಕಚೇರಿಗಳಲ್ಲೇ ದೂಳು ತಿನ್ನುತ್ತಿವೆ. 

‘ಹಳ್ಳಿಗಾಡಿನ ಮಹಿಳೆಯರಿಗೆ ಬಡ್ಡಿ ಆಸೆ ತೋರಿಸಿ, ಕೂಡಿಟ್ಟ ಹಣವನ್ನು ಕಸಿದುಕೊಂಡ ಖಾಸಗಿ ಹಣಕಾಸು ಸಂಸ್ಥೆಗಳ ವಿರುದ್ಧ ಬಡ್ಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ಆ ಕಂಪನಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು’ ಎಂದು ಸಿಐಟಿಯು ಮಂಡ್ಯ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಆಗ್ರಹಿಸಿದ್ದಾರೆ. 

245 ಎಫ್‌ಐಆರ್‌ ದಾಖಲು

‘ರಾಜ್ಯದ ವಿವಿಧ ಜಿಲ್ಲೆಗಳ ಪೊಲೀಸ್‌ ಠಾಣೆಗಳಲ್ಲಿ ಬಡ್ಸ್‌ ಕಾಯ್ದೆಯಡಿ 245 ಎಫ್‌ಐಆರ್‌ ದಾಖಲಾಗಿದ್ದು, ಕೆಲವು ತನಿಖಾ ಹಂತದಲ್ಲಿ, ಕೆಲವು ದೋಷಾರೋಪಣಾ ಪಟ್ಟಿ ಸಲ್ಲಿಸುವ ಹಂತದಲ್ಲಿವೆ. ಇನ್ನೂ ಕೆಲವು ನ್ಯಾಯಾಲಯಗಳಲ್ಲಿ ವಿಚಾರಣಾ ಹಂತದಲ್ಲಿವೆ’ ಎಂದು ಗೃಹ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇದುವರೆಗೆ ಬಂದ ಅರ್ಜಿಗಳನ್ನು ಮಾನವೀಯ ದೃಷ್ಟಿಯಿಂದ ಸ್ವೀಕರಿಸಿದ್ದೇವೆ. ಸರ್ಕಾರ ‘ಸಕ್ಷಮ ಪ್ರಾಧಿಕಾರ’ ರಚಿಸಿ, ಅಧಿಸೂಚನೆ ಹೊರಡಿಸಿದ ನಂತರ ಅರ್ಜಿಗಳನ್ನು ಪ್ರಾಧಿಕಾರಕ್ಕೆ ರವಾನಿಸುತ್ತೇವೆ
– ಕುಮಾರ, ಮಂಡ್ಯ ಜಿಲ್ಲಾಧಿಕಾರಿ

ಪರಿಹಾರದ ನೆಪದಲ್ಲಿ ಮಧ್ಯವರ್ತಿಗಳಿಂದ ಹಣ ವಸೂಲಿ

ಹಣಕಾಸು ಕಂಪನಿಗಳ ಆಸ್ತಿ ಮುಟ್ಟುಗೋಲಿಗೆ ಆಗ್ರಹ

ಅರ್ಜಿ ಸ್ವೀಕರಿಸಲು ಕಾನೂನು ತೊಡಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.