ಬೆಂಗಳೂರು: ಪ್ರಥಮ ಹಾಗೂ ದ್ವಿತೀಯ ಪಿಯು ಪಠ್ಯಪುಸ್ತಕಗಳಿಗೆ ಮಾರುಕಟ್ಟೆಯಲ್ಲಿ ಅಭಾವ ಸೃಷ್ಟಿಯಾಗಿದ್ದು, ವಿದ್ಯಾರ್ಥಿಗಳು–ಪೋಷಕರು ಅಲೆದಾಡುವಂತಾಗಿದೆ.
ಕಳೆದ ಸಾಲಿಗಿಂತ ಈ ಬಾರಿಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ 10.49ರಷ್ಟು ಕುಸಿತ ಕಂಡಿದೆ. ಕಡಿಮೆ ಅಂಕ ಪಡೆದ ವಿದ್ಯಾರ್ಥಿಗಳು ಫಲಿತಾಂಶ ಉತ್ತಮಪಡಿಸಿಕೊಳ್ಳಲು ಎರಡನೇ ಪರೀಕ್ಷೆಯತ್ತ ಚಿತ್ತಹರಿಸಿದ್ದಾರೆ. ಹಾಗಾಗಿ, ಪ್ರಥಮ ಪಿಯುಸಿ ಪ್ರವೇಶ ಮಂದಗತಿಯಲ್ಲಿ ಸಾಗಿದೆ. ಈಗಾಗಲೇ ದಾಖಲಾತಿ ಪಡೆದ ವಿದ್ಯಾರ್ಥಿಗಳಿಗೂ ಅಗತ್ಯವಿರುವ ಎಲ್ಲ ಪಠ್ಯ ಪುಸ್ತಕಗಳು ರಾಜ್ಯದ ಯಾವುದೇ ಪುಸ್ತಕ ಮಳಿಗೆಗಳಲ್ಲಿ ದೊರೆಯುತ್ತಿಲ್ಲ.
ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ಜತೆಗೆ ಕನ್ನಡ, ಇಂಗ್ಲಿಷ್ ಭಾಷಾ ವಿಷಯಗಳ ಪಠ್ಯಪುಸ್ತಕಗಳೂ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ.
‘ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 96 ಅಂಕ ಪಡೆದ ಮಗನನ್ನು ಖಾಸಗಿ ವಿಜ್ಞಾನ ಕಾಲೇಜಿಗೆ ಸೇರಿಸಿದ್ದೇವೆ. ಜೂನ್ 3ರಿಂದಲೇ ತರಗತಿಗಳು ಆರಂಭವಾಗಿವೆ. ಕೆಲವು ವಿಷಯಗಳ ಒಂದೆರಡು ಪಠ್ಯಪುಸ್ತಕಗಳು ದೊರೆತಿವೆ. ಇಂಗ್ಲಿಷ್, ಭೌತವಿಜ್ಞಾನ, ಜೀವವಿಜ್ಞಾನ ವಿಷಯದ ಪುಸ್ತಕಗಳು ದೊರೆತಿಲ್ಲ. ಇಂಗ್ಲಿಷ್ ಭಾಷಾ ಪುಸ್ತಕಕ್ಕಾಗಿ ಬೇರೆಬೇರೆ ಪುಸ್ತಕ ಮಳಿಗೆಗಳಿಗೆ ಅಲೆದಾಡಿದರೂ ಪ್ರಯೋಜನವಾಗಿಲ್ಲ’ ಎನ್ನುತ್ತಾರೆ ಬಳ್ಳಾರಿಯ ಪೋಷಕ ನಿಜಗುಣಾನಂದ.
‘2024–25ನೇ ಸಾಲಿಗೆ ಬೇಡಿಕೆ ಇರುವ ಪಿಯು ಪಠ್ಯಪುಸ್ತಕಗಳನ್ನು ಮುದ್ರಿಸಿಕೊಡಲು ಪದವಿಪೂರ್ವ ಶಿಕ್ಷಣ ನಿರ್ದೇಶನಾಲಯ ಇದೇ ಜನವರಿ ಅಂತ್ಯದಲ್ಲಿ ಕರ್ನಾಟಕ ಪಠ್ಯಪುಸ್ತಕ ಸಂಘಕ್ಕೆ ಬೇಡಿಕೆ ಸಲ್ಲಿಸಿದೆ. ಆದರೆ, ಸಂಘ ಇದುವರೆಗೂ ಪಠ್ಯಪುಸ್ತಕ ಪೂರೈಸಿಲ್ಲ. ಇದರಿಂದ ಪಠ್ಯಪುಸ್ತಕಗಳ ಕೊರತೆ ಎದುರಾಗಿದೆ’ ಎನ್ನುವುದು ಪಿಯು ನಿರ್ದೇಶನಾಲಯದ ಅಧಿಕಾರಿಗಳ ಆರೋಪ.
‘ಪಿಯು ನಿರ್ದೇಶನಾಲಯ ತಡವಾಗಿ ಬೇಡಿಕೆ ಸಲ್ಲಿಸಿತ್ತು. ಟೆಂಡರ್ ಪ್ರಕ್ರಿಯೆ ಆರಂಭಿಸುವ ಮೊದಲೇ ನೀತಿ ಸಂಹಿತೆ ಜಾರಿಯಾಯಿತು. ಹಾಗಾಗಿ, ವಿಳಂಬವಾಗಿದೆ’ ಎನ್ನುವುದು ಪಠ್ಯ ಪುಸ್ತಕ ಸಂಘದ ಅಧಿಕಾರಿಗಳ ಸಮರ್ಥನೆ.
ಪ್ರಸಕ್ತ ಪಿಯು ಕಾಲೇಜುಗಳಲ್ಲಿ ಬೋಧಿಸುತ್ತಿರುವುದು ಒಂದು ದಶಕದ ಹಿಂದಿನ ಪಠ್ಯಪುಸ್ತಕಗಳು. ಈ ಪಠ್ಯಗಳು 2024–25ನೇ ಶೈಕ್ಷಣಿಕ ಸಾಲಿಗೆ ಕೊನೆಯಾಗಲಿವೆ. ಸರ್ಕಾರವು ಸುಖದೇವ್ ಥೋರಟ್ ಅಧ್ಯಕ್ಷತೆಯಲ್ಲಿ ರಾಜ್ಯ ಶಿಕ್ಷಣ ನೀತಿ ಆಯೋಗ ರಚಿಸಿದ್ದು, ಇದೇ ಆಗಸ್ಟ್‌ನಲ್ಲಿ ಆಯೋಗ ತನ್ನ ಅಂತಿಮ ವರದಿ ಸಲ್ಲಿಸಲಿದೆ. ವರದಿಯ ಶಿಫಾರಸಿನ ಆಧಾರದಲ್ಲಿ ಹೊಸ ಪಠ್ಯಕ್ರಮ ಚೌಕಟ್ಟು ಸಿದ್ಧವಾಗಲಿದೆ. ಹಾಗಾಗಿ, ಈ ಬಾರಿ ಹಳೆಯ ಪಠ್ಯಕ್ರಮದ ಪುಸ್ತಕಗಳನ್ನು ಅಗತ್ಯವಿರುವಷ್ಟೇ ಮುದ್ರಿಸಲು ಬೇಡಿಕೆ ಸಲ್ಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.