ADVERTISEMENT

ಉತ್ತರಾಖಂಡ ಚಾರಣ: ರಾಜ್ಯದ ಐವರ ಸಾವು, ನಾಲ್ವರು ಕಣ್ಮರೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2024, 1:16 IST
Last Updated 6 ಜೂನ್ 2024, 1:16 IST
   

ಬೆಂಗಳೂರು: ಉತ್ತರಾಖಂಡದ ಸಹಸ್ತ್ರ ತಾಲ್‌ ಚಾರಣಕ್ಕೆ ತೆರಳಿ ಹವಾಮಾನ ವೈಪರೀತ್ಯದಿಂದಾಗಿ ಅಪಾಯಕ್ಕೆ ಸಿಲುಕಿದ್ದ 22 ಮಂದಿಯ ಪೈಕಿ ರಾಜ್ಯದ ಐವರು ಮೃತಪಟ್ಟಿದ್ದು, ನಾಲ್ವರು ಕಣ್ಮರೆಯಾಗಿದ್ದಾರೆ.

ಕಣ್ಮರೆಯಾದವರ ಪತ್ತೆಗೆ ಉತ್ತರಾಖಂಡ ಸರ್ಕಾರ, ಭಾರತೀಯ ಪರ್ವತಾರೋಹಿಗಳ ಒಕ್ಕೂಟ ಮತ್ತು ಕೇಂದ್ರ ಗೃಹ ಇಲಾಖೆಯ ನೆರವಿನಲ್ಲಿ ಶೋಧ ಮುಂದುವರಿದಿದೆ.

‌ರಾಜ್ಯದ ಚಾರಣಿಗರು ಅಪಾಯದಲ್ಲಿ ಸಿಲುಕಿರುವ ಮಾಹಿತಿ ಸಿಗುತ್ತಿದ್ದಂತೆ ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ಡೆಹ್ರಾಡೂನ್‌ಗೆ ತೆರಳಿರುವ ಕಂದಾಯ ಸಚಿವ ಕೃಷ್ಣ ಬೈರೇಗೌಡ ಈ ಮಾಹಿತಿ ನೀಡಿದ್ದಾರೆ.

ADVERTISEMENT

‘ಮೃತಪಟ್ಟ ಸಿಂಧು, ಆಶಾ ಸುಧಾಕರ್‌, ಸುಜಾತಾ ಮುಂಗುರ್‌ವಾಡಿ, ವಿನಾಯಕ ಮುಂಗುರ್‌ವಾಡಿ, ಚಿತ್ರಾ ಪ್ರಣೀತ್ ಅವರ ದೇಹಗಳನ್ನು ಬೆಂಗಳೂರಿಗೆ ಸಾಗಿಸಲು ಕೇಂದ್ರ ಸರ್ಕಾರದೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ’ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

‘ಕಣ್ಮರೆಯಾದ ನಾಲ್ವರಿಗಾಗಿ ಹುಡುಕಾಟ ನಡೆಯುತ್ತಿದೆ. ಆದರೆ, ಪ್ರತಿಕೂಲ ಪರಿಸ್ಥಿತಿಯಿಂದಾಗಿ ಬುಧವಾರ ಸಂಜೆ ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ಆರಂಭವಾಗಲಿದೆ’ ಎಂದೂ ಅವರು ತಿಳಿಸಿದ್ದಾರೆ.

‘ಚಾರಣಿಗರಾದ ಸೌಮ್ಯಾ ಕನಲೆ, ಸ್ಮೃತಿ ಡೊಲಸ್‌, ಶೀನಾ ಲಕ್ಷ್ಮಿ, ಎಸ್‌.ಶಿವಜ್ಯೋತಿ, ಅನಿಲ್‌ ಭಟ್ಟ, ಭರತ್‌ ಬೊಮ್ಮನಗೌಡರ್‌, ಮಧು ಕಿರಣ್‌ ರೆಡ್ಡಿ, ಬಿ.ಎಸ್‌. ಜಯಪ್ರಕಾಶ್‌ ಎಂಬವರನ್ನು ವಾಯುಸೇನೆ, ವಿಪತ್ತು ನಿರ್ವಹಣಾ ಪಡೆ ಮತ್ತು ಇತರೆ ಸಂಸ್ಥೆಗಳ ನೆರವಿನಿಂದ ರಕ್ಷಿಸಿ ಡೆಹ್ರಾಡೂನ್‌ಗೆ ತಲುಪಿಸಲಾಗಿದೆ. ಎಸ್‌. ಸುಧಾಕರ್‌, ಎಂ.ಕೆ. ವಿನಯ್, ವಿವೇಕ್‌ ಶ್ರೀಧರ್‌ ಎಂಬವರನ್ನು ರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಎ. ನವೀನ್‌ ಹಾಗೂ ರಿತಿಕಾ ಜಿಂದಾಲ್‌ ಎಂಬವರು ಸಿಲ್ಲಾ ಗ್ರಾಮದ ಮೂಲಕ ಅಪಾಯ ಸ್ಥಳದಿಂದ ವಾಪಸ್‌ ಆಗಿದ್ದಾರೆ’ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಮರಣೋತ್ತರ ಪರೀಕ್ಷೆ:

ಮೃತದೇಹಗಳನ್ನು ಸೇನೆಯ ಹೆಲಿಕಾಪ್ಟರ್‌ ಮೂಲಕ ನಾಟಿನ್‌ ಹೆಲಿಪ್ಯಾಡ್‌ಗೆ ತರಲಾಗಿದ್ದು, ಉತ್ತರಕಾಶಿಯ ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ. ಬಳಿಕ ಬೆಂಗಳೂರಿಗೆ ಮೃತದೇಹಗಳನ್ನು ರವಾನಿಸಲಾಗುವುದು ಎಂದು ಮೂಲಗಳು ಹೇಳಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಕೃಷ್ಣ ಬೈರೇಗೌಡ ಮಾತನಾಡಿದ್ದಾರೆ. ಅಲ್ಲದೆ, ರಕ್ಷಣೆಯಾದ ಚಾರಣಿಗರ ಪೈಕಿ ಅನಿಲ್‌ ಭಟ್ಟ ಎಂಬುವರೂ ಮುಖ್ಯಮಂತ್ರಿ ಜತೆಗೆ ಮಾತನಾಡಿದ್ದಾರೆ.

ಮಂಗಳವಾರ ಬೆಳಿಗ್ಗೆ ಈ ತಂಡ ಚಾರಣ ಆರಂಭಿಸಿತ್ತು. ಚಾರಣದ ಗಮ್ಯಸ್ಥಾನ ತಲುಪಿದ ತಂಡ, ಶಿಬಿರಕ್ಕೆ ಹಿಂತಿರುಗಲು ಯತ್ನಿಸಿತ್ತು. ಮಾರ್ಗದ ಮಧ್ಯೆ ಸಹಸ್ತ್ರ ತಾಲ್‌ನ ಮಯಳಿ ಎಂಬಲ್ಲಿ ಮಧ್ಯಾಹ್ನ 2 ಗಂಟೆಗೆ ಹಿಮಗಾಳಿಯಿಂದಾಗಿ ಹವಾಮಾನ ಸಂಪೂರ್ಣ ಹದಗೆಟ್ಟಿದ್ದು, ಎಲ್ಲ ಚಾರಣಿಗರು ಅಪಾಯಕ್ಕೆ ಸಿಲುಕಿದ್ದರು. ಈ ಚಾರಣವನ್ನು ಭಾರತೀಯ ಪರ್ವತಾರೋಹಿಗಳ ಒಕ್ಕೂಟ ಆಯೋಜಿಸಿತ್ತು.

ಡೆಹ್ರಾಡೂನ್‌ಗೆ ತೆರಳುವ ಮೊದಲು ಪ್ರತಿಕ್ರಿಯಿಸಿದ ಕೃಷ್ಣ ಬೈರೇಗೌಡ, ‘ಚಾರಣಿಗರು ಪ್ರತಿಕೂಲ ವಾತಾವರಣದಿಂದಾಗಿ ಅಪಾಯಕ್ಕೆ ಸಿಲುಕಿರುವ ಮಾಹಿತಿ ಮಂಗಳವಾರ ರಾತ್ರಿ ಬಂದಿತ್ತು. ಉತ್ತರಾಖಂಡ ಸರ್ಕಾರ, ಭಾರತೀಯ ಪರ್ವತಾರೋಹಣ ಒಕ್ಕೂಟ ಮತ್ತು ಕೇಂದ್ರ ಸರ್ಕಾರದ ಗೃಹ ಇಲಾಖೆಯನ್ನು ಸಂಪರ್ಕಿಸಿ ಚಾರಣಿಗರ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ’ ಎಂದರು.

‘ಸ್ಥಳೀಯವಾಗಿ ಲಭ್ಯವಿರುವ ಹೆಲಿಕಾಪ್ಟರ್‌ಗಳ ಸಹಾಯದಿಂದ ತುರ್ತು ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ. ಅಲ್ಲದೆ, ಚಾರಣಿಗರ ರಕ್ಷಣೆಗಾಗಿ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಬುಧವಾರ ಬೆಳಿಗ್ಗೆ 9 ಗಂಟೆಗೆ ಉತ್ತರಕಾಶಿ ತಲುಪಿದೆ. ವಿಪತ್ತು ನಿರ್ವಹಣಾ ಪಡೆ ಕೂಡಾ ಭೂ ಮಾರ್ಗವಾಗಿ ಶಿಬಿರದ ಬಳಿಗೆ ತೆರಳಿದೆ. ಅಪಾಯದಲ್ಲಿ ಸಿಲುಕಿದವರನ್ನು ರಕ್ಷಿಸಲು ರಾಜ್ಯ ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ’ ಎಂ‌ದು ಹೇಳಿದರು.

ಉತ್ತರಾಖಂಡದ ಉತ್ತರಕಾಶಿಯಲ್ಲಿ ಸಹಾಯ ಕೇಂದ್ರ ತೆರೆಯಲಾಗಿದೆ. ಐಎಎಸ್‌ ಅಧಿಕಾರಿ ವಿಪುಲ್‌ ಬನ್ಸಾಲ್‌ (ಮೊಬೈಲ್‌: 9480474949) ಅವರಿಗೆ ಈ ಕೇಂದ್ರದ ಜವಾಬ್ದಾರಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಚುನಾವಣೆ ಕರ್ತವ್ಯಕ್ಕೆಂದು ನಾಗಪುರಕ್ಕೆ ಹೋಗಿದ್ದ ವಿಪುಲ್‌ ಬನ್ಸಾಲ್ ಅವರು ಅಲ್ಲಿಂದ ಬುಧವಾರ ರಾತ್ರಿಯೇ ಡೆಹ್ರಾಡೂನ್‌ಗೆ ತೆರಳಿದ್ದಾರೆ.

ಮೃತಪಟ್ಟವರ ದೇಹಗಳನ್ನು ಕುಟುಂಬದವರಿಗೆ ತಲುಪಿಸಲಾಗುವುದು ಮತ್ತು ಕಾರ್ಯಾಚರಣೆಯ ಮೂಲಕ ರಕ್ಷಿಸಿರುವ ಚಾರಣಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲಾಗುವುದು
ಸಿದ್ದರಾಮಯ್ಯ, ಮುಖ್ಯಮಂತ್ರಿ
ತುರ್ತು ಕ್ರಮ– ಸಿದ್ದರಾಮಯ್ಯ
‘ಉತ್ತರಾಖಂಡದ ಸಹಸ್ತ್ರ ತಾಲ್‌ ಚಾರಣಕ್ಕೆ ತೆರಳಿ ಹವಾಮಾನ ವೈಪರೀತ್ಯದಿಂದಾಗಿ ಮೃತಪಟ್ಟವರ ದೇಹಗಳನ್ನು ಕುಟುಂಬದವರಿಗೆ ತಲುಪಿಸಲಾಗುವುದು ಮತ್ತು ಕಾರ್ಯಾಚರಣೆಯ ಮೂಲಕ ರಕ್ಷಿಸಿರುವ ಚಾರಣಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಈ ಕುರಿತಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮತ್ತು ರಕ್ಷಿಸಲ್ಪಟ್ಟ ಚಾರಣಿಗರ ಜೊತೆ ದೂರವಾಣಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು. ‘ಈ ಘಟನೆಯಿಂದ ಬಹಳ ನೋವಾಗಿದೆ. ರಕ್ಷಿಸಲ್ಪಟ್ಟಿರುವ ಎಲ್ಲರನ್ನೂ ಯಾವುದೇ ಅಡಚಣೆ ಆಗದಂತೆ ಸುರಕ್ಷಿತವಾಗಿ ಮನೆಗಳಿಗೆ ಸೇರಿಸಬೇಕು. ಮೃತಪಟ್ಟವರ ದೇಹಗಳನ್ನು ಕುಟುಂಬದವರಿಗೆ ತಲುಪಿಸುವ ನಿಟ್ಟಿನಲ್ಲೂ ಅಗತ್ಯವಾದ ಎಲ್ಲ ಪ್ರಕ್ರಿಯೆಗಳನ್ನು ತುರ್ತಾಗಿ ನಿರ್ವಹಿಸುವಂತೆ ಕೃಷ್ಣ ಬೈರೇಗೌಡ ಅವರಿಗೆ ಸೂಚಿಸಿದ್ದೇನೆ’ ಎಂದರು. ‘ಪ್ರತಿಕೂಲ ಹವಾಮಾನದಿಂದಾಗಿ ರಕ್ಷಣಾ ಕಾರ್ಯಕ್ಕೆ ತೀವ್ರ ಅಡಚಣೆಯಾಗಿದೆ. ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲು ಸರ್ಕಾರವು ಶಕ್ತಿ ಮೀರಿ ಪ್ರಯತ್ನಿಸುತ್ತಿದೆ’ ಎಂದೂ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.