ಬೆಂಗಳೂರು:ಮೈಸೂರು ನಗರದಲ್ಲಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಪ್ರಕರಣದ ತನಿಖೆಯ ಮೇಲುಸ್ತುವಾರಿಗೆ ಹಿರಿಯ ಪೊಲೀಸ್ ಅಧಿಕಾರಿಗಳ ತಂಡವನ್ನು ಕಳುಹಿಸಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಪ್ರಕರಣದ ಕುರಿತು ಮೈಸೂರು ನಗರ ಪೊಲೀಸ್ ಕಮಿಷನರ್ ಅವರಿಂದ ಮಾಹಿತಿ ಪಡೆದ ಬಳಿಕ ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಫ್‌ಐಆರ್ ದಾಖಲು ಮಾಡಲಾಗಿದೆ. ತಕ್ಷಣ ಮೈಸೂರಿಗೆ ತೆರಳಿ ತನಿಖೆಯ ನೇತೃತ್ವ ವಹಿಸಿಕೊಳ್ಳುವಂತೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಪ್ರತಾಪ್ ರೆಡ್ಡಿ ಅವರಿಗೆ ಸೂಚನೆ ನೀಡಲಾಗಿದೆ’ ಎಂದರು.
ಹಿರಿಯ ಅಧಿಕಾರಿಗಳ ತಂಡವೊಂದು ಮೈಸೂರಿಗೆ ತೆರಳುತ್ತಿದೆ. ನುರಿತ ಅಧಿಕಾರಿಗಳ ತಂಡವೊಂದನ್ನು ರಚಿಸಿಕೊಂಡು, ತನಿಖೆ ಮುಂದುವರಿಸುವಂತೆ ಪ್ರತಾಪ್ ರೆಡ್ಡಿ ಅವರಿಗೆ ಸೂಚಿಸಲಾಗಿದೆ. ಗುರುವಾರ ತಾವು ಮೈಸೂರಿಗೆ ಭೇಟಿನೀಡಲಿದ್ದು, ಅಧಿಕಾರಿಗಳ ಸಭೆ ನಡೆಸಲಾಗುವುದು. ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.
‘ಮೈಸೂರು ಪ್ರವಾಸಿ ತಾಣ. ಅಲ್ಲಿ ಪದೇ ಪದೇ ಇಂತಹ ಘಟನೆಗಳು ನಡೆಯುವುದರಿಂದ ನಗರದ ಘನತೆಗೆ ಧಕ್ಕೆಯಾಗಲಿದೆ. ಈ ಮೊದಲು ಶೂಟೌಟ್ ನಡೆದಿತ್ತು. ಈಗ ಸಾಮೂಹಿಕ ಅತ್ಯಾಚಾರ ನಡೆದಿದೆ. ಇದೊಂದು ದುರಂತ. ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ’ ಎಂದರು.
ಆರ್‌ಎಸ್‌ಎಸ್ ಮತ್ತು ತಾಲಿಬಾನ್ ನಡುವೆ ಹೋಲಿಕೆ ಇದೆ ಎಂಬ ಕಾಂಗ್ರೆಸ್ ಮುಖಂಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದ ಬಳಿಕ ಕಾಂಗ್ರೆಸ್‌ನವರಿಗೆ ಕೆಲಸ ಇಲ್ಲವಾಗಿದೆ. ಹಾಗಾಗಿ ಹೀಗೆಲ್ಲ ಮಾತನಾಡುತ್ತಿದ್ದಾರೆ. ಆರ್‌ಎಸ್‌ಎಸ್ ಬಗ್ಗೆ ಅಧ್ಯಯನ ಮಾಡದೇ ಇರುವವರು ಈ ರೀತಿ ಹೇಳುತ್ತಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.