ಬೆಂಗಳೂರು: ರಾಜ್ಯದಲ್ಲಿ ಸುಮಾರು 4,720 ಎಕರೆ ವಕ್ಫ್ ಆಸ್ತಿಗಳು ಒತ್ತುವರಿಯಾಗಿದೆ ಎಂದು ಗುರುತಿಸಿದ್ದ ಬಿಜೆಪಿ ನೇತೃತ್ವದ ಸರ್ಕಾರವು, ಅವುಗಳ ಪಹಣಿಯಲ್ಲಿ ‘ವಕ್ಫ್ ಆಸ್ತಿ’ ಎಂದು ನಮೂದಿಸಿತ್ತು.
ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಗಳಲ್ಲಿ (2019–2023) ಈ ಜಮೀನುಗಳನ್ನು ಮಾರಾಟ ಮಾಡಲಾಗದ ಹಾಗೆ ಅವುಗಳ ಪಹಣಿಯನ್ನು ಲಾಕ್ ಮಾಡಲಾಗಿತ್ತು. ಈ ಜಮೀನುಗಳ ಪಹಣಿಗಳನ್ನು ವೆಬ್‌ಸೈಟ್‌ನಲ್ಲಿ ತೆರೆದರೆ ‘ಫ್ಲಾಗ್ ಆಪ್’ ಎಂದು ತೋರಿಸುವಂತೆ ಮಾಡಲಾಗಿತ್ತು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿಜೆಪಿ ಶಾಸಕ ಕುಮಾರ್ ಬಂಗಾರಪ್ಪ ಅಧ್ಯಕ್ಷತೆಯ, ‘ವಿಧಾನಮಂಡಲದ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಮಿತಿ’ ವಕ್ಫ್ ಆಸ್ತಿಗಳ ರಕ್ಷಣೆಗಾಗಿ ಸರಣಿ ಸಭೆಗಳನ್ನು ನಡೆಸಿತ್ತು. ವಿಧಾನಮಂಡಲದ ಸಮಿತಿಯಲ್ಲಿ ಎಲ್ಲ ಪಕ್ಷಗಳ ಶಾಸಕರೂ ಇದ್ದರು. ಪ್ರಭಾವಿಗಳು, ಉದ್ಯಮಿಗಳು, ರಾಜಕಾರಣಿಗಳೂ ಸೇರಿದಂತೆ ಹಲವರು ವಕ್ಫ್ ಆಸ್ತಿಗಳನ್ನು ಒತ್ತುವರಿ ಮಾಡಿಕೊಂಡಿದ್ದನ್ನು ಪತ್ತೆ ಹಚ್ಚಿತ್ತು. ವಕ್ಫ್ ಆಸ್ತಿಗಳ ಒತ್ತುವರಿಯನ್ನು ತೆರವು ಮಾಡಬೇಕು ಎಂದು ವಕ್ಫ್ ಮಂಡಳಿಗೆ ಸೂಚಿಸಿದ್ದ ಸಮಿತಿ, ‘ಆಸ್ತಿಗಳ ಸಂರಕ್ಷಣೆಗೆ ಇಂತಹ ಕಠಿಣ ಕ್ರಮಗಳ ಅಗತ್ಯವಿದೆ’ ಎಂದು ಪ್ರತಿಪಾದಿಸಿತ್ತು.
‘ವಕ್ಫ್ ಆಸ್ತಿಗಳಿಗೆ ಸಂಬಂಧಿಸಿದ ಪಹಣಿ ಮತ್ತು ದಾಖಲೆ ಪತ್ರಗಳಲ್ಲಿ ವಕ್ಫ್ ಆಸ್ತಿಗಳು ಎಂದು ನಮೂದಿಸದೇ ಇರುವ ಮತ್ತು ವ್ಯಕ್ತಿಗಳ ಹೆಸರು ಇರುವ ಕಾರಣ ಅವುಗಳಲ್ಲಿ ಅಕ್ರಮವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಭೂಮಿ ತಂತ್ರಾಂಶದಲ್ಲಿ ವಕ್ಫ್ ಆಸ್ತಿಗಳೆಂದು ನಮೂದು ಮಾಡಬೇಕು’ ಎಂದು ಸಮಿತಿ ಸೂಚಿಸಿತ್ತು.
ಈ ಪ್ರಕಾರ ಕ್ರಮ ತೆಗೆದುಕೊಂಡಿದ್ದ ಮಂಡಳಿಯು ಒತ್ತುವರಿದಾರರು ಎಂದು ಗುರುತಿಸಲಾಗಿದ್ದ ರೈತರು ಮತ್ತು ಭೂಮಾಲೀಕರಿಗೆ ನೋಟಿಸ್ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿತ್ತು. ಕಂದಾಯ ಇಲಾಖೆ, ಪಂಚಾಯತ್ ರಾಜ್ ಮತ್ತು ನಗರಾಭಿವೃದ್ಧಿ ಇಲಾಖೆಗಳ ‘ಭೂಮಿ’, ‘ಇ-ಸ್ವತ್ತು’ ಮತ್ತು ‘ಇ-ಆಸ್ತಿ’ ತಂತ್ರಾಂಶಗಳನ್ನು ಬಳಸಿಕೊಂಡು ಸಂಬಂಧಿತ ಜಮೀನುಗಳ ಪಹಣಿಗಳನ್ನು ಕಂದಾಯ ಇಲಾಖೆ ಅಧಿಕಾರಿಗಳ ಮೂಲ ಲಾಕ್ ಮಾಡಿಸಲಾಗಿತ್ತು.
ವಿಧಾನಮಂಡಲದ ಕಲ್ಯಾಣ ಸಮಿತಿಯು ವಿಧಾನಸಭೆಯಲ್ಲಿ ಮೊದಲನೇ ವರದಿ ಮಂಡಿಸುವ ವೇಳೆಗೆ ಕೆಲವೇ ಕೆಲವು ಆಸ್ತಿಗಳಿಗೆ ಸಂಬಂಧಿಸಿದ ಪಹಣಿಗಳನ್ನು ಮಾತ್ರ ಹೀಗೆ ಲಾಕ್ ಮಾಡಲಾಗಿತ್ತು. 2020ರ ಸೆಪ್ಟೆಂಬರ್ 22ರಂದು ಎರಡನೇ ವರದಿ ಮಂಡಿಸಿದ ವೇಳೆಗೆ ಹೀಗೆ ಲಾಕ್ ಮಾಡಲಾದ ಆಸ್ತಿಗಳ ವಿಸ್ತೀರ್ಣ 1,551 ಎಕರೆ. 2022ರ ಸೆಪ್ಟೆಂಬರ್‌ನಲ್ಲಿ ಹೀಗೆ 4,720 ಎಕರೆ ವಿಸ್ತೀರ್ಣದ 4,734 ಆಸ್ತಿಗಳನ್ನು ಲಾಕ್ ಮಾಡಲಾಗಿತ್ತು.
ಹೀಗೆ ಲಾಕ್ ಅಥವಾ ಫ್ಲ್ಯಾಗ್ ಆಫ್ ಮಾಡಲಾದ ಆಸ್ತಿಗಳ ಮಾರಾಟ, ಉಡುಗೊರೆ ನೀಡಿಕೆ, ಪಹಣಿ ಬದಲಾವಣೆ ಅಥವಾ ತಿದ್ದುಪಡಿ, ಭೋಗ್ಯಕ್ಕೆ ಹಾಕುವುದು, ಅಡಮಾನ ಸಾಲ ಪಡೆಯುವುದು ಮತ್ತು ಇತರ ಯಾವುದೇ ಪ್ರಕ್ರಿಯೆಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ. ಹೀಗೆ ಫ್ಲ್ಯಾಗ್ ಆಫ್ ಮಾಡಿದ ಪ್ರಕರಣಗಳಲ್ಲಿ ಹಲವು ರೈತರು ಮತ್ತು ಭೂಮಾಲೀಕರು ನ್ಯಾಯಾಲಯಗಳ ಮೊರೆ ಹೋಗಿದ್ದಾರೆ.
ವಕ್ಫ್ ಆಸ್ತಿಗಳ ಸಂರಕ್ಷಣೆಗೆ 2018-19ರಲ್ಲಿದ್ದ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್- ಕಾಂಗ್ರೆಸ್ ಸರ್ಕಾರವು ವಕ್ಫ್ ಆಸ್ತಿಗಳ ಸಂರಕ್ಷಣೆಗೆ ಎಂದು ₹3.17 ಕೋಟಿ ಅನುದಾನ ನೀಡಿತ್ತು. ನಂತರ ಬಂದ ಯಡಿಯೂರಪ್ಪ ಅವರ ಸರ್ಕಾರವು ಈ ಮೊತ್ತವನ್ನು ₹30.40 ಕೋಟಿಗೆ ಏರಿಕೆ ಮಾಡಿತ್ತು.
2020-21ನೇ ಆರ್ಥಿಕ ವರ್ಷದಲ್ಲಿ ಬಿಜೆಪಿ ಸರ್ಕಾರವು ಈ ಉದ್ದೇಶಕ್ಕೆ ಎಂದು ₹10.43 ಕೋಟಿ ಅನುದಾನ ಒದಗಿಸಿತ್ತು. ಒಟ್ಟು ಎರಡು ಆರ್ಥಿಕ ವರ್ಷದಲ್ಲೇ ಬಿಜೆಪಿ ಸರ್ಕಾರವು ವಕ್ಫ್ ಆಸ್ತಿಗಳ ಸಂರಕ್ಷಣೆಗೆ ಎಂದು ₹40.83 ಕೋಟಿ ಅನುದಾನ ನೀಡಿತ್ತು ಎಂಬುದನ್ನು ಕುಮಾರ್ ಬಂಗಾರಪ್ಪ ಅಧ್ಯಕ್ಷತೆಯ ಸಮಿತಿಯು ತನ್ನ ವರದಿಯಲ್ಲಿ ಹೇಳಿದೆ.
ವಕ್ಫ್ ಆಸ್ತಿಗಳ ದಾಖಲೆ ಬದಲಾವಣೆ, ಸರ್ವೇ ಕಾರ್ಯ, ಹದ್ದಬಸ್ತು, ತೆರವು ಕಾರ್ಯಾಚರಣೆ ಮತ್ತು ಪ್ರಕರಣಗಳ ನಿರ್ವಹಣೆಗೆ ಈ ಅನುದಾನವನ್ನು ಬಳಕೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.