ಬೆಂಗಳೂರು:ಕಡ್ಡಾಯ ಕನ್ನಡ ಕಲಿಕಾ ಅಧಿನಿಯಮದನ್ವಯ ರಾಜ್ಯದಲ್ಲಿ ಕನ್ನಡವನ್ನು ಬೋಧಿಸದ ಯಾವುದೇ ಶಾಲೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿಶುಕ್ರವಾರಮೌಂಟ್ ಕಾರ್ಮೆಲ್ ಮಹಿಳಾ ಕಾಲೇಜು ಸಭಾಂಗಣದಲ್ಲಿನಡೆದಕನ್ನಡ ಭಾಷಾ ಅನುಷ್ಠಾನ ಕುರಿತಂತೆ ಸಿಬಿಎಸ್ಇ/ ಐಸಿಎಸ್ಇ/ ಐಜಿಸಿಎಸ್ಇ, ಅಂತಾರಾಷ್ಟ್ರೀಯ ಪಠ್ಯ ಬೋಧನಾ ಕ್ರಮದಶಾಲೆಗಳು ಸೇರಿದಂತೆ ಕೇಂದ್ರೀಯ ವಿದ್ಯಾಲಯಗಳಪ್ರಾಚಾರ್ಯರು ಮತ್ತು ಕನ್ನಡ ಉಪಾಧ್ಯಾಯರ ಕಾರ್ಯಾಗಾರ ಮತ್ತು ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಧಿನಿಯಮ 2015ರಲ್ಲೇ ಜಾರಿಯಾಗಿದ್ದರೂ 2017-18ರಿಂದ ಎಲ್ಲಾ ಶಾಲೆಗಳೂ ನಿಯಮವನ್ನುಕಟ್ಟುನಿಟ್ಟಾಗಿಅನುಷ್ಠಾನಗೊಳಿಸಬೇಕಿತ್ತು. ಕೆಲ ಶಾಲೆಗಳು ಈವರೆಗೆ ಅದನ್ನು ಪಾಲಿಸುವ ಗೋಜಿಗೆ ಹೋಗಿಲ್ಲ. ಅಂತಹ ಶಾಲೆಗಳ ವಿರುದ್ಧ ಮುಂದಿನ ದಿನಗಳಲ್ಲಿ ಯಾವುದೇ ಮುಲಾಜಿಲ್ಲದೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕನ್ನಡ ನೆಲದ ಯಾವುದೇ ಶಾಲೆಯಾದರೂ ಒಂದನೆ ತರಗತಿಯಿಂದ ಕನ್ನಡವನ್ನು ಪ್ರಥಮ ಇಲ್ಲವೇ ದ್ವಿತೀಯ ಭಾಷೆಯಾಗಿ ಕಲಿಸಲೇಬೇಕು. ಅದೂ ಸಹ ರಾಜ್ಯ ಸರ್ಕಾರ ನಿಗದಿಪಡಿಸಿರುವ ಪಠ್ಯ ಪುಸ್ತಕವನ್ನೇ ಕಡ್ಡಾಯವಾಗಿ ಕಲಿಸಬೇಕು. ಈ ಪುಸ್ತಕದ ಹೊರತಾಗಿ ತಮ್ಮದೇಕನ್ನಡ ಪಠ್ಯ ಬೋಧಿಸಲು ನಿಯಮಗಳಲ್ಲಿ ಅವಕಾಶಗಳಿಲ್ಲ ಎಂಬುದನ್ನೂ ಶಾಲೆಗಳು ಅರ್ಥ ಮಾಡಿಕೊಳ್ಳಬೇಕು ಎಂದು ಸಚಿವರು ಹೇಳಿದರು.
ಕನ್ನಡ ನೆಲದಲ್ಲಿದ್ದೂ, ಕನ್ನಡ ನೆಲ ಜಲ ಬಳಸಿಕೊಂಡೂ ಕನ್ನಡ ಕಲಿಯದಿದ್ದರೂ ಬದುಕಬಹುದು, ಕನ್ನಡ ಕಲಿಯುವುದು ಇಲ್ಲವೇ ಮಾತನಾಡುವುದೇ ಒಂದು ದೌರ್ಬಲ್ಯ ಎಂದು ಭಾವಿಸಿದವರಿಗೇನೂ ಕೊರತೆಯಿಲ್ಲ. ಕಾವೇರಿ ನೀರು ಕುಡಿಯುವವರೆಲ್ಲರೂ, ಕನ್ನಡ ನೆಲದಲ್ಲಿ ವಾಸಿಸುವರೆಲ್ಲರೂ ಕನ್ನಡವನ್ನು ಕಲಿಯಲೇಬೇಕು. ಅಂತಹ ಶಾಲೆಗಳು ರಾಜ್ಯದ ಕನ್ನಡ ಕಡ್ಡಾಯ ಕಲಿಕಾ ನಿಯಮದಡಿ ಅದನ್ನು ಅಕ್ಕರೆಯಿಂದಲೇ ಕಲಿಯಬೇಕು ಎಂದರು.
ನೀವು ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವುದಿಲ್ಲ ಎಂದಾದರೆಏನು ಮಾಡಬೇಕು, ಹೇಗೆ ನಿಮ್ಮಿಂದ ಮಕ್ಕಳಿಗೆ ಕನ್ನಡವನ್ನು ಕಲಿಸಬೇಕು, ಅದಕ್ಕಾಗಿ ಏನು ಮಾಡಬೇಕು, ಯಾವಾಗ ಮಾಡಬೇಕು ಎಂಬುದು ಸರ್ಕಾರಕ್ಕೆ ಗೊತ್ತಿದೆ. ಇನ್ನು ಸಹಿಸಲು ಸಾಧ್ಯವೇ ಇಲ್ಲ. ಇದು ಕೊನೆಯ ಎಚ್ಚರಿಕೆ ಎಂದೂಸುರೇಶ್ ಕುಮಾರ್ ಹೇಳಿದರು.
ಕನ್ನಡ ಅತ್ಯಂತ ಶ್ರೀಮಂತ ಭಾಷೆ, ಸರಳ ಭಾಷೆ, ಶಿಕ್ಷಣದಲ್ಲಿ ಕನ್ನಡ ಕಲಿಸದಿದ್ದರೆ ಇನ್ನೆಲ್ಲಿ ಕಲಿಸಲು ಸಾಧ್ಯ? ಇನ್ನೆಲ್ಲಿ ಕಲಿಯಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ಶಾಲೆಗಳಿರುವುದೇ ಆ ನೆಲದ ಭಾಷೆಯನ್ನು ಕಲಿಸಲು ಎಂಬುದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ನೀವು ನೂರು ಭಾಷೆ ಕಲಿಸಿ, ಆದರೆ ಆ ರಾಜ್ಯ ಸರ್ಕಾರ ನಿಗದಿಪಡಿಸಿರುವಪಠ್ಯವನ್ನು ಒಂದು ಭಾಷೆಯಾಗಿ ಕಲಿಸಲೇಬೇಕು ಎಂದರು.
ಕನ್ನಡ ಕಲಿಸುವುದು, ಕಲಿಯುವುದು, ಮಾತನಾಡುವುದು ಕೀಳರಿಮೆ ಎಂದುಕೆಲ ಶಾಲೆಗಳು ಭಾವಿಸಿವೆ. ಅದಕ್ಕೆಲ್ಲ ಯಾವುದೇ ವಿನಾಯ್ತಿ ಇಲ್ಲ ಎಂದರು. ಯಾವ ಶಾಲೆಗಳ ಆಡಳಿತ ಮಂಡಳಿಗಳು ಕನ್ನಡಕ್ಕೆ ವಿರೋಧ ಮಾಡುತ್ತವೆ ಎಂಬುದರ ಮಾಹಿತಿ ಇದ್ದು,ಈ ಕಾರ್ಯಾಗಾರದ ಮೂಲಕ ಕೊನೆಯ ಬಾರಿಗೆ ತಿಳಿ ಹೇಳಲಾಗುತ್ತಿದೆ. ಇದನ್ನು ನಿರ್ಲಕ್ಷಿಸಿದ ಶಾಲೆಗಳ ವಿರುದ್ಧ ಯಾವುದೇ ಹಿಂಜರಿಕೆಯಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದರು. ಹಾಗೆಯೇ ಕನ್ನಡ ಶಿಕ್ಷಕರಿಗೆ ವೇತನದಲ್ಲಿ ತಾರತಮ್ಯ ಮಾಡುವ ಶಾಲೆಗಳ ವಿರುದ್ಧವೂ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು.ಹಾಗೆಯೇಈ ಕಾರ್ಯಾಗಾರಕ್ಕೆ ಗೈರು ಹಾಜರಾದ ಶಾಲೆಗಳಿಗೆ ನೊಟೀಸ್ ಜಾರಿಗೊಳಿಸಿ ವಿವರಣೆ ಪಡೆಯಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದರು.
ಭಾಷೆ ಉಳಿದರೆ ಯಾವುದೇ ಸಂಸ್ಕೃತಿ ಉಳಿಯುತ್ತದೆ. ಅದಕ್ಕಾಗಿಯೇ ಆ ನೆಲದ ಭಾಷೆ ಕಲಿಯಲು, ಕಲಿಸಲು ಸರ್ಕಾರಗಳು ಮುಂದಾಗಿವೆ. ಅದನ್ನು ಶಾಲೆಗಳು ಚಾಚೂ ತಪ್ಪದೇ ಪಾಲಿಸಬೇಕುಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಮಾತನಾಡಿ, ಕನ್ನಡದ ಕೆಲಸಗಳು ಸರ್ಕಾರದಿಂದಚೆನ್ನಾಗಿಯೇ ನಡೆದಿವೆ. ಆದರೆ ಕೊನೆ ಹಂತದಲ್ಲಿ ಜಾರಿಗೊಳಿಸುವವರು ಸರಿಯಾಗಿ ಅನುಷ್ಠಾನಗೊಳಿಸಲು ಮುಂದಾಗಿಲ್ಲ.ಕನ್ನಡವನ್ನು ಭಾಷೆಯನ್ನಾಗಿ ಕಲಿಸಲು ಶಾಲೆಗಳಿಗೆ ಏನು ತೊಂದರೆ ಇದೆ ಎಂದು ಪ್ರಶ್ನಿಸಿದರು.
ನೆಲದ ಭಾಷೆ ಕಲಿಸಲು ಇಂತಹ ಪೊಲೀಸಿಂಗ್ ವ್ಯವಸ್ಥೆ ಇರಬೇಕಾದುದು ದುರ್ದೈವ ಸಂಗತಿ. ಸಂಸ್ಕೃತಿಯ ಮೂಲ ಭಾಷೆಯಾದ್ದರಿಂದ ಮುಂದೆ ಆ ಮಗು ಸಾಂಸ್ಕೃತಿಕವಾಗಿ ಉತ್ತಮವಾಗಿ ಬೆಳೆಯಬೇಕಾದರೆ ತನ್ನ ನೆಲದ ಭಾಷೆಯನ್ನು ಕಲಿಯಲೇಬೇಕು ಎಂದರು. ಸಾಂಸ್ಕೃತಿಕವಾಗಿ ಚೆನ್ನಾಗಿ ಬೆಳೆದ ಮಗುನಾಳೆ ಉತ್ತಮವಾಗಿ ನಾಡುಕಟ್ಟುತ್ತಾನೆ.ಇದು ಈಗ ಆಗದೇ ಹೋದರೆ ಕನ್ನಡ ಶಿಕ್ಷಕಕರೇ ಮುಂದೆ ಅದರ ಪಾಶ್ಚಾತ್ತಾಪ ಪಡುವ ದಿನಗಳು ಬರುತ್ತವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.