ಬೆಳಗಾವಿ: ಕೆಪಿಟಿಸಿಎಲ್ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ ಆರೋಪಿಗಳನ್ನು ಬಿಟ್ಟು, ಉಳಿದವರಿಗೆ ನೇಮಕಾತಿ ಆದೇಶ ನೀಡಲು ರಾಜ್ಯ ಸಾರ್ಕಾರ ನಿರ್ಧರಿಸಿದೆ. ಇದೇ ರೀತಿಯ ನಿಲುವನ್ನು 545 ಪಿಎಸ್‌ಐ ನೇಮಕಾತಿ ಪರೀಕ್ಷೆ ಬರೆದವರ ಬಗ್ಗೆ ಏಕೆ ತಾಳುತ್ತಿಲ್ಲ ಎಂದು ಅಭ್ಯರ್ಥಿಗಳು ಪ್ರಶ್ನೆ ಎತ್ತಿದ್ದಾರೆ.
ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಸಿ, ಒಎಂಆರ್ ಶೀಟ್ ತಿದ್ದುವ ಮೂಲಕ ಅಕ್ರಮ ಎಸಗಲಾಗಿದೆ. ಇದೇ ಮಾದರಿಯ ಅಕ್ರಮಗಳು ಕೆಪಿಟಿಸಿಎಲ್ ಕಿರಿಯ ಸಹಾಯಕರ ನೇಮಕಾತಿಯಲ್ಲೂ ನಡೆದಿವೆ. 36 ಆರೋಪಿಗಳ ಬಂಧನವಾಗಿದೆ. ಆದರೂ ಇವರನ್ನು ಬಿಟ್ಟು ಉಳದೆಲ್ಲರಿಗೂ ಶೀಘ್ರದಲ್ಲೇ ನೇಮಕಾತಿ ಆದೇಶ ನೀಡಲಾಗುವುದು ಎಂದು ಇಂಧನ ಸಚಿವರು ಬೆಳಗಾವಿಯ ಅಧಿವೇಶನದಲ್ಲಿ ಹೇಳಿದ್ದಾರೆ.
‘ಪಿಎಸ್‌ಐ ನೇಮಕಾತಿ ಅಕ್ರಮದಲ್ಲೂ ಈವರೆಗೆ 312 ಜನರ ಬಂಧನವಾಗಿದೆ. ಇವರಲ್ಲಿ 52 ಅಭ್ಯರ್ಥಿಗಳಿದ್ದು, ಅವರನ್ನು ಡಿಬಾರ್ ಮಾಡಲೂ ಸರ್ಕಾರ ನಿರ್ಧರಿಸಿದೆ. ಹಾಗಾದರೆ ಉಳಿದ 493 ಮಂದಿಯ ಕತೆ ಏನು? ನಾವು ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿದ್ದೇವೆ. ಅಕ್ರಮ ಮಾಡಿದವರನ್ನು ಬಿಟ್ಟು ನಮಗೆ ಆದೇಶ ಪತ್ರ ಕೊಡಬೇಕು’ ಎಂಬುದು ಅವರ ಆಗ್ರಹ.
‘ಎಲ್ಲರೂ ಈಗಾಗಲೇ ನಾಲ್ಕೈದು ಬಾರಿ ಸಿಐಡಿ ವಿಚಾರಣೆಗೆ ಹಾಜರಾಗಿದ್ದೇವೆ. ನಮ್ಮ ಒಎಂಆರ್ ಶೀಟ್‌ಗಳು ಎಫ್‌ಎಸ್ಎಲ್ ಪ್ರಯೋಗಾಲಯದಲ್ಲಿ ಪರಿಶೀಲನೆ ಆಗಿವೆ. ಕ್ರಾಸ್ ವೆರಿಫಿಕೇಷನ್ ಮುಗಿದಿದೆ. ಬ್ಯಾಂಕ್ ಖಾತೆಗಳು, ಮೊಬೈಲ್ ಕಾಲ್ ರೆಕಾರ್ಡ್‌ಗಳನ್ನೂ ಪರಿಶೀಲನೆ ಮಾಡಿಯಾಗಿದೆ. ಅಂದ ಮೇಲೆ ನೇಮಕಾತಿ ಆದೇಶ ನೀಡುವುದನ್ನು ಬಿಟ್ಟು, ಮರು ಪರೀಕ್ಷೆ ಏಕೆ ಮಾಡಬೇಕು’ ಎಂದೂ ಪ್ರಶ್ನಿಸಿದ್ದಾರೆ.
ಸರ್ಕಾರದ ನಡೆ ಪ್ರಶ್ನಿಸಿ ಅಭ್ಯರ್ಥಿಗಳು ನ್ಯಾಯಾಲಯಕ್ಕೆ 400 ಅರ್ಜಿ ಸಲ್ಲಿಸಿದ್ದಾರೆ. ಆರು ತಿಂಗಳಾದರೂ ಒಂದೂ ವಿಚಾರಣೆ ಆಗಿಲ್ಲ. ಈ ಸರ್ಕಾರದ ಅವಧಿಯೂ ಮುಗಿಯುತ್ತ ಬಂದಿದೆ. ಹೀಗಾಗಿ, ತಮ್ಮ ಬಾಳು ಅಡಕತ್ತರಿಯಲ್ಲಿ ಸಿಕ್ಕಿಕೊಂಡಿದೆ ಎಂಬುದು ಅಭ್ಯರ್ಥಿಗಳ ಅಂಬೋಣ.
*
ಬಾಂಡ್ ಬರೆದುಕೊಡಲು ಸಿದ್ಧ
ತಮಗೆ ಷರತ್ತುಬದ್ಧ ನೇಮಕಾತಿ ಆದೇಶ ನೀಡಬೇಕು. ಅಕ್ರಮದಲ್ಲಿ ನಮ್ಮ ಹೆಸರು ಕೇಳಿಬಂದರೆ ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾವು ಸಿದ್ಧ ಎಂಬುದಾಗಿ ಬಾಂಡ್ ಬರೆದುಕೊಡಲೂ ಎಲ್ಲ 493 ಅಭ್ಯರ್ಥಿಗಳೂ ನಿರ್ಧರಿಸಿದ್ದಾರೆ.
2011ರಲ್ಲಿ ನಡೆದ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಅಕ್ರಮ ನಡೆದ ಬಗ್ಗೆ ತನಿಖೆಯಾಯಿತು. ಆಗ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರು ನೇಮಕಾತಿ ಪ್ರಕ್ರಿಯೆಯನ್ನೇ ರದ್ದು ಮಾಡಿದ್ದರು. ಪ್ರಾಮಾಣಿಕರು ನ್ಯಾಯಾಲಯಕ್ಕೆ ಹೋದರು. ಬಸವರಾಜ ಬೊಮ್ಮಾಯಿ ಅವರೇ ಹೊಸ ಕಾಯ್ದೆ ರೂಪಿಸಿ ಎಲ್ಲರಿಗೂ ಷರತ್ತುಬದ್ಧ ನೇಮಕಾತಿ ಆದೇಶ ನಿಡಿದರು. 400 ಮಂದಿಯ ಪೈಕಿ 312 ಮಂದಿ ಈಗ ನೌಕರಿ ಸೇರಿದ್ದಾರೆ. ಆದರೆ, ಪಿಎಸ್‌ಐ ಪರೀಕ್ಷಾರ್ಥಿಗಿಗೆ ಏಕೆ ಹಿಂಜರಿಯುತ್ತಿದ್ದಾರೆ ಎಂಬುದು ಅವರ ಪ್ರಶ್ನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.